ಜಿಮ್‌ನಲ್ಲಿ ರಮ್ಯ ಕಸರತ್ತು.. ಮೋಹಕತಾರೆಯ ಸ್ಲಿಮ್ ಅವತಾರಕ್ಕೆ ಬೆರಗಾದ ಫ್ಯಾನ್ಸ್..!
ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯ ಅವರನ್ನ ಮತ್ತೆ ಬೆಳ್ಳಿತೆರೆಯ ಮೇಲೆ ನೋಡುವ ಹಂಬಲ ಅನೇಕರಲ್ಲಿದೆ. ರಮ್ಯಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು. ಈ ಕಾರಣಕ್ಕೆ ಕಾಲ.. ಕಾಲಕ್ಕೆ.. ಚಿತ್ರರಂಗಕ್ಕೆ ಮರಳಿ ಬರುವ ಮುನ್ಸೂಚನೆ ನೀಡ್ತಾನೇ ಬಂದಿದ್ದ ರಮ್ಯಾ, ಉತ್ತರಕಾಂಡ ಮೂಲಕ ಮರಳಿ ಬಂದರು ಕೂಡ. ಆದರೆ.. ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ಉತ್ತರಕಾಂಡದ ಕಥೆ ಎಲ್ಲಿಗೆ ಬಂದಿದೆ ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ಇನ್ನೂ ನಿಗೂಢ. ಹೀಗಿರುವಾಗಲೇ ರಮ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಹೃದಯಕ್ಕೆ ಕನ್ನ ಹಾಕಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಮ್ಯ ವರ್ಕ್ ಔಟ್ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡ್ತಿದ್ದರೆ ಯಾರಿಗೆ ಆದರೂ ಇದು ರಮ್ಯ ಉತ್ತರಕಾಂಡ ಚಿತ್ರಕ್ಕೆ ಮಾಡ್ತಿರುವ ಕಸರತ್ತು ಎಂಬ ಅನುಮಾನ ಮೂಡುವುದು ಸಹಜ. ರಮ್ಯ ಅಭಿಮಾನಿಗಳಿಗೆ ಇದೇ ಅನುಮಾನ ಸದ್ಯಕ್ಕೆ ಕಾಡ್ತಿದೆ. ಯಾಕೆಂದರೆ ಈ ಹಿಂದೆ ಅಂದರೆ ಉತ್ತರಕಾಂಡ ಚಿತ್ರದ ಮುಹೂರ್ತ ನೆರವೇರಿದಾಗ ಪಾತ್ರಕ್ಕೆ ಸಣ್ಣ ಆಗಬೇಕಿದೆ ಎಂಬ ಮಾತನ್ನ ರಮ್ಯ ಹೇಳಿದ್ದರು. ಹೀಗಾಗಿ ರಮ್ಯ ಅವತ್ತು ಆಡಿದ್ದ ಮಾತನ್ನ ಇಂದು ನೆನಪು ಮಾಡಿಕೊಳ್ತಿರುವ ಅಭಿಮಾನಿಗಳು ರಮ್ಯ ಅವರ ಈ ವಿಡಿಯೋ ಕೆಳಗೆ ಥರೇವಾರಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ ಮ್ಯಾಲಿಂದ ಫುಲ್ ಗುದ್ದಾಂ ಗುದ್ದಿ ಎನ್ನುತ್ತಿದ್ದಾರೆ.

ನಿಜಕ್ಕೂ ರಮ್ಯ ಉತ್ತರಕಾಂಡ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಕಸರತ್ತು ಮಾಡ್ತಿದ್ದಾರಾ ಅಥವಾ ಇದು ರಮ್ಯ ಅವರ ದೈನಂದಿನ ಚಟುವಟಿಕೆಯ ಭಾಗನಾ ಅನ್ನುವುದಕ್ಕೆ ಉತ್ತರ ಖುದ್ದು ರಮ್ಯಾ ಅವರೇ ಕೊಡಬೇಕಾದರೂ, ಸದ್ಯಕ್ಕೆ ರಮ್ಯ ಅವರ ಈ ವರ್ಕ್ ಔಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಂದ್ಹಾಗೇ ಉತ್ತರಕಾಂಡ ಚಿತ್ರದಲ್ಲಿ ಡಾ.ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ರೋಹಿತ್ ಪದಕಿ ನಿರ್ದೇಶನ ಇರುವ ಚಿತ್ರಕ್ಕೆ ಕೆ.ಆರ್.ಜಿ ಸ್ಟುಡಿಯೋಸ್ ಬಂಡವಾಳ ಹೂಡಲಿದೆ.


Click it and Unblock the Notifications











