»   » ಸರಳ ಸ್ನಿಗ್ಧ ಸುಂದರಿ ರಮ್ಯಕೃಷ್ಣ

ಸರಳ ಸ್ನಿಗ್ಧ ಸುಂದರಿ ರಮ್ಯಕೃಷ್ಣ

Subscribe to Filmibeat Kannada

* ಓಂಕಾರೇಶ್ವರ್‌

‘ಪಡೆಯಪ್ಪ’ ಚಿತ್ರದ ನೀಲಾಂಬರಿ ಪಾತ್ರದ ಅಭಿನಯಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ ಗಳಿಸಿರುವ ರಮ್ಯಕೃಷ್ಣ ‘ನೀಲಾಂಬರಿ’ ಎಂಬ ಕನ್ನಡ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. 102 ವರ್ಷದ ವೃದ್ಧೆಯೇ ಈ ಚಿತ್ರದ ನೈಜ ನಾಯಕಿ. ಆದರೂ ಚಿತ್ರದ ಗ್ಲಾಮರಸ್‌ ಹೀರೋಯಿನ್‌ ರಮ್ಯಕೃಷ್ಣ ಅವರೇ.

ರಮ್ಯಕೃಷ್ಣ ಇತ್ತೀಚೆಗಷ್ಟೇ ಕೇರಳದ ತ್ರಿಚ್ಚೂರಿನ ಚಾಲುಕ್ಕುಡಿ ಬಳಿಯ ವೆತ್ತಲಪಾರ ಜಲಪಾತದ ಬಳಿ ನಡೆದ ‘ನೀಲಾಂಬರಿ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸಂಜೆಯ ಮಬ್ಬುಗತ್ತಲಲ್ಲಿ ಬೆಟ್ಟವನ್ನು ಏರಿಳಿದು ಜಲಪಾತದ ಬಳಿ ಬರುವ ಮುನ್ನ ಪತ್ರಕರ್ತರಿಗೆ ಒಂದೈದು ನಿಮಿಷದ ಚಿಕ್ಕ ಸಂದರ್ಶನವನ್ನೂ ನೀಡಿದರು.

ಪ್ರಶ್ನೆ: ನಿಮ್ಮ ಚಿತ್ರಗಳ ಸಂಖ್ಯೆ ಎಷ್ಟು ?

ರಮ್ಯ : ತೆಲುಗು, ಕನ್ನಡ, ತಮಿಳು, ಹಿಂದಿ ಎಲ್ಲಾ ಸೇರಿದರೆ, ನನ್ನ ಚಿತ್ರಗಳ ಸಂಖ್ಯೆ ಇನ್ನೂರರ ಗಡಿಯಲ್ಲಿದೆ.

ಪ್ರಶ್ನೆ : ಕನ್ನಡ ಚಿತ್ರಗಳಲ್ಲಿನ ಅಭಿನಯದ ಅನುಭವ ಏನು?

ರಮ್ಯ : ನಾನು ಕನ್ನಡ ಚಿತ್ರಗಳಲ್ಲಿ ನಟಿಸೋದು ಕಮ್ಮಿ. ಒಳ್ಳೆಯ ಅವಕಾಶ ಇದ್ದರೆ ಮಾತ್ರ ಕನ್ನಡದಲ್ಲಿ ನಟಿಸುತ್ತೇನೆ.

ಪ್ರಶ್ನೆ : ಮಾ.9ರ ಶುಕ್ರವಾರ ಬಿಡುಗಡೆ ಆಗುವ ನಿಮ್ಮ ಅಭಿನಯದ ಆಂಧ್ರ ಹೆಂಡ್ತಿ ಬಗ್ಗೆ ಏನನ್ನಿಸಿತು.

ರಮ್ಯ : ಅದರ ಬಗ್ಗೆ ಮಾತನಾಡಬೇಡಿ (ಸಿಡಿಮಿಡಿಗೊಂಡರು). ನನಗೆ ವಿಪರೀತ ಬೇಸರವಾಗಿಬಿಟ್ಟಿದೆ. ಆ ಚಿತ್ರದಲ್ಲಿ ಅಭಿನಯಿಸಿದ್ದೇ ಎಂಬುದನ್ನೇ ಮರೆಯಬೇಕು ಎಂದುಕೊಂಡಿದ್ದೇನೆ. ಆ ಸಿನಿಮಾದ ನಾಯಕ, ನಿರ್ದೇಶಕ, ಕಥೆ ಯಾವುದೂ ನನಗೆ ಇಷ್ಟ ಆಗಲಿಲ್ಲ. ನಿರ್ದೇಶಕರ ವಿಷಯದಲ್ಲಿ ಬಾಬು ಅವರ ಹೆಸರಿನ ಕನ್‌ಫ್ಯೂಸ್‌ನಲ್ಲಿ ನಾನು ಚಿತ್ರದ ಕಾಂಟ್ರಾಕ್ಟ್‌ಗೆ ಸಹಿ ಹಾಕಿದೆ. ಸಹಿ ಮಾಡಿದ ತಪ್ಪಿಗೆ ಚಿತ್ರದಲ್ಲಿ ಅಭಿನಯಿಸಿದೆ.

ಪ್ರಶ್ನೆ : ಗ್ರಾಮದೇವತೆ ಚಿತ್ರದಲ್ಲಿ ಅಭಿನಯಿಸುತ್ತಿದ್ದೀರಾ?

ರಮ್ಯ : ಇಲ್ಲ ಗ್ರಾಮದೇವತೆ ಚಿತ್ರದಲ್ಲಿ ನಾನು ಅಭಿನಯಿಸುತ್ತಿಲ್ಲ. ಆ ಬಗ್ಗೆ ನನ್ನನ್ನು ಯಾರೂ ಅಪ್ರೋಚ್‌ ಮಾಡಿಲ್ಲ. ನನ್ನ ಹೆಸರನ್ನು ಚಿತ್ರದ ಪ್ರಚಾರಕ್ಕೆ ಬಳಿಸಿಕೊಳ್ಳುವುದು ತಪ್ಪು.

ಪ್ರಶ್ನೆ : ಅಭಿನಯದ ಹೊರತಾಗಿ ನಿಮ್ಮ ಇತರ ಹವ್ಯಾಸ ಏನು?

ರಮ್ಯ : ನನಗೆ ನಟಿಸುವುದರ ವಿನಾ ಮತ್ಯಾವ ಹವ್ಯಾಸವೂ ಇಲ್ಲ. ಸಮಾಜ ಸೇವೆ, ಸಾಮಾಜಿಕ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡಿಲ್ಲ. ನಟಿಸೋದೇ ನನ್ನ ಕೆಲಸ.

ಪ್ರಶ್ನೆ : ನೀವೇಕೆ ಕನ್ನಡದಲ್ಲಿ ಹೆಚ್ಚಿಗೆ ನಟಿಸಲ್ಲ ? ಸಂಭಾವನೆಯ ಸಮಸ್ಯೆಯೇ?

ರಮ್ಯ : ದುಡ್ಡಿಗಾಗಿ ನಾನು ನಟಿಸಲ್ಲ. ದುಡ್ಡೇ ಎಲ್ಲವೂ ಅಲ್ಲ. ಆದರೂ ದುಡ್ಡು ಬೇಕೇ ಬೇಕು. ಈಗಾಗಲೇ ತೆಲುಗು, ತಮಿಳು ಚಿತ್ರಗಳನ್ನು ಒಪ್ಪಿಕೊಂಡಿರೋದ್ರಿಂದ ಬಿಡುವಿಲ್ಲ. ನೀಲಾಂಬರಿ ಚಿತ್ರದ ಪಾತ್ರ ವಿಶಿಷ್ಟವಾಗಿತ್ತು ಒಪ್ಪಿಕೊಂಡೆ.

ಅಂದಹಾಗೆ, ರಮ್ಯಕೃಷ್ಣರ ಸರಳತೆಯನ್ನು ನೀಲಾಂಬರಿ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕರಿಸುಬ್ಬು ಬಾಯಿತುಂಬಾ ಕೊಂಡಾಡಿದ್ದಾರೆ. ರಮ್ಯಕೃಷ್ಣ ಒಬ್ಬರು ಮಹಾನ್‌ ತಾರೆ. ಆದರೂ ಅವರಿಗೆ ಪರ್ಸನಲ್‌ ಮೇಕಪ್‌ ಮ್ಯಾನ್‌ಇಲ್ಲ. ಲೊಕೇಷನ್‌ಗೆ ಕಾರಿನಲ್ಲಿ ಬರುವಾಗಲೇ ಮೇಕಪ್‌ ಮಾಡಿಕೊಂಡು ಬರುತ್ತಾರೆ. ಸುಬ್ಬು ಹೇಳಿದಂತೆಯೇ ನಿಲಾಂಬರಿ ಚಿತ್ರೀಕರಣ ತಾಣಕ್ಕೆ ರಮ್ಯ ಮೇಕಪ್‌ ಮಾಡಿಕೊಂಡೇ ಕಾರಿನಲ್ಲಿ ಬಂದಿಳಿದರು.

ಚೋಲೀಕೆ ಪೀಚೆ ಕ್ಯಾಹೇ ಗೀತೆಯ ಮೂಲಕ ಭಾರಿ ಸುದ್ದಿ ಮಾಡಿದ್ದ ಹಿಂದಿಯ ‘ಖಳನಾಯಕ್‌’ ಚಿತ್ರದಲ್ಲಿ ನಾಯಕ್‌ ನಹೀ ಖಳನಾಯಕ್‌ಹೇ ತೂ.... ಗೀತೆಯಲ್ಲಿ ಮನಮೋಹಕವಾಗಿ ನರ್ತಿಸಿದ ರಮ್ಯ ಹದಿಹರೆಯದ ಹುಡುಗರ ಹೃದಯಕ್ಕೇ ಲಗ್ಗೆ ಇಟ್ಟಿದ್ದರು. ಕ್ರಿಮಿನಲ್‌ ಚಿತ್ರದಲ್ಲಿ ತ್ಯಾಗಮಯೀ ಪಾತ್ರ ನಿರ್ವಹಿಸಿದ್ದ ರಮ್ಯ ಇತ್ತೀಚಿನ ಹಲವು ತೆಲುಗು - ತಮಿಳು ಚಿತ್ರಗಳಲ್ಲಿ ದೇವತೆಯ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

ಆದರೆ, ‘ಪರಂಪರಾ’ ಚಿತ್ರದಲ್ಲಿನ ಚುಂಬನದ ದೃಶ್ಯಗಳಲ್ಲಂತೂ ಬಿಡುಬೀಸಾಗಿ ನಟಿಸಿದ್ದರು. ಆದರೂ ರಮ್ಯ ಹಿಂದಿ ಚಿತ್ರರಂಗದಲ್ಲಿ ತಳವೂರಲಾರದಾದರು. ಸರಿಸುಮಾರು 200 ಚಿತ್ರಗಳಲ್ಲಿ ನಟಿಸಿದ್ದರೂ ರಮ್ಯಕೃಷ್ಣರಿಗೆ ನಂ1, ನಂ 2 ಸ್ಥಾನ ಗಳಿಸಬೇಕು ಎಂಬ ಆಕಾಂಕ್ಷೆ ಇಲ್ಲ. ತಮಗೆ ದೊರೆತ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದಷ್ಟೇ ತಮ್ಮ ಕೆಲಸ ಎಂದು ನಂಬಿರುವ ಈ ನಟಿ ‘ಕೃಷ್ಣ ರುಕ್ಮಿಣಿ’ ಚಿತ್ರದಲ್ಲಿ ವಿಷ್ಣುವರ್ಧನ್‌ ಜತೆ ನಟಿಸಿ, ಕನ್ನಡ ಚಿತ್ರರಸಿಕರ ಮನ ಗೆದ್ದಿದ್ದರು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada