'ಅಜ್ಞಾತವಾಸಿ' ಗೆಲುವು ಖುಷಿ ತಂದಿದೆ, ಆದ್ರೆ ಮತ್ತೆ ಅಂಥದ್ದೇ ಪಾತ್ರ ಮಾಡಲ್ಲ"; ರಂಗಾಯಣ ರಘು

ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಕ್ರೈಂ ಥ್ರಿಲ್ಲರ್ 'ಅಜ್ಞಾತವಾಸಿ' ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟ ರಂಗಾಯಣ ರಘು ಪ್ರತಿಕ್ರಿಯಿಸಿ ಸಂತಸ ಹಂಚಿಕೊಂಡಿದ್ದಾರೆ.

ಇನ್ಸ್‌ಪೆಕ್ಟರ್ ಗೋವಿಂದು ಆಗಿ ರಂಗಾಯಣ ರಘು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸಾಗುತ್ತದೆ. ಹೇಮಂತ್ ರಾವ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಈ ಹಿಂದೆ ಬಂದಿದ್ದ ಮರ್ಡರ್ ಮಿಸ್ಟರಿ 'ಶಾಖಾಹಾರಿ' ಚಿತ್ರದ ಲೀಡ್ ರೋಲ್‌ನಲ್ಲಿ ಕೂಡ ರಂಗಾಯಣ ರಘು ನಟಿಸಿದ್ದರು. ಆ ಚಿತ್ರಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಓಟಿಟಿಗೆ ಬಂದಮೇಲೆ ಹೆಚ್ಚು ಜನರನ್ನು ತಲುಪಿತ್ತು.

Rangayana Raghu is happy as Agnyathavasi gets praise on OTT says he won t do a similar role again

ಈ ಹಿಂದೆ 'ಗುಲ್ಟು' ಹಾಗೂ 'ಪೌಡರ್' ಎಂಬ ವಿಭಿನ್ನ ಸಿನಿಮಾಗಳನ್ನು ಜನಾರ್ಧನ್ ಚಿಕ್ಕಣ್ಣ ಕಟ್ಟಿಕೊಟ್ಟಿದ್ದರು. 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರಕ್ಕೆ ಬರಹಗಾರರಾಗಿ ಕೆಲಸ ಮಾಡಿದ ಬಂಡವಾಳ ಸಹ ಹೂಡಿದ್ದರು. ಇದೀಗ 'ಅಜ್ಞಾತವಾಸಿ' ಚಿತ್ರದಿಂದ ಮತ್ತೆ ಅವರು ಸುದ್ದಿಯಲ್ಲಿದ್ದಾರೆ. ಏಪ್ರಿಲ್ 11ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಹೆಚ್ಚು ಪ್ರಚಾರ ಇಲ್ಲದೇ ಕಡಿಮೆ ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ನೋಡಿದವರು ಮೆಚ್ಚಿಕೊಂಡಾಡಿದ್ದರು. ಕೆಲವರು ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದರು.

ಕಳೆದ ಎರಡು ದಿನಗಳಿಂದ ಜೀ5ನಲ್ಲಿ 'ಅಜ್ಞಾತವಾಸಿ' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ನೋಡಿರುವವರು ಕೂಡ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಯಶಸ್ಸು ಗಳಿಸಿ ಈಗ ಓಟಿಟಿಯಲ್ಲಿ ಕೂಡ ನೋಡಿ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಗ್ಗೆ ನಟ ರಂಗಾಯಣ ರಘು ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

"'ಅಜ್ಞಾತವಾಸಿ' ಸಿನಿಮಾ ಒಳ್ಳೆ ಹೆಸರು ಮಾಡಿದೆ. ಬಹಳ ಖುಷಿಯಾಗಿದೆ. ಈಗ ಓಟಿಟಿ ಟ್ರೆಂಡ್, ಮನೆಯಲ್ಲೇ ಜನ ಸಿನಿಮಾ ನೋಡುತ್ತಿದ್ದಾರೆ. ನನಗೂ ಸಾಕಷ್ಟು ಜನ ಕರೆ ಮಾಡಿ ಹೇಳಿದರು. ಇತ್ತೀಚೆಗೆ ಕೊಳ್ಳೆಗಾಲಕ್ಕೆ ಹೋಗಿದ್ದೆ. ಅಲ್ಲೆಲ್ಲಾ ಜನ ಓಟಿಟಿಯಲ್ಲಿ ನೋಡಿದ್ದಾರೆ. ಸಿಟಿಯಲ್ಲಿ ಮಾತ್ರ ಓಟಿಟಿ ಎಂದುಕೊಂಡಿದ್ದೆವು. ಆದರೆ ಅಲ್ಲಿಯೂ ನೋಡಿ ಮೆಚ್ಚಿಕೊಂಡಿದ್ದಾರೆ. ಬೇರೆ ತರಹದ ಸಿನಿಮಾ ಎನ್ನುತ್ತಿದ್ದಾರೆ. ಖುಷಿಯಾಗ್ತಿದೆ" ಎಂದು ರಂಗಾಯಣ ರಘು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕಲಾವಿದರು ಒಂದು ತರಹದ ಚಿತ್ರಗಳಲ್ಲಿ ನಟಿಸಿದರೆ ಮತ್ತೆ ಮತ್ತೆ ಅಂತಹ ಪಾತ್ರಗಳೇ ಹುಡುಕಿ ಬರುತ್ತವೆ. ಆದರೆ ಮತ್ತೆ ಇಂತಹ ಸಿನಿಮಾ ಮಾಡಲ್ಲ ಎಂದು ರಂಗಾಯಣ ರಘು ಹೇಳಿದ್ದಾರೆ. "ಶಾಖಾಹಾರಿ ಬೇರೆ ತರಹದ ಸಿನಿಮಾ. ಇದು ಬೇರೆ ತರಹದ ಸಿನಿಮಾ. ಜರ್ನಾಧನ್ ಚಿಕ್ಕಣ್ಣ ಒಳ್ಳೆ ಕಥೆ ಮಾಡಿದ್ದಾರೆ, ಹೇಮಂತ್ ರಾವ್ ಸಹ ನಿರ್ದೇಶಕರು. ಇಬ್ಬರೂ ಸೇರಿ ಕಥೆ ಕಥೆ ಮಾಡಿದ್ದಾರೆ. ಅವರಿಬ್ಬರು ಸೇರಿದಾಗಲೇ ಖುಷಿಯಾಗಿತ್ತು. ರವಿಶಂಕರ್ ಗೌಡ, ಪಾವನಾ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಸದ್ಯಕ್ಕೆ ಇಂತಹ ಯಾವುದೇ ಸಿನಿಮಾ ಇಲ್ಲ, ಮತ್ತೆ ಯಾಕೆ ಇಂತಹದ್ದೇ ಮಾಡಲಿ, ಮತ್ತೆ ಇಂತಹ ಸಿನಿಮಾ ಮಾಡಿ ಎಂದು ಯಾರಾದರೂ ಕೇಳಿದರೆ ಇಲ್ಲ, ಬೇರೆಯವರ ಬಳಿ ಮಾಡಿಸಿಕೊಳ್ಳಿ ಎನ್ನುತ್ತೇನೆ" ಎಂದಿದ್ದಾರೆ.

ತುಮಕೂರಿನ ಕೊತ್ತೂರು ಗ್ರಾಮದಲ್ಲಿ ಹುಟ್ಟಿ ಬೆಳೆದ ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಮುಂದೆ ರಂಗಾಯಣ ಸೇರಿದ್ದರು. ಅಲ್ಲಿ ನಟನೆಯ ಪಟ್ಟುಗಳನ್ನು ಕಲಿತರು. ಚಿತ್ರರಂಗದಲ್ಲಿ ರಂಗಾಯಣ ರಘು ಎಂದೇ ಜನಪ್ರಿಯರಾದರು. 'ಭೂಮಿ ತಾಯಿಯ ಚೊಚ್ಚಲ ಮಗ' ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಮುಂದೆ 'ಧಮ್', 'ಮಣಿ', 'ರಂಗ ಎಸ್‌ಎಸ್‌ಎಲ್‌ಸಿ' ರೀತಿಯ ಚಿತ್ರಗಳು ಒಳ್ಳೆ ಹೆಸರು ತಂದುಕೊಟ್ಟಿತ್ತು. 2007ರಲ್ಲಿ ಬಂದ ದುನಿಯಾ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿದ್ದು ಗೊತ್ತೇಯಿದೆ. ಬಳಿಕ ಹಿಂತಿರುಗಿ ನೋಡಲೇಯಿಲ್ಲ.

ನೂರಾರು ಸಿನಿಮಾಗಳಲ್ಲಿ ನಟಿಸಿರುವ ರಂಗಾಯಣ ರಘು ರಾಜ್ಯಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪೋಷಕ ಪಾತ್ರಗಳಲ್ಲಿ ಮಾತ್ರವಲ್ಲದೇ ಹಾಸ್ಯ ಪಾತ್ರಗಳಲ್ಲಿ ಹಾಗೂ ಖಳನಾಯಕನ ಪಾತ್ರಗಳಲ್ಲಿ ಕೂಡ ಹೆಚ್ಚು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಬಹುತೇಕ ಎಲ್ಲಾ ಜನಪ್ರಿಯ ನಟ, ನಟಿಯರು ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂನಿಂದ ಪಾತ್ರಗಳಿಗೆ ರಘು ಹೊಸ ರೂಪ ಕೊಡುತ್ತಾರೆ. ಗಂಭೀರ ಪಾತ್ರಗಳಲ್ಲಿ ಸಹ ನಟಿಸಿ ಗೆದ್ದಿದ್ದಾರೆ.

ಸಂದೀಪ್ ಸುಂಕದ್ ನಿರ್ದೇಶನದ 'ಶಾಖಾಹಾರಿ' ರಂಗಾಯಣ ರಘು ಅವರ ಅದ್ಭುತ ಪ್ರತಿಭೆಗೆ ಕನ್ನಡಿ ಹಿಡಿದಿತ್ತು. ಚಿತ್ರದಲ್ಲಿ ಸುಬ್ಬಣ್ಣ ಭಟ್ಟನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಇದೀಗ 'ಅಜ್ಞಾತವಾಸಿ' ಸಿನಿಮಾ ಕೂಡ ಎಲ್ಲರ ಮೆಚ್ಚುಗೆ ಗಳಿಸಿದೆ. ಹೀಗೆ ವಿಭಿನ್ನ ಪಾತ್ರಗಳಲ್ಲಿ ಅವರನ್ನು ನೋಡಲು ಕನ್ನಡ ಸಿನಿರಸಿಕರು ಬಯಸುತ್ತಿದ್ದಾರೆ. ಮುಂದೆ ಮತ್ತಷ್ಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

More from Filmibeat

English summary
Rangayana Raghu on global appreciation of Agnyathavasi on Zee5
Read more about: rangayana raghu ott sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X