'ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!
ವಿಭಿನ್ನ ಕಥಾ ಹಂದರವನ್ನು ಹೊಂದಿದ್ದ ಹೊಸಬರ 'ರಂಗಿತರಂಗ' ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿ ಮಾಡಿತ್ತು. ರಾತ್ರಿ ಬೆಳಗಾಗುವುದರೊಳಗೆ ಚಿತ್ರದ ನಿರ್ದೇಶಕ ಅನುಪ್ ಭಂಡಾರಿ, ನಾಯಕ ನಿರುಪ್ ಭಂಡಾರಿ, ನಾಯಕಿಯರಾದ ಅವಂತಿಕಾ ಶೆಟ್ಟಿ ಮತ್ತು ರಾಧಿಕಾ ಚೇತನ್ ಅವರು ಸ್ಟಾರ್ ಆದ್ರು, ಅನ್ನೋ ಸಂಗತಿ ನಿಮಗೆ ತಿಳಿದೇ ಇದೆ ಅಲ್ವಾ.
ನಟಿ ಅವಂತಿಕಾ ಶೆಟ್ಟಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ನಿಮಗೆ ನಾವೇ ಹೇಳಿದ್ವಿ ಅಲ್ವಾ?. ಇದೀಗ 'ರಂಗಿತರಂಗ' ಚಿತ್ರದ ಮತ್ತೋರ್ವ ನಟಿ ರಾಧಿಕಾ ಚೇತನ್ ಅವರು 'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಅವರ 'ಯೂ ಟರ್ನ್' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಕಥಕ್ ಡ್ಯಾನ್ಸರ್ ನಟಿ ರಾಧಿಕಾ ಚೇತನ್ ಅವರ ಜೊತೆ ಇನ್ನೊಬ್ಬ ಹೊಸ ನಾಯಕಿ ಶ್ರದ್ಧಾ ಶ್ರೀನಿವಾಸ್ ಅವರು 'ಯೂ-ಟರ್ನ್' ಚಿತ್ರದಲ್ಲಿ ಮಿಂಚುತ್ತಿದ್ದಾರೆ.
ರಂಗಭೂಮಿ ಹಿನ್ನಲೆ ಇರುವ ಈ ಪ್ರತಿಭಾವಂತ ನಟಿ ರಾಧಿಕಾ ಚೇತನ್ ಅವರು 'ಯೂ-ಟರ್ನ್' ಚಿತ್ರದಲ್ಲಿ ಸಖತ್ತಾಗಿ ನಟಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಅಂತೂ ಇಂತೂ ಸೈಲೆಂಟಾಗಿ ಕಥಕ್ ನೃತ್ಯಗಾತಿ ರಾಧಿಕಾ ಚೇತನ್ ಅವರು 'ಯೂ-ಟರ್ನ್' ತೆಗೆದುಕೊಂಡಿದ್ದಾರೆ.

'ರಂಗಿತರಂಗ' ಚಿತ್ರದ ನಂತರ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ರಾಧಿಕಾ ಚೇತನ್ ಅವರು ಮತ್ತೊಮ್ಮೆ ತೆರೆ ಮೇಲೆ ಮಿಂಚುತ್ತಿರುವುದರಿಂದ, ಅಭಿಮಾನಿಗಳ ಸಂತಸ ಇಮ್ಮಡಿಯಾದಂತಾಗಿದೆ.


Click it and Unblock the Notifications











