ಕಿರಿಕ್ ಮಾಡಿಕೊಂಡು 'ಶನಿ' ಧಾರಾವಾಹಿಯಿಂದ ಹೊರಬಂದ 'ಸೂರ್ಯದೇವ'
Recommended Video

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶನಿ' ಧಾರಾವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ಫೆವರೇಟ್. ಈ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳು ಅದ್ಭುತ. ಶನಿ, ಸೂರ್ಯದೇವ, ಇಂದ್ರ, ಕಾಕರಾಜ, ಮಹಾದೇವ ಹೀಗೆ ಎಲ್ಲರೂ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಹೀಗೆ ತೆರೆಮೇಲೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶನಿ ಈಗ ತೆರೆಹಿಂದೆ ವಿವಾದಕ್ಕೆ ಗುರಿಯಾಗಿದೆ. ಸೂರ್ಯದೇವ ಪಾತ್ರಧಾರಿ ರಂಜಿತ್ ಕುಮಾರ್ ಶನಿ ಧಾರಾವಾಹಿಯಿಂದ ಹೊರಬಂದಿದ್ದಾರೆ.
ಸಂಭಾವನೆ ವಿಚಾರದಲ್ಲಿ ಧಾರಾವಾಹಿ ತಂಡದ ಜೊತೆ ಮನಸ್ತಾಪ ಉಂಟಾಗಿದ್ದು, ವ್ಯವಹಾರದಲ್ಲಿ ನನಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ, ಇನ್ಮುಂದೆ ಶನಿ ಧಾರಾವಾಹಿಯಲ್ಲಿ ಸೂರ್ಯದೇವ ಕಾಣಿಸಲ್ಲ. ಅಷ್ಟಕ್ಕೂ, ಏನಿದು ಶನಿ ಧಾರಾವಾಹಿಯ ವಿವಾದ.? ಮುಂದೆ ಓದಿ....

ಸಂಭಾವನೆ ಕೊಟ್ಟಿಲ್ವಂತೆ
ಸೂರ್ಯದೇವ ರಂಜಿತ್ ಕುಮಾರ್ ಹೇಳುವ ಪ್ರಕಾರ, ಶನಿ ಧಾರಾವಾಹಿಯಲ್ಲಿ ಈಗಿರುವ ಪಾತ್ರಗಳು ಬದಲಾಗಬೇಕಿತ್ತು. ಚಿಕ್ಕ ವಯಸ್ಸಿನ ಪಾತ್ರಧಾರಿಗಳು ದೊಡ್ಡವರಾಗಲಿದ್ದು, ಎಲ್ಲವೂ ಬದಲಾಗಬೇಕಿತ್ತು. ಈ ಹಿನ್ನೆಲೆ ನಮ್ಮ ಭಾಗದ ಶೂಟಿಂಗ್ ಆಗಸ್ಟ್ ತಿಂಗಳಲ್ಲೇ ಮುಗಿದಿದೆ. ಬಟ್, ನನಗೆ ಬರಬೇಕಾದ ಸಂಭಾವನೆ ಮಾತ್ರ ನನಗೆ ಕೊಡುತ್ತಿಲ್ಲ ಎನ್ನುತ್ತಿದ್ದಾರೆ.

ಎರಡು ತಿಂಗಳ ಸಂಭಾವನೆ ಕೊಡಬೇಕು
ನನ್ನ ಜೊತೆ ಸನ್ಯಾ ದೇವಿ, ಶುಕ್ಲಾಚಾರ್ಯ, ಇಂದ್ರ ಪಾತ್ರಗಳು ತಿಂಗಳ ಸಂಭಾವನೆ ಲೆಕ್ಕಾಚಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆ ಎರಡು ತಿಂಗಳ ಸಂಭಾವನೆ ಕೊಟ್ಟಿಲ್ಲ. ಆದ್ರೆ, ಎರಡು ತಿಂಗಳ ಎಪಿಸೋಡ್ ಶೂಟ್ ಮಾಡಿಕೊಟ್ಟಿದ್ದೇವೆ. ಈಗ ಅದು ಪ್ರಸಾರ ಕೂಡ ಆಗ್ತಿದೆ. ಕೇಳಿದ್ರೆ, ಕೊಡೋಕೆ ಆಗಲ್ಲ ಎನ್ನುತ್ತಿದ್ದಾರೆ ಎಂದು ಪ್ರೊಡಕ್ಷನ್ ತಂಡದ ಮೇಲೆ ಆರೋಪ ಮಾಡಿದ್ದಾರೆ.

ನಿರ್ದೇಶಕ ರಾಘವೇಂದ್ರ ಹೆಗ್ಡೆ ಏನಂದ್ರು
ನಾನು ಈ ಧಾರಾವಾಹಿಯಲ್ಲಿ ನಿರ್ದೇಶಕ ಮತ್ತು ಕ್ರಿಯೆಟೀವ್ ಹೆಡ್ ಆಗಿ ಕೆಲಸ ಮಾಡ್ತಿದ್ದೀನಿ. ಇದು ನಿರ್ಮಾಪಕರ ಜೊತೆ ಮಾತನಾಡಬೇಕು. ನನ್ನ ಗಮನಕ್ಕೂ ಬಂದಿದೆ. ಆದ್ರೆ, ಈ ಬಗ್ಗೆ ಅವರು ಮಾತನಾಡಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ಹೆಗ್ಡೆ ತಿಳಿಸಿದ್ದಾರೆ.

ಸೂರ್ಯದೇವ ಬದಲಾಗ್ತಾರೆ
ಸದ್ಯ, ರಂಜಿತ್ ಕುಮಾರ್ ಅವರ ಈ ಹಿಂದೆ ಮಾಡಿರುವ ಚಿತ್ರೀಕರಣದ ಭಾಗಗಳು ಈಗ ಪ್ರಸಾರವಾಗ್ತಿದೆ. ಈಗಾಗಲೇ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸೂರ್ಯದೇವನ ಪಾತ್ರದಲ್ಲಿ ರಂಜಿತ್ ಕುಮಾರ್ ಇರಲ್ಲ. ಬಹುಶಃ ಬೇರೆ ಯಾರಾದರೂ ಕಲಾವಿದ ಆ ಜಾಗಕ್ಕೆ ಬರಬಹುದು.


Click it and Unblock the Notifications











