ರಣ್‌ವೀರ್ ದೈವಕ್ಕೆ ಅಪಮಾನ ಮಾಡಿದಾಗ ರಿಷಬ್ ನಕ್ಕಿದ್ರಾ? ಅಸಲಿ ಮ್ಯಾಟ್ರು ಇಲ್ಲಿದೆ ನೋಡಿ
ಬಾಲಿವುಡ್ ಕಲಾವಿದರು ಕೆಲವೊಮ್ಮೆ ವೇದಿಕೆಗಳಲ್ಲಿ ಹುಚ್ಚಾಟ ಮೆರೆಯುತ್ತಾರೆ. ತಮಾಷೆ ಮಾಡುವ ಭರದಲ್ಲಿ ಅಚಾತುರ್ಯ ಮಾಡಿ ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟ ರಣ್‌ವೀರ್ ಸಿಂಗ್ 'ಕಾಂತಾರ-1' ಚಿತ್ರದ ಬಗ್ಗೆ ಮಾತನಾಡಿದ್ದರು. ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಣ್‌ವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ದೈವಾರಾಧಕರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಣ್‌ವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು ಎಂದು ತುಳುನಾಡ ದೈವಾರಾದನೆ ರಕ್ಷಣಾ ಚಾವಡಿ ಸಂಚಾಲಕ ಕಮಲಾಕ್ಷ ಗಂಧಕಾಡು ಆಗ್ರಹಿಸಿದ್ದಾರೆ. ರಣ್‌ವೀರ್ ಆ ರೀತಿ ಆಡುವಾಗ ರಿಷಬ್ ನಗುತ್ತಿದ್ದರು ಎಂದು ಕೆಲವರು ಆರೋಪಿಸಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಘಟನೆ ನಡೆದಿತ್ತು. ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ರಣ್‌ವೀರ್ ಸಿಂಗ್ 'ಕಾಂತಾರ-1' ಚಿತ್ರವನ್ನು ರಿಷಬ್ ನಟನೆಯನ್ನು ಕೊಂಡಾಡಿದ್ದರು. ಚಿತ್ರದಲ್ಲಿ ರಿಷಬ್ ಹೇಗೆ ನಟಿಸಿದ್ದಾರೆ ಎಂದು ಅನುಕರಣೆ ಮಾಡಿ ತೋರಿಸಿದ್ದಾರೆ. ಅದಕ್ಕೆ ರಿಷಬ್ ಶೆಟ್ಟಿ ನಗುತ್ತಿರುವಂತೆ ವೀಡಿಯೋ ಎಡಿಟ್ ಮಾಡಿರುವಂತೆ ಕಾಣ್ತಿದೆ. ರಣ್‌ವೀರ್ ಹುಚ್ಚಾಟ ಕಂಡು ರಿಷಬ್ ನಗುತ್ತಿರುವಂತೆ ವೀಡಿಯೋದಲ್ಲಿ ಕಾಣುತ್ತಿದೆ. ಆದರೆ ಬೇರೆ ಸಮಯದಲ್ಲಿ ರಿಷಬ್ ನಕ್ಕಿರುವುದನ್ನು ಆ ಸಂದರ್ಭಕ್ಕೆ ಸಿಂಕ್ ಮಾಡಿ ವೀಡಿಯೋ ತೇಲಿಬಿಟ್ಟಿರುವಂತೆ ಕಾಣುತ್ತಿದೆ.
ಕಾರ್ಯಕ್ರಮದಲ್ಲಿ ಆ ರೀತಿ ದೈವವನ್ನು ಅನುಕರಣೆ ಮಾಡಬೇಡಿ ಎಂದು ರಣ್‌ವೀರ್ ಸಿಂಗ್‌ಗೆ ರಿಷಬ್ ತಾಕೀತು ಮಾಡಿರುವುದು ಮತ್ತೊಂದು ವೀಡಿಯೋದಲ್ಲಿ ಗೊತ್ತಾಗುತ್ತಿದೆ. ವೇದಿಕೆ ಮೇಲೆ ಈ ರೀತಿ ವರ್ತಿಸಿದ ರಣ್‌ವೀರ್ ಬಳಿಕ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ರಿಷಬ್ ಶೆಟ್ಟಿ ಬಳಿ ಬಂದು ಮತ್ತೆ ದೈವದ ಅನುಕರಣೆ ಮಾಡಿದ್ದಾರೆ. ಕೂಡಲೇ ರಿಷಬ್ ನೋ ನೋ ಎಂದು ಹೇಳಿರುವುದು ಈ ವೀಡಿಯೋದಲ್ಲಿ ಗೊತ್ತಾಗುತ್ತಿಲ್ಲ. ಇದು ಸಾಕಾಗಲ್ಲ, ರಿಷಬ್ ವೇದಿಕೆಗೆ ಹೋಗಿ ಇದನ್ನು ಸರಿಪಡಿಸಬೇಕಿತ್ತು ಎಂದು ಕೆಲವರು ಹೇಳುತ್ತಿದ್ದಾರೆ.
ದೈವವನ್ನು ಯಾರೂ ಕೂಡ ಅನುಕರಣೆ ಮಾಡಬೇಡಿ, ಇದರಿಂದ ನನಗೆ ಹಾಗೂ ಭಕ್ತರಿಗೆ ಬೇಸರವಾಗುತ್ತದೆ ಎಂದು ರಿಷಬ್ ಶೆಟ್ಟಿ ಈ ಹಿಂದೆ ಸಾಕಷ್ಟು ಬಾರಿ ಮನವಿ ಮಾಡುತ್ತಾ ಬರುತ್ತಿದ್ದಾರೆ. ಆದರೆ ವೇದಿಕೆಯಲ್ಲಿ ನಟ ರಣ್‌ವೀರ್ ಸಿಂಗ್ ಈ ರೀತಿ ಮಾಡಿದ್ದು ಭಾರೀ ಚರ್ಚೆಗೆ ಹುಟ್ಟಾಕ್ಕಿದೆ. "ಕಾಂತಾರ ಚಿತ್ರದಲ್ಲಿ ರಿಷಬ್ ನಟನೆಗೆ ಮೆಚ್ಚಿಕೊಳ್ಳಲೇಬೇಕು. ಚಿತ್ರಮಂದಿರದಲ್ಲೇ ರಿಷಬ್ ನಟನೆ ನೋಡಿದೆ. ನಿಮ್ಮ ದೇಹದಲ್ಲಿ ಹೆಣ್ಣು ದೆವ್ವ ಹೊಕ್ಕ ಸನ್ನಿವೇಶದಲ್ಲಿ ಅದ್ಭುತವಾಗಿ ನಟಿಸಿದ್ದೀರಿ. ಅದನ್ನು ನೋಡಿದ್ದೀರಾ ಎಂದು ಕೇಳಿದ್ದಾರೆ. ಈ ವೇಳೆ ರಣ್‌ವೀರ್ ನಾಲಿಗೆ ಹೊರಚಾಚಿ ಕಣ್ಣುಗಳನ್ನು ತಿರುಗಿಸಿ ದೈವದ ಅನುಕರಣೆ ಮಾಡಿದ್ದಾರೆ. ಮುಂದುವರೆದು "ನನ್ನನ್ನು 'ಕಾಂತಾರ-3' ಚಿತ್ರದಲ್ಲಿ ನೋಡಲು ಬಯಸುತ್ತೀರಾ? ದಯವಿಟ್ಟು ಹೇಳಿ ರಿಷಬ್" ಎಂದಿದ್ದರು.
3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಕರಾವಳಿ ದೈವಗಳ ಕಥೆಯನ್ನು ಚಿತ್ರದಲ್ಲಿ ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದರು. ಆ ಸಮಯದಲ್ಲೇ ಕೆಲವರು ದೈವದ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದ್ದು ನಿಜ. ಪ್ರೀಕ್ವೆಲ್ ಮಾಡಬಾರದು ಎಂದು ಕೆಲವರು ಆಗ್ರಹಿಸಿದ್ದರು. ಆದರೆ ರಿಷಬ್ ಶೆಟ್ಟಿ ಮಾತ್ರ ಚಿತ್ರದಲ್ಲಿ ದೈವಗಳ ವಿಚಾರವನ್ನು ಸೊಗಸಾಗಿ ತೆರೆಮೇಲೆ ತಂದಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ 800 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಆದರೆ ಮತ್ತೆ ದೈವಗಳ ಅನುಕರಣೆ ಮಾಡಿ ಕೆಲವರು ಹುಚ್ಚಾಟ ಮೆರೆಯುತ್ತಿದ್ದಾರೆ. ಇನ್ನಾದರೂ ಇದು ಕಮ್ಮಿ ಆಗಬೇಕು.


Click it and Unblock the Notifications











