ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತನಾಡಲು ರಶ್ಮಿಕಾ ತಿಣುಕಾಟ; ವೃಕ್ಷಮಾತೆ ಸಾಧನೆ ಕೊಂಡಾಡಿದ್ದ ವಿವೇಕ್
ಪದ್ಮ ಪ್ರಶಸ್ತಿ ಪುರಸ್ಕೃತೆ ನಾಡುಕಂಡ ಅಪರೂಪದ ಸಾಧಕಿ ಸಾಲುಮರದ ತಿಮ್ಮಕ್ಕ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃಕ್ಷಮಾತೆಯನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು(ನವೆಂಬರ್ 14) ಅವರು ನಿಧನರಾಗಿದ್ದಾರೆ.
ಸಾಲುಮರದ ತಿಮ್ಮಕ್ಕನ ಅಗಲಿಕೆಗೆ ಗಣ್ಯರು, ಸಿನಿಮಾ ತಾರೆಯರು, ಅಭಿಮಾನಿಗಳು, ರಾಜಕೀಯ ಮುಖಂಡರು ಸಂತಾಪ ಸೂಚಿಸುತ್ತಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು. ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಮಕ್ಕಳಂತೆ ಭಾವಿಸಿ ಬೆಳೆಸಿ ಪರಸರಕ್ಕೆ ಕೊಡುಗೆ ಕೊಟ್ಟುವರು ಸಾಲು ಮರದ ತಿಮ್ಮಕ್ಕ. ಕೆಲ ವರ್ಷಗಳ ಹಿಂದೆ ತಿಮ್ಮಕ್ಕನ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ತಡಬಡಾಯಿಸಿದ್ದರು.

2019ರ ಜೆಎಫ್‌ಡಬ್ಲು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಆಗಷ್ಟೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಹ ಭಾಗಿ ಆಗಿದ್ದರು. ತಿಮ್ಮಕ್ಕ ಕನ್ನಡದಲ್ಲಿ ಮಾತನಾಡುವುದನ್ನು ಅನುವಾದ ಮಾಡಲು ಕೊಡಗಿನ ಕುವರಿ ವೇದಿಕೆಗೆ ಏರಿದ್ದರು. ಇದೇ ವೇಳೆ ತಿಮ್ಮಕ್ಕ ಬಗ್ಗೆ ಪರಿಚಯ ಮಾಡಿಕೊಡಲು ಹೇಳಿದಾಗ ರಶ್ಮಿಕಾ ತಡಬಡಾಯಿಸಿದ್ದರು.
ಅಂದು ಸಾಲು ಮರದ ತಿಮ್ಮಕ್ಕ ಅವರನ್ನು ತಮಿಳು ನಟ, ಪರಸರವಾದಿ ವಿವೇಕ್ ಸನ್ಮಾನಿಸಿದ್ದರು. ಆಕೆಯ ಕಾಲಿಗೆ ಎರಗಿ ನಮಸ್ಕರಿಸಿದ್ದರು. ರಶ್ಮಿಕಾ ವೇದಿಕೆ ಏರಿ ತಿಮ್ಮಕ್ಕನ ಬಗ್ಗೆ ಮಾತನಾಡಲು ತಿಣುಕಾಡುತ್ತಿದ್ದಾಗ ವಿವೇಕ್ ಕೂಡಲೇ ತಮಿಳಿನಲ್ಲಿ ತಿಮ್ಮಕ್ಕನ ಸಾಧನೆ ಕೊಂಡಾಡಿದ್ದರು. "ಮದುವೆಯಾಗಿ ಬಹಳ ವರ್ಷ ಮಕ್ಕಳಾಗದ ಕಾರಣ ತಾನು ನೆಟ್ಟು ಬೆಳೆಸುವ ಗಿಡ ಮರಗಳನ್ನೇ ಮಕ್ಕಳನ್ನು ಭಾವಿಸಿ ಪೋಷಿಸಿದರು. 1911ರಲ್ಲಿ ಜನಿಸಿದ ಅವರಿಗೆ ಈಗ 108 ವರ್ಷ" ಎಂದು ಹೇಳುತ್ತಾ ಹೋದರು.
ಮಾತು ಮುಂದುವರೆಸಿದ ವಿವೇಕ್ "ಎಷ್ಟೋ ಪ್ರಶಸ್ತಿ ಗೌರವಗಳನ್ನು ಪಡೆದ ಸಾಲು ಮರದ ತಿಮ್ಮಕ್ಕ ಅವರಿಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಸಾಲುಮರದ ತಿಮ್ಮಕ್ಕ ಹಾಗೂ ಪತಿ ಜೀವಂತವಾಗಿದ್ದಾಗ ಇಬ್ಬರೂ 5 ಕಿಲೋ ಮೀಟರ್ ದೂರದಲ್ಲಿ ನೆಟ್ಟ ಗಿಡಗಳಿಗೆ ಸೈಕಲ್‌ನಲ್ಲಿ ನೀರುಣಿಸುತ್ತಿದ್ದರು. ಹೀಗೆ 385 ಆಲದ ಮರಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳೆಸಿದರು" ಎಂದು ತಿಮ್ಮಕ್ಕನ ಸಾಧನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.
2021 ರ ಏಪ್ರಿಲ್ 17ರಂದು ನಟ ವಿವೇಕ್ ನಿಧನರಾಗಿದ್ದರು. ಕನ್ನಡ ನಟಿಯರಾದ ರಮ್ಯಾ, ರಕ್ಷಿತಾ ಪ್ರೇಮ್, ನಟ ಅನಿರುದ್ದ್ ಜತ್ಕರ್ ಸೇರಿ ಹಲವರು ಸಾಲುಮರದ ತಿಮ್ಮಕ್ಕ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಸಾಕಷ್ಟು ಗಣ್ಯರು ನುಡಿನಮನ ಸಲ್ಲಿಸಿದ್ದಾರೆ. ತಮ್ಮ ಅಂತಿಮ ಕ್ಷಣಗಳಲ್ಲಿ ಕೂಡ ತಿಮ್ಮಕ್ಕ ಸಂದೇಶ ನೀಡಿದ್ದಾರೆ.
ನಾಡಿನ ಜನತೆಗೆ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ, ಇರುವಷ್ಟು ದಿನ ಯಾರಿಗೂ ತೊಂದರೆ ಕೊಡದೇ ಬಡವ, ಶ್ರೀಮಂತ ಎಂಬ ಭೇದಭಾವ ಇಲ್ಲದೇ ಬದುಕಿ. ಎಲ್ಲರನ್ನು ಪ್ರೀತಿಸಿ, ದೇಶವನ್ನು ಪ್ರೀತಿಸಿ. ಎಲ್ಲರೂ ಗಿಡ ಮರಗಳನ್ನು ನೆಟ್ಟು ಪೋಷಿಸಿ, ಕೆರೆ ಕಟ್ಟಿ ಕಟ್ಟಿ ಪ್ರಾಣಿ ಪಕ್ಷಿಗಳಿಗೆ ನೀರು ಸಿಗುವಂತೆ ಮಾಡಿ ಹಣ್ಣು ಬಿಡುವ ಮರಗಳನ್ನು ಬೆಳೆಸಿ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗಲಿ. ಯಾವುದೇ ಭೇದ ಬೇಡ, ಹಸಿದವರಿಗೆ ಅನ್ನ ಕೊಡಿ, ನಾನು ಮಾಡಿದ ಮರ ಬೆಳೆಸುವ ಕಾರ್ಯ ನಿರಂತರವಾಗಿ ಮುಂದುವರೆಯಲಿ. ಎಲ್ಲರೂ ಚೆನ್ನಾಗಿರಿ, ದೇಶ ಚೆನ್ನಾಗಿರಲಿ, ಎಲ್ಲರೂ ಗಿಡ ಮರ ಬೆಳೆಸಿ ಎಂದು ತಿಮ್ಮಕ್ಕ ಸಂದೇಶ ನೀಡಿ ತಿಮ್ಮಕ್ಕ ತೆರಳಿದ್ದಾರೆ.


Click it and Unblock the Notifications











