'ಉಪಾಧ್ಯಕ್ಷ'ನಿಗೆ ಭರ್ಜರಿ ಡಿಮ್ಯಾಂಡ್: ಚಿಕ್ಕಣ್ಣ ಚಿತ್ರಕ್ಕೆ ರಶ್ಮಿಕಾ ಏನಂದ್ರು?
ಹಾಸ್ಯನಟ ಚಿಕ್ಕಣ್ಣ ಹೀರೊ ಆಗಿ ನಟಿಸಿರುವ ಚೊಚ್ಚಲ ಚಿತ್ರ 'ಉಪಾಧ್ಯಕ್ಷ' ಮುಂದಿನ ವಾರ ತೆರೆಗೆ ಬರ್ತಿದೆ. 'ದಿಲ್‌ವಾಲಾ' ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆಸಿದೆ.
10 ವರ್ಷಗಳ ಹಿಂದೆ ಶರಣ್ ಹಾಗೂ ಚಿಕ್ಕಣ್ಣ ನಟನೆಯ 'ಅಧ್ಯಕ್ಷ' ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಉಪಾಧ್ಯಕ್ಷ ನಾರಾಯಣ ಗೌಡ ಆಗಿ ಚಿಕ್ಕಣ್ಣ ಕಾಮಿಡಿ ಕಚಗುಳಿ ಕೊಟ್ಟಿದ್ದರು. ಅದೇ ಕಥೆಯನ್ನು ಕೊಂಚ ಮುಂದುವರೆಸಿ ಇದೀಗ 'ಉಪಾಧ್ಯಕ್ಷ' ಸಿನಿಮಾ ಕಟ್ಟಿಕೊಡಲಾಗಿದೆ. ಚಿಕ್ಕಣ್ಣಗೆ ಜೋಡಿಯಾಗಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಖ್ಯಾತಿಯ ಮಲೈಕಾ ನಟಿಸಿದ್ದಾರೆ. ಆರ್ಮುಗ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣ 'ಉಪಾಧ್ಯಕ್ಷ' ಚಿತ್ರದಲ್ಲಿದೆ. ಶರಣ್ ಕೂಡ ಅತಿಥಿ ಪಾತ್ರದಲ್ಲಿ ಚಿತ್ರಕ್ಕೆ ಬಲ ತುಂಬಿದ್ದಾರೆ.

ಜನವರಿ 26ರಂದು 'ಉಪಾಧ್ಯಕ್ಷ' ಸಿನಿಮಾ ಬಿಡುಗಡೆ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ಪ್ರಮೋಷನ್ ಜೋರಾಗಿ ನಡೀತಿದ್ದು ಚಿತ್ರಕ್ಕೆ ವಿತರಕರಿಂದ ಭಾರೀ ಬೇಡಿಕೆ ಶುರುವಾಗಿದೆ. ಚಿತ್ರದ ಹುಬ್ಬಳ್ಳಿ ಏರಿಯಾ ವಿತರಣೆ ಹಕ್ಕನ್ನು 'ಗಿರಿವಾಸ ಪಿಕ್ಚರ್' ಸಂಸ್ಥೆಯು ಭಾರೀ ಮೊತ್ತಕ್ಕೆ ಕೊಂಡುಕೊಂಡಿದೆ. ಇನ್ನುಳಿದಂತೆ ಹಲವು ಭಾಗಗಳ ಹಕ್ಕುಗಳಿಗೆ ಭರ್ಜರಿ ಬೇಡಿಕೆಯಿದೆ. ಇದನ್ನು ನೋಡಿ ಚಿತ್ರತಂಡ ಖುಷಿಯಾಗಿದೆ.
'ಕಾಟೇರ' ಸಕ್ಸಸ್ ಸಂಭ್ರಮದಲ್ಲೇ 'ಉಪಾಧ್ಯಕ್ಷ'ನ ಆಗಮನವಾಗುತ್ತಿದೆ. ಇತ್ತೀಚೆಗೆ ನಟ ದರ್ಶನ್ ಸಹ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. 'ಮದಗಜ' ಬಳಿಕ ಉಮಾಪತಿ ಶ್ರೀನಿವಾಸ್ 'ಉಪಾಧ್ಯಕ್ಷ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ವಿಶೇಷ ವಿಡಿಯೋ ಮಾಡಿ ಚಿತ್ರವನ್ನು ಎಲ್ಲರೂ ನೋಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
'ಅಧ್ಯಕ್ಷ' ಚಿತ್ರದಲ್ಲಿ ಗೆಜ್ಜೆಪುರದ ಚಂದ್ರಶೇಖರ್ ಗೌಡ,(ಶರಣ್) ಶಿವರುದ್ರೇಗೌಡನ ಮಗಳು ಐಶ್ವರ್ಯಾಳನ್ನು ಪ್ರೀತಿಸಿ ಮದುವೆ ಆಗಿದ್ದ ಕಥೆ ನೋಡಿದ್ದೆವು. ಇದೀಗ ಶಿವರುದ್ರೇಗೌಡನ ಮತ್ತೊಬ್ಬ ಮಗಳನ್ನು 'ಉಪಾಧ್ಯಕ್ಷ' ನಾರಾಯಣ ಗೌಡ ಪ್ರೀತಿಸಿ ಮದುವೆ ಆಗುವ ಕಥೆ ಚಿತ್ರದಲ್ಲಿರುವಂತೆ ಕಾಣುತ್ತಿದೆ. ಮತ್ತೊಮ್ಮೆ ಗೆಜ್ಜೆಪುರದಲ್ಲಿ ಕಾಮಿಡಿ ಕಲರವ ಶುರುವಾಗಲಿದೆ. ಚಿಕ್ಕಣ್ಣ ಹೀರೊ ಆಗಲು ಸಾಕಷ್ಟು ತಯಾರಿ ನಡೆಸಿದ್ದಾರೆ. ಮುಖ್ಯವಾಗಿ ಡ್ಯಾನ್ಸ್ ಕಲಿತು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಅರ್ಜುನ್ ಜನ್ಯಾ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ. ಎಂ ಪ್ರಕಾಶ್ ಸಂಕಲನ 'ಉಪಾಧ್ಯಕ್ಷ' ಚಿತ್ರಕ್ಕಿದೆ. ಇತ್ತೀಚೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದ್ದರು. ತಾವು ಸಿನಿಮಾ ನೋಡುವುದಾಗಿ ಹೇಳಿದ್ದರು. ಇನ್ನು ಆರಂಭದಿಂದಲೂ 'ಉಪಾಧ್ಯಕ್ಷ' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಬೆಂಬಲ ಸಿಗುತ್ತಿದೆ.
ಕನ್ನಡ ಚಿತ್ರರಂಗದ ಎಲ್ಲಾ ಖ್ಯಾತ ನಟರ ಕುರಿತು ವಿಶೇಷ ಹಾಡೊಂದನ್ನು ಮಾಡಲಾಗಿದೆ. ಚಿಕ್ಕಣ್ಣ ಹಾಗೂ ಮಲೈಕಾ ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಗಣರಾಜ್ಯೋತ್ಸವ ಸಂಭ್ರಮದಲ್ಲಿ 'ಉಪಾಧ್ಯಕ್ಷ' ದರ್ಬಾರ್ ಥಿಯೇಟರ್‌ಗಳಲ್ಲಿ ಶುರುವಾಗಲಿದೆ.


Click it and Unblock the Notifications










