ರಶ್ಮಿಕಾಗೆ ಕನ್ನಡದಲ್ಲಿ ನೆಚ್ಚಿನ ನಟರೇ ಇಲ್ಲ! ಅಪ್ಪು, ದರ್ಶನ್, ಗಣೇಶ್, ಧ್ರುವ ನೆನಪಾಗಲಿಲ್ವಾ?
ಹುಟ್ಟಿದ ಊರು, ಬೆಳೆದುಬಂದ ದಾರಿ, ಕೈ ಹಿಡಿದ ವ್ಯಕ್ತಿಗಳು. ಯಾರೇ ಆದರೂ ಎಂತದ್ದೆ ಸಮಯದಲ್ಲಿ ಮರೆಯೋದಕ್ಕೆ ಸಾಧ್ಯವಿಲ್ಲ. ಅದರಲ್ಲೂ ನಾಡು ನುಡಿ ಭಾಷೆ ಅಂತ ಬಂದರೆ ನಮ್ಮ ತನವನ್ನು ನಾವು ಯಾವತ್ತು ಬಿಟ್ಟುಕೊಡೊದಿಲ್ಲ. ಇನ್ನು ಕನ್ನಡ, ಕರುನಾಡು, ಅಂತ ಬಂದರೇ ನೋ ವೇ . ಎಂತವರೇ ಆದರೂ ಹೆಮ್ಮೆಯಿಂದ ನಾವು ಕನ್ನಡಿಗರು, ಕರ್ನಾಟಕದವರು ಅಂತ ಹೇಳಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ಇದಕ್ಕೆ ತದ್ವಿರುದ್ಧ. ತಮ್ಮ ಬೇರು ಬೆಳೆದು ಬಂದಿದ್ದು ಕನ್ನಡ ನೆಲದಿಂದಲೇ ಆಗಿದ್ದರೂ ಅದನ್ನು ಹೇಳಿಕೊಳ್ಳಲು ಕೆಲವರು ಹಿಂಜರಿಯುತ್ತಾರೆ. ಈಗ ಯಾಕೆ ಈ ಬಗ್ಗೆ ಹೇಳುತ್ತಿದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ.
ರಶ್ಮಿಕಾ ಮಂದಣ್ಣ. ಹುಟ್ಟಿ ಬೆಳೆದಿದ್ದು ಎಲ್ಲವೂ ಕರ್ನಾಟಕದಲ್ಲಿ. ತನ್ನ ಸಿನಿಮಾ ಕೆರಿಯರ್ ಆರಂಭಿಸಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿ ಒಂದೇ ಸಿನಿಮಾದಿಂದ ಹೆಸರುವಾಸಿಯಾದ ಇವರು, ನಂತರ ಕರ್ನಾಟಕ ಕ್ರಶ್ ಅಂತಲೂ ಫೇಮಸ್ ಆದರು. ನಂತರ ಕನ್ನಡದ ಚಮಕ್, ಅಂಜನಿಪುತ್ರ, ಯಜಮಾನ, ಪೊಗರು ಸಿನಿಮಾದಲ್ಲಿ ನಟಿಸಿ ಪರಭಾಷೆಗೆ ಹಾರಿದ ರಶ್ಮಿಕಾ ನಿಧಾನಕ್ಕೆ ಕನ್ನಡವನ್ನು, ಹಾಗೇ ಕನ್ನಡ ಸಿನಿಮಾ ನಟರನ್ನು ಮರೆತಂತೆ ಕಾಣುತ್ತಿದೆ. ಕನ್ನಡದಲ್ಲಿ ಯಾಕೆ ನಟಿಸುತ್ತಿಲ್ಲ ಎಂದು ಕೇಳಿದಾಗ ಒಳ್ಳೆ ಕಥೆಗಳು ಸಿಗುತ್ತಿಲ್ಲ ಎಂಬ ಸಿದ್ಧ ಉತ್ತರ ನೀಡುವ ರಶ್ಮಿಕಾ ಈಗ ಮತ್ತೊಮ್ಮೆ ಕನ್ನಡಿಗರ ಕಣ್ಣು ಕೆಂಪಾಗಿಸುವ ಕೆಲಸ ಮಾಡಿದ್ದಾರೆ. ಅದೇನು ಅಂತ ಮುಂದೆ ಓದಿ.
ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುವ ನಟಿ. ಶೂಟಿಂಗ್ ಬಿಡುವಿನಲ್ಲಿ ವರ್ಕ್‌ಔಟ್, ಕುಕ್ಕಿಂಗ್, ಡ್ಯಾನ್ಸಿಂಗ್ ಅಂತ ಮಾಡುತ್ತಲೇ ಇರುತ್ತಾರೆ. ಇನ್ನೂ ಸಮಯ ಸಿಕ್ಕಾಗ ಸಾಕಷ್ಟು ಸಂದರ್ಶನಗಳಿಗೂ ಸಮಯ ನೀಡುತ್ತಾರೆ. ಅಂತೇಯೇ ಇತ್ತೀಚೆಗೆ ಖ್ಯಾತ ನಿರೂಪಕ ಫೇರಿಡೂನ್ ಶಹ್ರ್ಯಾರ್ ಅವರ ಖಾಸಗೀ ಸಂದರ್ಶನದಲ್ಲಿ ರಶ್ಮಿಕಾ ಪಾಲ್ಗೊಂಡಿದ್ದಾರೆ. ಈ ಸಂದರ್ಶನದಲ್ಲಿ ರಶ್ಮಿಕಾ ಅವರಿಗೆ ಒಂದಷ್ಟು ಸಿನಿಮಾಗೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ ಫನ್ನಿ ಫನ್ನಿ ಆಗಿ ಉತ್ತರಿಸಿರುವ ರಶ್ಮಿಕಾ ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಇದ್ಯಾವುದೂ ಕನ್ನಡಿಗರಿಗೆ ಬೇಸರ ತಂದಿಲ್ಲಾ. ಆದರೇ ಈ ಸಂದರ್ಶನದಲ್ಲಿ ರಶ್ಮಿಕಾ ಅವರಿಗೆ ಒಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅವರು ನೀಡಿರುವ ಉತ್ತರ ನಿಜಕ್ಕೂ ರಶ್ಮಿಕಾಗೆ ಸ್ಯಾಂಡಲ್‌ವುಡ್ ಬಗ್ಗೆ ಇರುವ ನಿರುತ್ಸಾಹ ಎದ್ದು ಕಾಣುತ್ತಿದೆ.

ಹೌದು. ಈ ಖಾಸಗೀ ಸಂದರ್ಶನದಲ್ಲಿ ರಶ್ಮಿಕಾಗೆ ನಿಮ್ಮ ಫೇವರಿಟ್ ಸಹ ಕಲಾವಿದ ಯಾರು ಎಂದು ಕೇಳಲಾಗಿದೆ. ಇದಕ್ಕೆ ರಶ್ಮಿಕಾ ನಾನು ಇದಕ್ಕೆ ಉತ್ತರಿಸೋದಿಲ್ಲ ಎಂದಿದ್ದಾರೆ. ನಂತರ ತುಂಬಾ ಯೋಚನೆ ಮಾಡಿ ಅಮಿತಾಬ್ ಬಚ್ಚನ್ ಎಂದು ಉತ್ತರ ನೀಡಿದ್ದಾರೆ. ನಂತರ ಇಂಡಿಯನ್ ಸಿನಿಮಾಗಳಲ್ಲಿ ನಿಮ್ಮ ಫೇವರಿಟ್ ನಟರು ಯಾರು ಎಂದು ಪ್ರಶ್ನೆ ಕೇಳಿದ್ದಾರೆ ಫೇರಿಡೂನ್ ಶಹ್ರ್ಯಾರ್. ಇದಕ್ಕೆ ಉತ್ತರಿಸಿರುವ ರಶ್ಮಿಕಾ ಬಾಲಿವುಡ್‌ನ ರಣ್‌ಬೀರ್ ಕಪೂರ್, ತೆಲುಗಿನಲ್ಲಿ ಅಲ್ಲು ಅರ್ಜುನ್, ಮಲಯಾಳಂನಲ್ಲಿ ಫಹಾದ್ ಮತ್ತು ತಮಿಳಿನಲ್ಲಿ ವಿಜಯ್ ಸೇತುಪತಿ ಎಂದು ಉತ್ತರಿಸಿ ಸುಮ್ಮನಾಗಿದ್ದಾರೆ. ಇದನ್ನು ಗಮನಿಸಿದ ಹಲವರು ಹಾಗಿದ್ದರೇ ಕನ್ನಡದಲ್ಲಿ ರಶ್ಮಿಕಾಗೆ ಇಷ್ಟ ಆಗುವಂತ ನಟರೇ ಇಲ್ವಾ? ಕನ್ನಡ ಸಿನಿಮಾಗಳನ್ನು ರಶ್ಮಿಕಾ ಯಾಕಿಷ್ಟು ತಾತ್ಸಾರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಹಾಗೇ ಮಾತು ಮುಂದುವರೆಸಿ ಮಾತನಾಡಿರುವ ರಶ್ಮಿಕಾ ಅಲ್ಲು ಅರ್ಜುನ್ ನನ್ನ ಫೇವರಿಟ್. ನನ್ನ ಸಿನಿಮಾಗೆ ಸಂಬಂಧ ಪಟ್ಟ ಸಾಕಷ್ಟು ತೀರ್ಮಾನಗಳ ಬಗ್ಗೆ ನಾನು ಅವರಲ್ಲಿ ಮಾತನಾಡುತ್ತೇನೆ. ಒಂದು ರೀತಿಯಲ್ಲಿ ಅವರು ನನ್ನ ಸಪೋರ್ಟರ್ ಮತ್ತು ವೆಲ್ ವಿಷರ್ ಎಂದು ಹೇಳಿದ್ದಾರೆ. ಈ ಸಂದರ್ಶನ ಪೂರ್ತಿ ಬೇರೆ ಭಾಷೆಯ ಸಿನಿಮಾಗಳು ಮತ್ತು ಬೇರೆ ಭಾಷೆ ನಟರ ಬಗ್ಗೆ ರಶ್ಮಿಕಾ ಹಾಡಿ ಹೊಗಳಿದ್ದಾರೆ ಬಿಟ್ಟರೆ ಕನ್ನಡದ ಒಂದಕ್ಷರವನ್ನೂ ಅವರು ಮಾತನಾಡಿಲ್ಲ. ಇದೊಂದೆ ಅಲ್ಲ ಈ ಹಿಂದೆ ಕೂಡ ಸಾಕಷ್ಟು ಬಾರಿ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿ ಎಂದಾಗ ಏನೂ ಪ್ರತಿಕ್ರಿಯೆ ನೀಡದೇ ಅಲ್ಲಿಂದ ತೆರಳಿದ್ದರು. ಅದಕ್ಕೂ ಮುಂಚೆ ಕನ್ನಡ ಸಿನಿಮಾಗಳಲ್ಲಿ ನಟಿಸದೇ ಇರೋ ಬಗ್ಗೆ ಸುದ್ದಿಯಾಗಿದ್ದರು. ಕರ್ನಾಟಕದಲ್ಲೇ ಹುಟ್ಟಿದ ನನಗೆ ಕನ್ನಡ ಸರಿ ಬರೋದಿಲ್ಲ ಎಂದು ಖಾಸಗೀ ಸಂದರ್ಶನವೊಂದರಲ್ಲಿ ಹೇಳಿ ಅಲ್ಲೂ ಕನ್ನಡಿಗರಿಂದ ಟೀಕೆಗೆ ಒಳಗಾಗಿದ್ದರು. ಹೀಗೆ ಸಾಕಷ್ಟು ಬಾರಿ ಕನ್ನಡಿಗರಿಂದ ಟೀಕೆಗೆ ಗುರಿಯಾಗಿರುವ ರಶ್ಮಿಕಾ ಇನ್ನು ಪಾಠ ಕಲಿತಂತೆ ಕಾಣುತ್ತಿಲ್ಲ. ಗೊತ್ತಿದ್ದು ಬೇಕು ಅಂತ ಮಾಡುತ್ತಿದ್ದಾರಾ? ಅಥವಾ ಗೊತ್ತಿಲ್ಲದೇ ಕನ್ನಡಿಗರ ಕೆಂಗಣ್ಣಿಗೆ ರಶ್ಮಿಕಾ ಗುರಿಯಾಗುತ್ತಿದ್ದಾರಾ? ಗೊತ್ತಾಗುತ್ತಿಲ್ಲ. ಅದೇನೆ ಇದ್ದರೂ ನಮ್ಮದು ಮತ್ತು ನಮ್ಮವರ ಮಹತ್ವ ಅರಿಯುವ ಸಮಯ ರಶ್ಮಿಕಾಗೆ ಆದಷ್ಟು ಬೇಗ ಬರಲಿ ಅನ್ನೋದೆ ಕನ್ನಡಿಗರ ಆಶಯ.


Click it and Unblock the Notifications











