'ನ್ಯಾಶನಲ್ ಕ್ರಶ್' ಬಿರುದಿನ ಬಗ್ಗೆ ಹೀಗಂದ್ರು ರಶ್ಮಿಕಾ ಮಂದಣ್ಣ
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿಯೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಪ್ರತಿಭೆ, ಸೌಂದರ್ಯದಿಂದ ಕಡಿಮೆ ಅವಧಿಯಲ್ಲಿಯೇ ಚಿತ್ರರಂಗದಲ್ಲಿ ಒಳ್ಳೆಯ ಗುರುತು ಸಂಪಾದಿಸಿಕೊಂಡಿದ್ದಾರೆ ಈ ಕೊಡಗಿನ ಬೆಡಗಿ.
ನಾಯಕ ನಟರಿಗಿರುವಂತೆ ರಶ್ಮಿಕಾ ಮಂದಣ್ಣಗೂ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ನಟನೆಯ ಆರಂಭದ ದಿನಗಳಲ್ಲಿಯೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ರಶ್ಮಿಕಾ ಅಭಿಮಾನಿಗಳಿಂದ 'ನ್ಯಾಷನಲ್ ಕ್ರಶ್' ಬಿರುದನ್ನೂ ಪಡೆದರು.
Recommended Video
ರಶ್ಮಿಕಾರ ಕ್ಯೂಟ್ ಲುಕ್‌ಗಳಿಗೆ ಮಾರುಹೋಗಿ ಅವರಿಗೆ ನ್ಯಾಷನಲ್ ಕ್ರಶ್ ಬಿರುದು ನೀಡಲಾಯಿತು. ಗೂಗಲ್‌ನಲ್ಲಿ ಸಹ ನ್ಯಾಷನಲ್ ಕ್ರಶ್ ಎಂದು ಟೈಪ್ ಮಾಡಿದರೆ ಬರುವುದು ರಶ್ಮಿಕಾ ಮಂದಣ್ಣರ ಹೆಸರೇ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಈ ಬಿರುದಿನ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

'ನ್ಯಾಷನಲ್ ಕ್ರಶ್' ಬಿರುದಿನ ಬಗ್ಗೆ ರಶ್ಮಿಕಾ ಮಾತು
'ನ್ಯಾಷನಲ್ ಕ್ರಶ್' ಬಿರುದು ನಿಮಗೆ ಹೊರೆ ಎನಿಸುತ್ತದೆಯೇ? ಈ ಬಿರುದು ಇರುವ ಕಾರಣದಿಂದ ನೀವು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಬಿರುದಿಗೆ ತಕ್ಕಂತೆ ಅಂದವಾಗಿ, ಕ್ಯೂಟ್, ಬಬ್ಲಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಒತ್ತಡ ನಿಮ್ಮ ಮೇಲಿದೆಯೇ? ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ, 'ನ್ಯಾಷನಲ್ ಕ್ರಶ್' ಎಂದು ಕರೆಯುತ್ತಿರುವುದು ನನ್ನ ಪುಣ್ಯ, ಆದರೆ ಅದು ಒತ್ತಡ ಎನಿಸುವುದಿಲ್ಲ, ಆ ಬಿರುದು ಮುಂದೊಂದು ದಿನ ಹೊರಟು ಹೋದರೂ ನನಗೇನೂ ಬೇಸರವಾಗುವುದಿಲ್ಲ'' ಎಂದಿದ್ದಾರೆ.

ನಾನು ಬಟ್ಟೆ ಅಂಗಡಿಯ ಶೋ ಬೊಂಬೆಯಷ್ಟೆ: ರಶ್ಮಿಕಾ
''ನಾನು ಸಾರ್ವಜನಿಕವಾಗಿ ಚೆನ್ನಾಗಿ ಕಾಣಿಸಿಕೊಳ್ಳುತ್ತೇನೆ ಎಂದಾದರೆ ಅದರ ಪೂರ್ಣ ಶ್ರೇಯ ನನ್ನ ತಂಡಕ್ಕೆ ಸಲ್ಲಬೇಕು. ಸೆಲೆಬ್ರಿಟಿ ಒಬ್ಬರು ಹೊರಗೆ ಚೆನ್ನಾಗಿ ಕಾಣಿಸಿಕೊಳ್ಳುತ್ತಿದ್ದಾರೆಂದರೆ ಅದರ ಹಿಂದೆ ಬಹಳ ಜನರ ದೊಡ್ಡ ಶ್ರಮ ಇರುತ್ತದೆ. ನನ್ನ ತಂಡ ಸಹ ನಾನು ಚೆನ್ನಾಗಿ ಕಾಣಲೆಂದು ಬಹಳ ಶ್ರಮವಹಿಸುತ್ತದೆ. ನಾನು ಅವರ ಪಾಲಿಗೆ 'ಮ್ಯಾನಿಕ್ಯೂನ್' (ಬಟ್ಟೆ ಅಂಗಡಿಯ ಶೋ ಬೊಂಬೆ) ಅಷ್ಟೆ. ಅವರು ಉಡಿಸಿದ್ದನ್ನು ನಾನು ಉಟ್ಟುಕೊಳ್ಳುತ್ತೇನೆ'' ಎಂದಿದ್ದಾರೆ ರಶ್ಮಿಕಾ.

ಬಿರುದು ಉಳಿಸಿಕೊಳ್ಳಲು ಶ್ರಮಿಸುತ್ತೇನೆ: ರಶ್ಮಿಕಾ
''ನ್ಯಾಷನಲ್ ಕ್ರಶ್' ಬಿರುದು ನನಗೆ ಧಕ್ಕಿರುವುದು ನನ್ನ ಸುಕೃತ, ನಾನು ಪಟ್ಟಿರುವ ಶ್ರಮಕ್ಕೆ ಪ್ರತಿಯಾಗಿ ನನಗೆ ಆ ಬಿರುದು ದೊರೆತಿದೆ ಎಂದುಕೊಂಡಿದ್ದೇನೆ. ಅದು ಎಷ್ಟು ವರ್ಷ ನನ್ನ ಜೊತೆ ಇರುತ್ತದೆಯೋ ಅದೂ ನನ್ನ ಸುಕೃತವೇ. ಮುಂದೊಂದು ದಿನ ಆ ಬಿರುದು ಹೊರಟು ಹೋದರೂ ನನಗೆ ಬೇಸರವೇನೂ ಆಗುವುದಿಲ್ಲ. ಇಷ್ಟು ವರ್ಷಗಳ ಕಾಲ ನಾನು ನ್ಯಾಶನಲ್ ಕ್ರಶ್ ಆಗಿದ್ದೆನಲ್ಲ ಎಂಬ ಖುಷಿ ಇರುತ್ತದೆ. ಚೆನ್ನಾಗಿ ಕಾಣಲು, ಚೆನ್ನಾಗಿ ನಟಿಸಲು ನನ್ನ ಶ್ರಮ ಹೀಗೆಯೇ ಮುಂದುವರೆಯುತ್ತಿರುತ್ತದೆ'' ಎಂದಿದ್ದಾರೆ ರಶ್ಮಿಕಾ.

ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ
ರಶ್ಮಿಕಾ ಮಂದಣ್ಣ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ರಶ್ಮಿಕಾ ನಟಿಸಿರುವ 'ಪುಷ್ಪ' ಸಿನಿಮಾ ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಬಳಿಕ ರಶ್ಮಿಕಾ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದು, ಎರಡೂ ಸಿನಿಮಾಗಳು ಬಿಡುಗಡೆ ಆಗಿಲ್ಲ. ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿರುವ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿರುವ 'ಗುಡ್ ಬೈ' ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಇದರ ಜೊತೆಗೆ ಪ್ರಸ್ತುತ ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಸಿನಿಮಾ ಒಂದಕ್ಕೂ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಶೀಘ್ರದಲ್ಲಿಯೇ ಮಲಯಾಳಂ ಸಿನಿಮಾರಂಗಕ್ಕೂ ಕಾಲಿಡುವ ಸಾಧ್ಯತೆ ಇದೆ.


Click it and Unblock the Notifications











