ರಶ್ಮಿಕಾ ಹೆಸರು ಕೇಳ್ತಿದ್ದಂತೆ ರಿಷಬ್ ಗರಂ; ಶಿವಣ್ಣ, ಯಶ್ ಸೇರಿ ಚಂದನವನದಲ್ಲಿ ಯಾರಿಗೆಲ್ಲಾ ಆಮಂತ್ರಣ ಸಿಕ್ತು?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಶುರುವಾಗಿದೆ. ರಾಜಸ್ಥಾನದ ಉದಯ್‌ಪುರದಲ್ಲಿರುವ ಐಷಾರಾಮಿ ಹೋಟೆಲ್ ರೆಸಾರ್ಟ್‌ನಲ್ಲಿ ಮದುವೆ ಕಳೆ ಕಟ್ಟಲಿದೆ. ಈಗಾಗಲೇ ಮೆಹಂದಿ, ಸಂಗೀತ್ ಪಾರ್ಟಿ ನೆರವೇರಿದೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ಕಲ್ಯಾಣೋತ್ಸವದ ನಡೆಯಲಿದೆ. ಕನ್ನಡ ಸಿನಿಮಾ ತಾರೆಯರಿಗೂ ಮದುವೆಯ ಆಮಂತ್ರಣ ತಲುಪಿದೆ. ಆದರೆ ರಶ್ಮಿಕಾ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ರಿಷಬ್ ಶೆಟ್ಟಿ ಗರಂ ಆಗಿರುವ ಘಟನೆ ಕೂಡ ನಡೆದಿದೆ.
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಚಿತ್ರರಂಗ ಪ್ರವೇಶಿಸಿದ್ದರು. ಆ ಚಿತ್ರದಲ್ಲಿ ನಟಿಸುವ ವೇಳೆ ರಕ್ಷಿತ್ ಹಾಗೂ ರಶ್ಮಿಕಾ ನಡುವೆ ಲವ್ ಆಗಿತ್ತು. ಬಳಿಕ ಇಬ್ಬರೂ ಪೋಷಕರನ್ನು ಒಪ್ಪಿಸಿ ಮದುವೆಗೆ ಮುಂದಾಗಿದ್ದರು. ಆದರೆ ದಿಢೀರನೆ ಎಂಗೇಜ್‌ಮೆಂಟ್ ಮುರಿದು ಬಿದ್ದಿತ್ತು. ಬಳಿಕ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದರು. ಅದೇ ಸಮಯದಲ್ಲಿ ವಿಜಯ್ ದೇವರಕೊಂಡ ಜೊತೆ ಪರಿಚಯ, ಸ್ನೇಹ, ಬಳಿಕ ಪ್ರೀತಿ ಮೂಡಿ ಇದೀಗ ಜೋಡಿ ಮದುವೆಗೆ ಸಜ್ಜಾಗಿದ್ದಾರೆ.

'ಕಿರಿಕ್ ಪಾರ್ಟಿ' ಚಿತ್ರಕ್ಕೆ ರಶ್ಮಿಕಾ ಅವರನ್ನು ನಾಯಕಿಯಾಗಿ ರಿಷಬ್ ಶೆಟ್ಟಿ ಆಯ್ಕೆ ಮಾಡಿದ್ದರು. ರಕ್ಷಿತ್ ಆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಮೊದಲ ಅವಕಾಶ ಕೊಟ್ಟ ಶೆಟ್ಟರ ಬಳಗವನ್ನು ರಶ್ಮಿಕಾ ಮಂದಣ್ಣ ಮರೆತಿದ್ದಾರೆ. ಶೆಟ್ಟರ ಬಳಗದಿಂದ ಆಕೆ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರಿಗೂ ರಶ್ಮಿಕಾ ಮದುವೆ ಬಗ್ಗೆ ಪ್ರಶ್ನೆ ಎದುರಾಗಿತ್ತು. "ಅವರು ನನಗೆ ಇನ್ವಿಟೇಷನ್ ಕೊಟ್ಟಿಲ್ಲ. ನನಗೆ ಕೊಡಲ್ಲ ಅನ್ನೋದು ಗೊತ್ತಿದೆ. ಒಂದು ವೇಳೆ ಕೊಟ್ರೆ ಮದುವೆಗೆ ಹೋಗ್ತೀನಿ ಎಂದಿದ್ದರು.
ಸಿಟ್ಟಾದ ರಿಷಬ್ ಶೆಟ್ಟಿ
'ಕಾಂತಾರ- 1' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಸೆಟ್ಟೇರಿದೆ. ಅದರ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಭೇಟಿ ನೀಡಿದ್ದಾರೆ. ಅಲ್ಲಿನ ಮಾಧ್ಯಮದವರು ರಿಷಬ್ ಶೆಟ್ಟಿ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ರಶ್ಮಿಕಾ ಮದುವೆ ಪ್ರಶ್ನೆ ಎದುರಾಗುತ್ತಿದ್ದಂತೆ ಕೊಂಚ ಸಿಟ್ಟಾದ ರಿಷಬ್ ಶೆಟ್ಟಿ ಬೈ ಎಂದು ಹೇಳಿ ಹೊರಟುಬಿಟ್ಟಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ರಿಷಬ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣಗೂ ಅಷ್ಟಕ್ಕಷ್ಟೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಮಾತನಾಡುತ್ತಾ ತಮ್ಮ ಸಿನಿಜರ್ನಿ ನೆನಪಿಸಿಕೊಂಡಿದ್ದರು. ಈ ವೇಳೆ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ ಎಂದು ಹೇಳಿದ್ದರು. ಚಿತ್ರದಲ್ಲಿ ನಟಿಸಿ ಎಂದು ಚಿತ್ರತಂಡ ನನಗೆ ದುಂಬಾಲು ಬಿದ್ದಿತ್ತು ಎಂದಿದ್ದರು. ಪರಂವಃ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಹೆಸರು ಹೇಳಲು ರಶ್ಮಿಕಾ ಹಿಂದೇಟು ಹಾಕಿದ್ದರು. ಇದು ರಿಷಬ್ ಶೆಟ್ಟಿ ಅವರನ್ನು ಕೆರಳಿಸಿತ್ತು. ಮತ್ತೊಂದು ಸಂದರ್ಶನದಲ್ಲಿ ಆಕೆಗೆ ತಿರುಗೇಟು ನೀಡಿದ್ದರು.
ಚಂದನವನದಲ್ಲಿ ಯಾರೆಗೆಲ್ಲಾ ಆಹ್ವಾನ?
ವಿಜಯ್ ಹಾಗೂ ರಶ್ಮಿಕಾ ಮದುವೆ ವಿಚಾರವನ್ನು ಬಹಳ ಗುಟ್ಟಾಗಿಯೇ ಇಟ್ಟಿದ್ದರು. ಆದರೂ ಬಹಳ ದಿನಗಳಿಂದ ಇಂತಾದೊಂದು ಸುದ್ದಿ ಹರಿದಾಡುತ್ತಿತ್ತು. ಅಂತಿಮವಾಗಿ ಜೋಡಿ ಮದುವೆ ವಿಷಯ ಒಪ್ಪಿಕೊಂಡಿದೆ. ಕೆಲವೇ ಆಪ್ತರಿಗೆ ಮದುವೆ ಆಮಂತ್ರಣ ನೀಡಿದೆ. ಕನ್ನಡದಲ್ಲಿ ಕೆಲ ತಾರೆಯರಿಗೆ ರಶ್ಮಿಕಾ ತಂಡದ ಕಡೆಯಿಂದ ಆಮಂತ್ರಣ ಪತ್ರಿಕೆ ತಲುಪಿದೆ.
ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ದೇಶಕರಾದ ಎ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಹಾಗೂ ನಟಿ ಆಶಿಕಾ ರಂಗನಾಥ್ ಸೇರಿ ಕೆಲವರಿಗೆ ಮಾತ್ರ ಆಮಂತ್ರಣ ಸಿಕ್ಕಿದೆ. ಇನ್ವಿಟೇಶನ್ ಜೊತೆಗೆ ವೈಯಕ್ತಿಕವಾಗಿ ಮೇಸೇಜ್ ಮಾಡಿ ಇವರನ್ನು ರಶ್ಮಿಕಾ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.


Click it and Unblock the Notifications











