ರಶ್ಮಿಕಾ ಮಂದಣ್ಣ ಅವತ್ತು ಆಡಿದ ಮಾತನ್ನು ಇನ್ನೂ ಮರೆತಿಲ್ಲ ರಿಷಬ್ ಶೆಟ್ಟಿ ? ಮತ್ತೆ ಟಾಂಗ್ ಕೊಟ್ರಾ ಡಿವೈನ್ ಸ್ಟಾರ್ ?
08 ವರ್ಷದ ಹಿಂದೆ ತೆರೆಗೆ ಬಂದ ಕಿರಿಕ್ ಪಾರ್ಟಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ರಿಷಬ್, ಸಂಯುಕ್ತಾ ಹೆಗ್ಡೆ, ಚಂದನ್ ಆಚಾರ್, ಪ್ರಮೋದ್ ಶೆಟ್ಟಿ, ಸೇರಿ ಅನೇಕರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿತ್ತು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ನೀಡಿದ್ದು ಇದೇ ಚಿತ್ರ.
ಆದರೆ, ದುರ್ದೈವ. ಮೊದಲ ಚಿತ್ರದಲ್ಲಿಯೇ ಸಿಕ್ಕ ಅಪಾರವಾದ ಜನಪ್ರಿಯತೆಯಿಂದ ರಶ್ಮಿಕಾ ಮಂದಣ್ಣ ಕನ್ನಡವನ್ನು ಮರೆತರು. ಹತ್ತಿದ ಏಣಿಯನ್ನು ಮತ್ತು ನಂಬಿದವರನ್ನು ಎಡಗಾಲಿನಿಂದ ಒದ್ದು ಪರಭಾಷೆಯ ಪಾಲಾದರು. ಆ ನಂತರ ಬಹುಬೇಡಿಕೆಯ ನಾಯಕಿಯಾಗಿ ಕೂಡ ಬೆಳೆದರು. ಹೀಗೆ ರಶ್ಮಿಕಾ ಮಂದಣ್ಣ ಬದುಕಿಗೆ ತಿರುವನ್ನು ನೀಡಿದ ಕಿರಿಕ್ ಪಾರ್ಟಿ, ರಿಷಬ್ ಶೆಟ್ಟಿ ಅವರಲ್ಲೊಬ್ಬ ಅತ್ಯುತ್ತಮ ನಿರ್ದೇಶಕ ಮತ್ತು ಕಥೆಗಾರನಿದ್ದಾನೆ ಎನ್ನುವುದನ್ನು ಕೂಡ ನಿರೂಪಿಸಿತ್ತು. ನಿರ್ದೇಶಕನಾಗಿ ರಿಷಬ್ ಮೊದಲ ಬಾರಿ ಗೆದ್ದಿದ್ದು ಇದೇ ಚಿತ್ರದಿಂದ. ಇಂತಹ ಕಿರಿಕ್ ಪಾರ್ಟಿ ಚಿತ್ರ ಈಗ ಇನ್ನೊಮ್ಮೆ ಸುದ್ದಿಯಲ್ಲಿದೆ. ರಿಷಬ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳ ನಡುವೆ ಸಮರಕ್ಕೆ ಕಾರಣವಾಗಿದೆ.

ಹೌದು, ಮೊನ್ನೆ..ಮೊನ್ನೆ.. ತಮ್ಮ ಕನಸಿನ ಕೂಸು ಕಿರಿಕ್ ಪಾರ್ಟಿಗೆ 08 ವರ್ಷ ತುಂಬಿದ ಹಿನ್ನೆಲೆ ರಿಷಬ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದರು. ಕಿರಿಕ್ ಪಾರ್ಟಿ ನಮ್ಮ ಜೀವನದ ಭಾಗವಾಗಿ 08 ವರ್ಷ ಕಳೆದಿವೆ. ಅನೇಕ ಸುಂದರ ನೆನಪುಗಳು ಮತ್ತು ನಿಮ್ಮ ಪ್ರೀತಿ ಈ ಪಯಣವನ್ನು ಅರ್ಥಪೂರ್ಣವನ್ನಾಗಿಸಿವೆ. ನಿಮ್ಮ ಬೆಂಬಲಕ್ಕೆ ಹೃತ್ಫೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ಇದಕ್ಕೆ ಈಗ ರಶ್ಮಿಕಾ ಮಂದಣ್ಣ ಅಸಂಖ್ಯಾತ, ಅಗಣಿತ ಅಭಿಮಾನಿಗಳು ಅಪಸ್ವರ ಎತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ರಿಷಬ್ ಮರೆತಿದ್ದಾರೆ ಅನ್ನುವುದು ಇವರ ರೋಧನೆ.
ಹೌದು, ಅಸಲಿಗೆ ತಮ್ಮ ಕಿರಿಕ್ ಪಾರ್ಟಿ ಚಿತ್ರವನ್ನು ನೆನಪು ಮಾಡಿಕೊಳ್ಳುತ್ತಾ ರಿಷಬ್ ಚಿತ್ರದ ಫೋಸ್ಟರ್ ಹಂಚಿಕೊಂಡಿದ್ದಾರೆ. ಆದರೆ, ಹೀಗೆ ಹಂಚಿಕೊಳ್ಳಲಾದ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಹೊರತು ಪಡಿಸಿ ಚಿತ್ರದಲ್ಲಿರುವ ಬಹುತೇಕ ಪ್ರಮುಖ ಕಲಾವಿದರು ಇದ್ದಾರೆ. ಇನ್ನು ರಿಷಬ್ ಕಿರಿಕ್ ಪಾರ್ಟಿ ಚಿತ್ರವನ್ನು ನೀಡಿದ್ದಕ್ಕೆ ರಕ್ಷಿತ್ ಶೆಟ್ಟಿ ಅವರಿಗೆ ಧನ್ಯವಾದ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಹೆಸರನ್ನು ನಮೂದಿಸಿಲ್ಲ. ರಶ್ಮಿಕಾ ಮಂದಣ್ಣ ಅವರಿಗೆ ಟ್ಯಾಗ್ ಮಾಡಿಲ್ಲ.

ಹೀಗಾಗಿಯೇ ಕೆರಳಿರುವ ರಶ್ಮಿಕಾ ಮಂದಣ್ಣ ಅಭಿಮಾನಿಗಳು ರಿಷಬ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇರದಿದ್ದರೆ ನಿಮ್ಮ ಚಿತ್ರದ ಕಸದ ಬುಟ್ಟಿಗೆ ಸೇರುತ್ತಿತ್ತು ಎಂದು ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಇರದಿದ್ದರೆ ಚಿತ್ರ ಖಂಡಿತವಾಗಿಯೂ ಗೆಲ್ಲುತ್ತಿರಲಿಲ್ಲ ಎನ್ನುತ್ತಿದ್ದಾರೆ. ಇನ್ನು, ರಶ್ಮಿಕಾ ಮೊದಲಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದವರು. ಹೀಗಾಗಿ ಅನೇಕರು ರಿಷಬ್ ಶೆಟ್ಟಿ ಅವರ ನಡೆಯನ್ನು ಅನೇಕರು ಸಮರ್ಥಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಒಳಗೊಂಡ ಪೋಸ್ಟರ್ ಹಂಚಿಕೊಳ್ಳದೇ ಇದ್ದಿದ್ದು ಒಳ್ಳೇಯದಾಯಿತು ಎಂದಿದ್ದಾರೆ.
ಅಂದ್ಹಾಗೇ ಒಂದೆರಡು ವರ್ಷದ ಹಿಂದೆ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಬಗ್ಗೆ ಸಂದರ್ಶನವೊಂದರಲ್ಲಿ ಲಘುವಾಗಿ ಮಾತನಾಡಿದ್ದರು. ಆ ನಂತರ ರಿಷಬ್ ಕೂಡ ಸಂದರ್ಶನದ ಮೂಲಕ ರಶ್ಮಿಕಾಗೆ ತಿರುಗೇಟನ್ನು ನೀಡಿದ್ದರು. ಇದಾದ ನಂತರ ಜ್ಞಾನೋದಯವಾದಂತಾಗಿ ರಕ್ಷಿತ್ ಮತ್ತು ರಿಷಬ್ ನನಗೆ ಚಿತ್ರರಂಗದಲ್ಲಿ ದಾರಿ ತೋರಿಸಿದ್ದು ಎಂದು ಹೇಳಿದ್ದರು. ಇದಾದ ನಂತರ ಎಲ್ಲವೂ ತಣ್ಣಗಾಗಿದೆ ಎಂದೇ ಅಂದುಕೊಂಡಿದ್ದರು. ವೈಮನಸು ಶಮನವಾಗಿದೆ ಎಂದುಕೊಂಡಿದ್ದರು. ಆದರೆ ಈಗ ರಶ್ಮಿಕಾ ಮಂದಣ್ಣ ಅವರ ಹೆಸರು ಮತ್ತು ಫೋಟೊವನ್ನು ರಿಷಬ್ ಕೈ ಬಿಟ್ಟಿರುವ ಹಿನ್ನೆಲೆ ರಶ್ಮಿಕಾ ಮೇಲೆ ರಿಷಬ್‌ಗೆ ಇರುವ ಕೋಪ ಕಡಿಮೆಯಾಗಿಲ್ಲ ಎಂದು ಅನೇಕರು ಅಂದುಕೊಂಡಿದ್ಧಾರೆ. ಈ ವಿಚಾರದ ಕುರಿತು ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications