»   » ದ್ರಾವಿಡ್‌ ಜೋಡಿ ರವೀನಾ

ದ್ರಾವಿಡ್‌ ಜೋಡಿ ರವೀನಾ

Posted By: *ಗೌರಿ
Subscribe to Filmibeat Kannada

ಬಾಲಿವುಡ್‌ನ ಖ್ಯಾತ ನಟಿ ರವೀನಾ ಟಂಡನ್‌ ಹಾಗೂ ಭಾರತದ ಸ್ಟಾರ್‌ ಕ್ರಿಕೆಟಿಗ ಬೆಂಗಳೂರಿನ ಹುಡುಗ ರಾಹುಲ್‌ ದ್ರಾವಿಡ್‌ ಮದುವೆಯಾಗುತ್ತಾರಾ? ಇಂಥದೊಂದು ಪ್ರಶ್ನೆ ಬಾಲಿವುಡ್‌ ಓಣಿಗಳಲ್ಲಿ ಸುಳಿದಾಡುತ್ತಿದೆ.

ರಾಹುಲ್‌ ಜೊತೆ ರವೀನಾಳ ಹೆಸರು ಸೇರಿದ್ದಾದರೂ ಹೇಗೆ? ವಿಷಯ ಇಷ್ಟು -
ಇತ್ತೀಚೆಗೆ ಫ್ಯಾಷನ್‌ ಶೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರವೀನಾ ಬೆಂಗಳೂರಿಗೆ ಬಂದಿದ್ದರು. ಅದು ಅಂಧ ಮಕ್ಕಳ ಫ್ಯಾಷನ್‌ ಶೋ. ಅಂಧ ಮಕ್ಕಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಏರ್ಪಾಟಾಗಿದ್ದ ಆ ಕಾರ್ಯಕ್ರಮದಲ್ಲಿ ರವೀನಾಳದು ನಿರೂಪಕಿಯ ಪಾತ್ರ. ಈ ಕಾರ್ಯಕ್ರಮಕ್ಕೆ ರಾಹುಲ್‌ ದ್ರಾವಿಡ್‌ ಕೂಡ ಬಂದಿದ್ದರು. ಇಬ್ಬರೂ ಜೊತೆಯಾಗಿ ಕೂತಿದ್ದೇ ಸುದ್ದಿಗೆ ಆಹಾರವಾಯಿತು. ನಿರೂಪಣೆಯ ನಡು ನಡುವೆ ಬಿಡುವಿದ್ದಾಗಲೆಲ್ಲ ರವೀನಾ ದ್ರಾವಿಡ್‌ ಪಕ್ಕ ಕೂರುತ್ತಿದ್ದರಂತೆ. ಪಕ್ಕ ಕೂತ ಮೇಲೆ ಮಾತುಕತೆ, ನಗು.. ಇನ್ನೇನು ಬೇಕು ರಾಹುಲ್‌ ಜೊತೆ ರವೀನಾ ಹೆಸರು ಸೇರಲಿಕ್ಕೆ!

ಎತ್ತಣ ಮಾಮರ, ಎತ್ತಣ ಕೋಗಿಲೆ..

ಛೇಛೇ, ಎಲ್ಲಿಯ ರವೀನಾ ಎಲ್ಲಿಯ ರಾಹುಲ್‌ ಅನ್ನುವವರೂ ಉಂಟು. ನಮ್ಮೂರ ಹುಡುಗ ರಾಹುಲ್‌ ದ್ರಾವಿಡ್‌ ನಾಚಿಕೆಯ ಮುದ್ದೆ. ರವೀನಾ ಬಾಲಿವುಡ್‌ನ ಚಮಕ್‌ ಚಮಕ್‌ ಹುಡುಗಿ, ಇಬ್ಬರಿಗೂ ಎಲ್ಲಿಯ ಜೋಡಿ ಎನ್ನುವುದು ರಾಹುಲ್‌ ಅಭಿಮಾನಿಗಳ ವಾದ.

ಈ ಮುನ್ನ ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಅನಿಲ್‌ಕುಂಬ್ಳೆ ಜೊತೆ ಸಿನಿಮಾ ನಟಿ ಸುಧಾರಾಣಿ ಹೆಸರನ್ನು ಸೇರಿಸಲಾಗಿತ್ತು . ಈಗ ಕುಂಬ್ಳೆಗೆ ಮದುವೆಯಾಗಿದೆ. ಶ್ರೀನಾಥ್‌, ವೆಂಕಿಯೂ ಸಭ್ಯ ಗೃಹಸ್ಥರು. ಗಾಸಿಪ್‌ಗೆ ಉಳಿದಿರುವುದು ದ್ರಾವಿಡ್‌ ಮಾತ್ರ. ಆದರೆ, ಇದಾವುದನ್ನೂ ರವೀನಾ ಜೊತೆ ರಾಹುಲ್‌ ಮದುವೆ ಮಾಡಿಸಲು ಹೊರಟಿರುವ ಗಾಸಿಪ್‌ ಗಿರಾಕಿಗಳು ಒಪ್ಪುವುದಿಲ್ಲ . ಅವರ ವಾದವೇನೆಂದರೆ-

'ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌ ಕೂಡ ಫ್ಯಾಷನ್‌ ಶೋನಲ್ಲಿ ಭಾಗವಹಿಸಿದ್ದರು. ಅವರು ನಿಧಿ ಸಂಗ್ರಹ ಸಮಿತಿಯ ಅಧ್ಯಕ್ಷರಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಹಜ. ಆದರೆ, ಅಲ್ಲಿ ರಾಹುಲ್‌ಗೇನಿತ್ತು ಕೆಲಸ". ಇಂಥ ತರ್ಕಕ್ಕೆ ಏನನ್ನುವುದು?

ರವೀನಾ, ಮದುವೆ ಸುದ್ದಿ ನಿಜಾನಾ?

ರವಿಚಂದ್ರನ್‌ ನಾಯಕತ್ವದ ಶಕುನಿ ಸಿನಿಮಾದಲ್ಲಿ ರವೀನಾ ನಾಯಕಿ. ಶೂಟಿಂಗ್‌ಗೆ ರವೀನಾ ಬರುತ್ತಿಲ್ಲ , ಆ ಕಾರಣದಿಂದಲೇ ಶೂಟಿಂಗ್‌ ನಡೆಯುತ್ತಿಲ್ಲ ಎನ್ನುವ ಆಪಾದನೆ ಕೂಡ ರವೀನಾ ಮೇಲಿದೆ. 'ಈ ಸುದ್ದಿ ನಿಜಾನಾ ರವೀನಾ" ಎಂದು ಫ್ಯಾಷನ್‌ ಶೋ ಸಂದರ್ಭದಲ್ಲಿ ಮಾತಿಗೆ ಸಿಕ್ಕ ರವೀನಾರ ಕೇಳಿದರೆ ಮಸ್ತು ಮಸ್ತು ಹುಡುಗಿ ಸಿಟ್ಟಾಗಬೇಕೆ? 'ಸಿನಿಮಾ ಪ್ರಶ್ನೆಗಳನ್ನು ಸಿನಿಮಾ ಸೆಟ್‌ನಲ್ಲಿ ಕೇಳಿ" ಎಂದು ರವೀನಾ ಸುದ್ದಿಗಾರರತ್ತ ಸುಡುಗಣ್ಣ ನೋಟ ಹರಿಸಿದರು.

ರವೀನಾಗೆ ಮೂಡೌಟು! ಮದುವೆ ಸುದ್ದಿ ಕುರಿತ ಸುದ್ದಿಗಾರರ ಪ್ರಶ್ನೆಗಳು ಕೂಡ ಪ್ರಸ್ತಾಪವಾಗುವ ಮುನ್ನವೇ ಔಟು!! ಅಂದಹಾಗೆ, ಶಕುನಿ ಸೆಟ್‌ಗೆ ರವೀನಾ ಬರುವುದು ಯಾವಾಗ?

English summary
Gossip : Raveena Randon to marry Rahul Dravid ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada