»   » ಮೊದಲ ಚಿತ್ರದಲ್ಲೇ ರಿಯಲ್‌ ಸ್ಟಾರ್‌ನೊಂದಿಗೆ ಹೆಜ್ಜೆ ಹಾಕಿದ್ದ ರವೀನಾ,

ಮೊದಲ ಚಿತ್ರದಲ್ಲೇ ರಿಯಲ್‌ ಸ್ಟಾರ್‌ನೊಂದಿಗೆ ಹೆಜ್ಜೆ ಹಾಕಿದ್ದ ರವೀನಾ,

Posted By: Staff
Subscribe to Filmibeat Kannada

ಬೆಳಗಾದರೆ ಸೂರ್ಯ ಬರುತಾನೆ
ಹಕ್ಕಿಗಳ ಸ್ವಾಗತ ಅವನಿಗೆ ಹಾಡು
ಬೆಳ್ಳಿರಥದಲಿ ಅವನ ಪಯಣ
ನಾನೀಗ ಹಾಡುವೆ ಅವನಿಗೊಂದು ಕವನ

- 'ಹೃದಯದಿಂದ" ಅರ್ಥಾತ್‌ ಕನಸುಗಾರ ರವಿಚಂದ್ರನ್‌ ಲೇಖನಿಯಿಂದ ಮೂಡಿದ ಸಾಲುಗಳಿವು. ಈ ಸಾಲುಗಳಿಗಾಗಿ ಕ್ಯಾಮರಾ ಎದುರಿಸಿದ್ದು ಮಸ್ತು ಮಸ್ತು ಹುಡುಗಿ ಖ್ಯಾತಿಯ ರವೀನಾ ಟಂಡನ್‌.

ಪುಟ್ಟ ಜಲಪಾತ, ಹೂಗಳಿಂದ ಕೂಡಿದ ಕೊಳ, ಮರ- ಗಿಡ- ಬಳ್ಳಿ, ಅದೋ ಆ ತುದಿಯಲ್ಲಿ ಅಸ್ತಂಗತನಾಗುತ್ತಿರುವ ಸೂರ್ಯ ! - ಕ್ಯಾಮರಾ ಕಣ್ಣು ತುಂಬಲಿಕ್ಕೆ ಇನ್ನೇನು ಬೇಕು. ಅದ್ಭುತವಾದ ಸೆಟ್‌, ಸ್ಯಾಂಡಲ್‌ವುಡ್‌ ಪಾಲಿಗೆ ಅಪರೂಪದ್ದು. ಜಲಪಾತ ಚೆಂದವೋ, ಜಲಪಾತದಲ್ಲಿ ತೋಯುತ್ತಿದ್ದ ರವೀನಾ ಚೆಂದವೋ ಎಂದು ನಿರ್ಣಯಿಸುವುದು ಯಾರಿಗಾದರೂ ಕಷ್ಟವಿತ್ತು . ಅಂದಹಾಗೆ, 'ಶಕುನಿ" ಚಿತ್ರದ ಮುಹೂರ್ತವದು.

ಅಭಿಮಾನ್‌ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಅಶೋಕ್‌ ಕುಮಾರ್‌ ರೂಪಿಸಿದ್ದ ಸೆಟ್‌ ಅದ್ದೂರಿಯಾಗಿತ್ತು . ಚಿತ್ರದ ನಾಯಕ ಹಾಗೂ ನಿರ್ದೇಶಕ ರವಿಚಂದ್ರನ್‌ ಆದ್ದರಿಂದ ಅಲ್ಲಿ ಅದ್ದೂರಿಗೇನೂ ಕೊರತೆಯಿರಲಿಲ್ಲ . ಜೊತೆಗೆ ಅದ್ದೂರಿತನಕ್ಕೆ ಕೋಡು ಮೂಡಿಸಲು ಅಲ್ಲಿ ಉಪೇಂದ್ರ ಹಾಗೂ ಶಿವರಾಜ್‌ಕುಮಾರ್‌ ಹಾಜರಿದ್ದರು. ಅವರಿದ್ದುದು ಶುಭ ಹಾರೈಸುವವರ ಪಟ್ಟಿಯಲ್ಲಿ .

ನಿರ್ಮಾಪಕ ರಾಮು ಅವರ ಮಹತ್ವಾಕಾಂಕ್ಷೆಯ ಚಿತ್ರ ಶಕುನಿ, ಬರುವ ಪೊಂಗಲ್‌ಗೆ ತೆರೆಗೆ ಬರಲಿದ್ದಾನಂತೆ. ಶಕುನಿಯ ಮೂವರು ನಾಯಕಿಯರಲ್ಲಿ ಒಬ್ಬರಾದ ರವೀನಾ ಟಂಡನ್‌ ಅವರಿಗೆ ಇದೇ ಮೊದಲ ಬಾರಿಗೆ ರವಿಚಂದ್ರನ್‌ ಅವರ ಜೊತೆಯಲ್ಲಿ ಅಭಿನಯಿಸುತ್ತಿರುವ ಹಿಗ್ಗು . ಮೊದಲ ಚಿತ್ರ ಉಪೇಂದ್ರ, ಈಗ ಶಕುನಿ. ಒಬ್ಬಾತ ರಿಯಲ್‌ ಸ್ಟಾರ್‌, ಮತ್ತೊಬ್ಬ ಕ್ರೇಜಿ ಸ್ಟಾರ್‌. ರವೀನಾ ಖುಷಿಯಾಗಲಿಕ್ಕೆ ಸಾಕಷ್ಟು ಕಾರಣಗಳಿದ್ದವು.

ಇಂಥದೊಂದು ಕನಸಿತ್ತು . ಅಮಿತಾಬ್‌, ನಾನಾ ಪಾಟೇಕರ್‌, ನಾಸಿರುದ್ದೀನ್‌ ಷಾ, ಕಮಲಹಾಸನ್‌ ಅಂತಹ ದಿಗ್ಗಜರೊಂದಿಗೆ ಅಭಿನಯಿಸಿದ್ದೆ . ಈಗ ರವಿಚಂದ್ರನ್‌ ಜೊತೆಯೂ ಅಭಿನಯಿಸುತ್ತಿದ್ದೇನೆ. ಇದು ಸಂತೋಷದ ಸಂಗತಿ ಎಂದರು ರವೀನಾ. ಅಂದಹಾಗೆ, ಶಕುನಿಯಲ್ಲಿ ಹಳ್ಳಿಯ ಹುಡುಗಿ ಪಾತ್ರ ಅವರದು. ನನ್ನ ಪಾತ್ರ ಸವಾಲಿನದು ಹಾಗೂ ಉಳಿದ ಚಿತ್ರಗಳಿಗಿಂತಲೂ ವಿಭಿನ್ನವಾದದ್ದು ಎಂದು ತಮ್ಮ ಪಾತ್ರವನ್ನು ಬಣ್ಣಿಸಿಕೊಂಡ ರವೀನಾ, ಹಳ್ಳಿ ಹುಡುಗಿ ಪಾತ್ರವಾದರೂ ಗ್ಲಾಮರ್‌ಗೇನೂ ಕೊರತೆಯಿಲ್ಲ ಎನ್ನುವುದನ್ನು ಒತ್ತಿ ಹೇಳಲಿಕ್ಕೆ ಮರೆಯಲಿಲ್ಲ . ಜಲಪಾತದ ಸಂಗದಲ್ಲಿ ಜಲಕನ್ಯೆಯಾಗುವ ದೃಶ್ಯ ಕೂಡ ರವೀನಾರದ್ದು ಶಕುನಿಯಲ್ಲಿ ಗ್ಲ್ಯಾಮರ್‌ ಪಾತ್ರ ಅನ್ನುವುದಕ್ಕೆ ಸಾಕ್ಷ್ಯದಂತಿತ್ತು .

ರವೀನಾ ಇತ್ತೀಚೆಗೆ ಬದಲಾಗಿದ್ದಾರೆಯೇ ? ಅಧ್ಯಾತ್ಮದತ್ತ ವಾಲುತ್ತಿದ್ದಾರೆಯೇ?
ಇತ್ತೀಚಿನ ಅವರ ನಡವಳಿಕೆಗಳಂತೂ ಈ ಅನಿಸಿಕೆಯನ್ನು ಬಲಪಡಿಸುತ್ತವೆ. ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಖುಷಿಯನ್ನು ಇನ್ನೂ ಉಳಿಸಿಕೊಂಡಿರುವ ಅವರು, ಪ್ರಶಸ್ತಿ ಫಿಕ್ಸಿಂಗ್‌ ಆಪಾದನೆಗಳನ್ನು ಸಾರಾಸಗಟು ತಳ್ಳಿ ಹಾಕುತ್ತಾರೆ. ಆದರೆ, ಅಸಲು ಸುದ್ದಿ ಇದಲ್ಲ . ರವೀನಾ ತಾಯಿಯಾಗಿದ್ದಾರಂತೆ. ಗಾಬರಿಯಾಗುವುದು ಬೇಡ, ದತ್ತಕ ತೆಗೆದುಕೊಳ್ಳುವ ಮೂಲಕ ಅವರು ಅಮ್ಮನಾಗಿದ್ದಾರೆ.

ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೀರಂತೆ ಹೌದಾ ? ಎಂದು ಕೇಳಿದರೆ, ರವೀನಾ ಮೌನ ಗೌರಿಯಾಗುತ್ತಾರೆ. ಮತ್ತಷ್ಟು ಕೆಣಕಿದರೆ ಅದನ್ನೆಲ್ಲ ನಿಮ್ಮೊಂದಿಗೆ ಹೇಳುವುದಿಲ್ಲ . ಇಷ್ಟಕ್ಕೂ ನನ್ನ ಮಕ್ಕಳಿಗೆ ಯಾವ ಪ್ರಚಾರವೂ ಬೇಕಾಗಿಲ್ಲ ಎನ್ನುವುದರೊಂದಿಗೆ ಮತ್ತೆ ಮುಗುಮ್ಮಾಗುತ್ತಾರೆ. ಮಕ್ಕಳು ಅವರಿಗೆ ನೆಮ್ಮದಿ ತರಲಿ.

English summary
Raveena Tandon says, its a challenge to act with Ravichandran in Shakuni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada