'ಪರಿಮಳ ಲಾಡ್ಜ್' ವಿರುದ್ಧ ಕೇಸ್ ಹಾಕ್ತಾರಂತೆ ಪತ್ರಕರ್ತ ರವಿ ಬೆಳಗೆರೆ
ಕಳೆದ ವಾರದಲ್ಲಿ 'ಪರಿಮಳ ಲಾಡ್ಜ್' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಸತೀಶ್ ನೀನಾಸಂ ಮತ್ತು ಲೂಸ್ ಮಾದ ಯೋಗೇಶ್ ಒಟ್ಟಿಗೆ ನಟಿಸುತ್ತಿರುವ ಚಿತ್ರವಿದು. ಟೀಸರ್ ನೋಡಿ ಸಖತ್ ಆಗಿದೆ ಎಂದವರಿಗಿಂತ, ಹೆಚ್ಚು ಅಶ್ಲೀಲ ಪದಗಳನ್ನ ಬಳಸಲಾಗಿದೆ, ಇದು ಬೇಕಾಗಿರಲಿಲ್ಲ ಎಂಬ ಟೀಕೆಯೇ ಹೆಚ್ಚು ವ್ಯಕ್ತವಾಗಿತ್ತು.
ಇದನ್ನ ಸಮರ್ಥಿಸಿಕೊಂಡ ನಿರ್ದೇಶಕ ವಿಜಯ ಪ್ರಸಾದ್ ಇದೆಲ್ಲ ಚೇಷ್ಟೆ ಅಷ್ಟೆ. ಮನರಂಜನೆಗಾಗಿ ಇದು ಬೇಕಾಗಿದೆ ಎಂದಿದ್ದರು. ಇದೀಗ, ಪರಿಮಳ ಲಾಡ್ಜ್ ವಿರುದ್ಧ ಹಿರಿಯ ಪತ್ರಕರ್ತ ರವಿ ಬೆಳಗೆರೆ ಸಿಡಿದೆದ್ದಿದ್ದಾರೆ.
ಸಿನಿಮಾ ರಿಲೀಸ್ ಮಾಡಿದ್ರೆ ಕೇಸ್ ಹಾಕ್ತೀನಿ, ಜೈಲಿಗೆ ಕಳುಹಿಸುತ್ತೇನೆ ಎನ್ನುತ್ತಿದ್ದಾರೆ. ಅರೇ, ಪರಿಮಳ ಲಾಡ್ಜ್ ಚಿತ್ರಕ್ಕೂ ಬೆಳಗೆರೆಗೂ ಏನು ಸಂಬಂಧ ಅಂತೀರಾ? ಮುಂದೆ ಓದಿ....

ಹುಚ್ಚ ವೆಂಕಟ್ ಗಿಂತ ಡೇಂಜರ್ ಈತ
ಹುಚ್ಚ ವೆಂಕಟ್ ಮಾಡುತ್ತಿರುವ ರಂಪಾಟಗಳನ್ನ ನೋಡುತ್ತಿದ್ದರೆ ಅವರೇ ಡೇಂಜರ್ ಎನ್ನುವಂತಿದೆ. ಆದರೆ, ಹುಚ್ಚ ವೆಂಕಟ್ ಗಿಂತ ಪರಿಮಳ ಲಾಡ್ಜ್ ಸಿನಿಮಾ ಮಾಡುತ್ತಿರುವ ಆ ನಿರ್ದೇಶಕ ಡೇಂಜರ್ ಎಂದು ರವಿ ಬೆಳಗೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಿರ್ದೇಶಕ ವಿಜಯ ಪ್ರಸಾದ್ ವಿರುದ್ಧ ಕಿಡಿಕಾರಿದ್ದಾರೆ.

ಚಿತ್ರ ಬಿಡುಗಡೆ ಮಾಡಿದ್ರೆ ಜೈಲಿಗೆ ಕಳುಹಿಸುತ್ತೇನೆ
''ಪರಿಮಳ ಲಾಡ್ಜ್ ಸಿನಿಮಾ ಏನಾದರೂ ಬಿಡುಗಡೆ ಮಾಡಿದ್ರೆ ನಾನೇ ಅವರ ವಿರುದ್ಧ ಕೇಸ್ ಹಾಕುತ್ತೇನೆ. ಅವರನ್ನ ಜೈಲಿಗೆ ಕಳುಹಿಸುತ್ತೇನೆ. ಏನ್ರಿ ಅದು ಡಬಲ್ ಮೀನಿಂಗ್....ತ್ರಿಬಲ್ ಮೀನಿಂಗ್. ಇದು ಸಮಾಜಕ್ಕೆ ಮಾರಕ. ಥೂ ವಲಸು. ಮನಸ್ಸಿಗೆ ಬಂದಂತೆ ಬರೆಯುತ್ತೀರಾ'' ಎಂದು ಆಕ್ರೋಶ ಹೊರಹಾಕಿದ್ದಾರೆ.

ಟೀಸರ್ ಬಿಟ್ಟವರನ್ನ ಬಿಡಲ್ಲ
''ಈ ಟೀಸರ್ ರಿಲೀಸ್ ಮಾಡಿದವರನ್ನ ನಾನು ಬಿಡಲ್ಲ. ಈ ಟೀಸರ್ ವಿರುದ್ಧ ಕೇಸ್ ಹಾಕ್ತೀನಿ. ನಾವು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಇಂತಹದ್ದನ್ನಲ್ಲ'' ಎಂದು ಬೆಳಗೆರೆ ಪರಿಮಳ ಲಾಡ್ಜ್ ಚಿತ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಪದ ಬಳಕೆಗಾಗಿ ಭಾರಿ ವಿರೋಧ
'ಸಿದ್ಲಿಂಗು' ಮತ್ತು 'ನೀರ್ ದೋಸೆ' ಚಿತ್ರಗಳ ಬಳಿಕ ನಿರ್ದೇಶಕ ವಿಜಯ ಪ್ರಸಾದ್ 'ಪರಿಮಳ ಲಾಡ್ಜ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಟೀಸರ್ ರಿಲೀಸ್ ಆಗಿದ್ದು, ಆ ಟೀಸರ್ ನಲ್ಲಿ ಬಳಸಿರುವ ಪದಗಳ ವಿರುದ್ಧ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಮಾಧ್ಯಮದಲ್ಲಿ ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











