»   » ಕನಸುಗಾರನಾ ಅರಮನೆಯಾ ನೋಡಮ್ಮಾ...

ಕನಸುಗಾರನಾ ಅರಮನೆಯಾ ನೋಡಮ್ಮಾ...

Posted By: Staff
Subscribe to Filmibeat Kannada

ವಿಶಾಲ ಪ್ರಾಂಗಣ. ಒಳಹೊಕ್ಕರೆ ಅಂಗಳದಲ್ಲೊಂದು ಹೊಸ ಸ್ಯಾಂಟ್ರೋ. ಬಗಲಲ್ಲೇ ಮೆತ್ತ ಮೆತ್ತನೆ ಸೋಫ. ಕಣ್ಣುಗಳ ಅತ್ತಿತ್ತ ಆಡಿಸಿದರೆ ಇಂಥಾ ಇನ್ನೂ ಎರಡು ಮೂರು ಸೋಫಾ ಸೆಟ್ಟು. ಸ್ಟೇನ್‌ಲೆಸ್‌ ಸ್ಟೀಲ್‌ ಕೈಪಿಡಿಯ ಸ್ಟೇರ್‌ಕೇಸ್‌. ಮಹಡಿಯಿಂದ ಇಣುಕಿ ನೋಡುವ ಟೆಡ್ಡಿ ಬೇರ್‌. ಗಾಜಿನ ಅಲಂಕಾರವೂ ಕಡಿಮೆಯಿಲ್ಲ. ಎರಡು ಹೋಂ ಬಾರ್‌. ಸ್ವಿಮ್ಮಿಂಗ್‌ ಪೂಲ್‌. ಅಕ್ವೇರಿಯಂ. ಚಿಮ್ಮುವ ಕಾರಂಜಿ. ಇದು ಕನಸುಗಾರನರಮನೆ. ರವಿ ಕಟ್ಟಿದ ಸ್ಥಳಮನೆ. ಖರ್ಚು ಕೇವಲ 80 ಲಕ್ಷ ರುಪಾಯಿ !

ರಾಮು, ಕೆಸಿಎನ್‌ ಚಂದ್ರಶೇಖರ್‌, ಬಸಂತ್‌ ಕುಮಾರ್‌ ಪಾಟೀಲ್‌, ಮುಖ್ಯಮಂತ್ರಿ ಚಂದ್ರು ಎಲ್ಲಾ ಬಂದು ಮನೆ ನೋಡಿಕೊಂಡು ಹೋದರು. ಮುಖ್ಯಮಂತ್ರಿ ಚಂದ್ರು ಅಂತೂ ಮನೆ ಕಟ್ಟಿಸಿದರೆ ಹೀಗೇ ಇರಬೇಕು ನೋಡಪ್ಪಾ ಅಂತ ಕುಣಿದು ಕುಪ್ಪಳಿಸಿದರು. ರವಿ ಅಮ್ಮ ಕಣ್ಣರಳಿಸಿ ಅಬ್ಬಾ ಅಂತ ಬಾಯಿ ಮುಚ್ಚಿದರು. ಹೆಂಡತಿ, ತಮ್ಮ ಬಾಲಾಜಿ ಕುಟುಂಬ ಎಲ್ಲಾ ಬಂದು ನಿಮಿಷಗಳ ಕಾಲ ಸಂಸಾರ ನಡೆಸಿದ್ದೂ ಆಯಿತು. ಇದು ರವಿ ಸ್ವಂತ ಮನೆಯಾದರೂ ಜಾಗೆ ಬಾಡಿಗೆಯದ್ದು. 80 ಲಕ್ಷ ರುಪಾಯಿ ಮನೆ ಈಗ ಹೇಗೆ ಚೆಂದ ಕಾಣುತ್ತಿದೆಯೋ, ಹಾಗೇ ಮಡಿಸಿ ಹೋಗುತ್ತದೆಯಾ ಅನ್ನುವ ಆತಂಕ ಹೊತ್ತು ಸಾಗಿದವರೇ ಹೆಚ್ಚು. ಯಾಕೆಂದರೆ, ಇದು ಕಂಠೀರವ ಸ್ಟುಡಿಯೋದಲ್ಲಿ 'ಏಕಾಂಗಿ"ಗಾಗಿ ರವಿ ಹಾಕಿಸಿರುವ ಸೆಟ್‌.

ರವಿ ಸ್ಟೈಲೇ ಅದು. ಕೇಕ್‌ನಲ್ಲಿ ಮಂಚ ಮಾಡಿಸುತ್ತಾರೆ. ಪಾರಿವಾಳದ ಪುಕ್ಕ ಹಿಡೀತಾರೆ. ಹಂಸದ ಹಿಂದೆ ಓಡ್ತಾರೆ. ಗಾಜು, ನೀರಿನ ಪಾರದರ್ಶಕ ಗುಣಗಳನ್ನು ಸಿಕ್ಕಾಪಟ್ಟೆ ಎನ್‌ಕ್ಯಾಷ್‌ ಮಾಡ್ಕೋತಾರೆ. ಹಿಮ ತಂದು ಸುರಿತಾರೆ. ದಿಂಬು ಹರಿದು, ಹತ್ತಿ ಮಳೆಯಲ್ಲಿ ತೋಯುತ್ತಾರೆ, ತೋಯಿಸ್ತಾರೆ. ಮನೆಯಲ್ಲಿ ಬೈಕು ಓಡಿಸ್ತಾರೆ. ಗಾಜು ಒಡೆದುಹಾಕೋ ಪ್ರಾಜೆಕ್ಟಿಗೂ ಹಿಂದೂಮುಂದೂ ನೋಡಿಲ್ಲ. ಹ್ಞಾಂ, ಏಕಾಂಗಿ ಸೆಟ್‌ ಇನ್ನೂ ಒಂದು ಹೆಜ್ಜೆ ಮುಂದೆ. ಮನೆಯಲ್ಲಿ ಕಾರು ನಿಲ್ಲಿಸೋದಷ್ಟೇ ಅಲ್ಲ, ಓಡಾಡಿಸುವಷ್ಟು ಜಾಗೆ ಇದೆ.

ಮಾರುಕಟ್ಟೆ ಕಳಕೊಂಡಿರುವ ರಮ್ಯಕೃಷ್ಣಮತ್ತೆ ರವಿ ಜೋಡಿಯಾಗಿರುವುದು ಈ ಚಿತ್ರದ ಇನ್ನೊಂದು ವಿಶೇಷ. ಏಕಾಂಗಿಯ ಮುಕ್ಕಾಲು ಭಾಗ ರವಿ ಕನಸಿನರಮನೆಮಯವಾಗಲಿದೆ. ಸಿಡ್ನಿಗೆ ಹೋಗಿ, ಕಮಲ್‌- ಮೊನಿಷಾ ಮಾದರಿಯಲ್ಲೇ ಕಾಂಗರೂಗಳ ಜೊತೆ ಕುಣಿದು, ಒಂದು ಹಾಡು ಚಿತ್ರಿಸಿಕೊಂಡು ಬರುವ ಇರಾದೆಯೂ ರವಿಗಿದೆ. ಓ ನನ್ನ ನಲ್ಲೆಗೆ 40 ಲಕ್ಷ ರುಪಾಯಿ ಸೆಟ್‌ ಹಾಕಿದ್ದ ರವಿ, ಈ ಅರಮನೆ ಕಟ್ಟಿಸಿದ್ದು ಕಲೆಗಾರ ಅಶೋಕ್‌ ಕುಮಾರ್‌ ಮೂಲಕ. ಅಶೋಕ್‌ ಕುಮಾರ್‌ ಹೇಳುವಂತೆ ಅವರ ಜೀವಮಾನದ ಮನೆಯಿದು !

ಮುಖದಲ್ಲಿ ನಗೆ ಹೊತ್ತ ರವಿ ಅರಮನೆಯಲ್ಲಿ ಮಾತಾಡಿದ್ದು ಹೀಗೆ... 'ಈ ಸಿನಿಮಾದಲ್ಲಿ 8 ಹಾಡುಗಳಿರ್ತವೆ. ಅವುಗಳಲ್ಲಿ ಒಂದು ಹಾಡು 15 ನಿಮಿಷದಷ್ಟು ದೊಡ್ಡದು. ಸೆಟ್‌ ನೋಡಿದರೇನೇ ಖುಷಿ ಆಗುತ್ತೆ. ಸಿನಿಮಾ ಆದ ಮೇಲೂ ಇದನ್ನ ಮಡಿಸಿಡೋದು ಬೇಡ ಅನ್ನೋದು ನನ್ನ ಆಸೆ. ಕಂಠೀರವ ಸ್ಟುಡಿಯೋದವರ ಜೊತೆ ಒಂದು ಒಪ್ಪಂದ ಮಾಡ್ಕೊಳೋಣ ಅಂದುಕೊಂಡಿದ್ದೇನೆ. ಇದೇ ಮನೆಯನ್ನ ಬೇರೆ ನಿರ್ಮಾಪಕರಿಗೂ ಬಾಡಿಗೆಗೆ ಕೊಡಬಹುದು".

ಕೈತುಂಬಾ, ಅಲ್ಲಲ್ಲ ಮೈತುಂಬಾ ಕೆಲಸ ಮೆತ್ತಿಕೊಂಡಿರುವ ರವಿ ನಟ/ಗೀತಸಾಹಿತಿ/ಸಂಗೀತ ಸಂಯೋಜಕ/ಕತೆಗಾರ/ಸಂಭಾಷಣಾಕಾರ ಎಲ್ಲವೂ ಹೌದು. ಏನೇ ಆದರೂ, ಇವತ್ತಿಗೂ ಜೀವಂತವಾಗಿರುವುದು ಕನಸುಗಾರನಾಗಿಯೇ ಅಲ್ಲವೇ?

English summary
Ravichandrans new home, the cinema might never saw !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada