ಮಗಳ ಮದುವೆ ಬಗ್ಗೆ 'ಕನಸುಗಾರ' ಕಂಡ ಈ ಕನಸು ಈಡೇರುತ್ತಾ?
Recommended Video
ಸೆಲೆಬ್ರಿಟಿ ಮನೆಯ ಮದುವೆ ಅಂದ್ರೆ ಜನಸಾಗರ ಸೇರುತ್ತೆ. ಸಂಬಂಧಿಕರು, ಬಂಧು-ಮಿತ್ರರು ಯಾರು ಎಂಬುದೇ ಗೊತ್ತಾಗದಂತೆ ನೂಕುನುಗ್ಗಲು ಉಂಟಾಗುತ್ತೆ. ದೂರದಿಂದ ಬಂದ ಸ್ಟಾರ್ ನಟರು ಬೌನ್ಸರ್ ಗಳ ಮಧ್ಯೆ ಹೀಗೆ ಬಂದು ಹಾಗೆ ಹೋಗ್ತಾರೆ.
ಡಾ ವಿಷ್ಣುವರ್ಧನ್-ಭಾರತಿ ಮದುವೆಯಿಂದ ಹಿಡಿದು ಇತ್ತೀಚಿನ ವರ್ಷದಲ್ಲಿ ನಡೆದ ಯಶ್-ರಾಧಿಕಾ ಪಂಡಿತ್ ಮದುವೆವರೆಗೂ ನಡೆದು ಬಂದಿರುವುದು ಹಾಗೆ. ಅಷ್ಟೇ ಯಾಕೆ ಶಿವರಾಜ್ ಕುಮಾರ್ ಮಗಳ ಮದುವೆಯಲ್ಲಿ ನಿಲ್ಲುವುದಕ್ಕೂ ಜಾಗವಿರಲಿಲ್ಲ.
ಇಂತಹ ಮದುವೆಗಳಲ್ಲಿ ಮಾಧ್ಯಮಗಳು ಕೂಡ ಸ್ವಲ್ಪ ಹೆಚ್ಚು ಫೋಕಸ್ ಮಾಡುತ್ತೆ. ಇದರಿಂದ ಸಂಭ್ರಮ, ಖಾಸಗಿತನ ಎಲ್ಲವನ್ನ ಕಳೆದುಕೊಳ್ಳುತ್ತೇವೆ ಎಂಬ ಬೇಸರ ಸೆಲೆಬ್ರಿಟಿಗಳಿಗಿದೆ. ಹಾಗಾಗಿ, ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಬಗ್ಗೆ ಇಂತಹದೊಂದು ಕನಸು ಹೊಂದಿದ್ದಾರೆ. ಇದು ನೆರವೇರುತ್ತಾ ಎಂಬುದು ಈಗ ಪ್ರಶ್ನೆಯಾಗಿದೆ. ಏನದು? ಮುಂದೆ ಓದಿ.....

ಮಾಧ್ಯಮಗಳ ನಿಯಂತ್ರಣ
ರವಿಚಂದ್ರನ್ ಅವರು ಇತ್ತೀಚಿಗಷ್ಟೆ ಮಾಧ್ಯಮದವರನ್ನ ಮನೆಗೆ ಆಹ್ವಾನಿಸಿದ್ದರು. ಮಗಳ ಮದುವೆಗೆ ಎಲ್ಲರನ್ನ ವೈಯಕ್ತಿಕವಾಗಿ ಆಹ್ವಾನ ನೀಡಲು ಎಂಬುದು ಮುಖ್ಯ ಕಾರಣವಾಗಿತ್ತು. ಇದೇ ವೇಳೆ ವಿಡಿಯೋ ಕವರೇಜ್ ಬೇಡ, ನೀವೆಲ್ಲ ನಮ್ಮ ಮನೆಯವರಂತೆ ಬರಬೇಕು, ನಮ್ಮ ಸಂತೋಷದಲ್ಲಿ ನೀವು ಭಾಗಿಯಾಗಬೇಕು ಎಂದು ಮನವಿ ಮಾಡಿದ ರವಿಚಂದ್ರನ್ ಮಾಧ್ಯಮದವರನ್ನ ಪ್ರೀತಿಯಿಂದ ಕಟ್ಟಿಹಾಕಿದ್ದಾರೆ. ಮಾಧ್ಯಮದವರು ಇಲ್ಲ ಅಂದ್ರೆ ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರು ಬಂದು ಹೋಗುವುದಕ್ಕೆ ಸ್ವಲ್ಪ ಆರಾಮಾಗುತ್ತೆ ಎಂಬ ಅಭಿಪ್ರಾಯ.

ಸೆಲೆಬ್ರಿಟಿಗಳಿಗೆ ಹೆಚ್ಚಿನ ಸಮಯ
ಸಾಮಾನ್ಯವಾಗಿ ಇಂತಹ ಮದುವೆಗಳಿಗೆ ಬರುವ ಸೆಲೆಬ್ರಿಟಿಗಳು ಹೆಚ್ಚು ಸಮಯ ಇರಲ್ಲ. ಹೆಚ್ಚು ಜನರು ನೂಕು ನುಗ್ಗಲು, ಜೊತೆಗೆ ಮಾಧ್ಯಮದವರು ಕೂಡ ಇರುವುದರಿಂದ ಹೀಗೆ ಬಂದು ಹಾಗೆ ಹೋಗ್ತಾರೆ. ಅದು ಆಗುವುದು ಬೇಡ. ಅವರು ಖುಷಿಯಿಂದ ಬಂದು ಸ್ವಲ್ಪ ಸಮಯ ನಮ್ಮೊಂದಿಗೆ ಕುಳಿತುಕೊಂಡು ಸಂಭ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ರವಿಚಂದ್ರನ್ ಆಸೆ.

ಬೌನ್ಸರ್ ಗಳು ಬೇಡ
ಸೆಲೆಬ್ರಿಟಿಗಳು ಬರ್ತಾರೆ, ಅವರನ್ನ ಬಾಗಿಲಿನಿಂದ ಸುರಕ್ಷಿತವಾಗಿ ವೇದಿಕೆಯವರೆಗೂ ಕರೆದುಕೊಂಡು ಬರಲು ಕಷ್ಟ. ಹಾಗಾಗಿ, ಸಹಜವಾಗಿ ಬೌನ್ಸರ್ ಗಳನ್ನ ನೇಮಿಸಿಕೊಳ್ಳುತ್ತಾರೆ. ಅವರ ಸುತ್ತ ಸರಪಳಿ ಸೃಷ್ಟಿಸಿ ಕರೆದುಕೊಂಡು ಬಂದು ಮತ್ತೆ ಎಳೆದುಕೊಂಡು ಹೋಗಿ ಕಾರಿಗೆ ಎಸೆಯುತ್ತಾರೆ. ಅವರು ಊಟ ಕೂಡ ಮಾಡಲ್ಲ. ಅದು ಹಾಗೆ ಆಗಬಾರದು. ಆರಾಮಾಗಿ ಬರಬೇಕು, ಊಟ ಮಾಡಬೇಕು. ಆರಾಮಾಗಿ ಹೋಗಬೇಕು ಎನ್ನುವುದು ಕ್ರೇಜಿಸ್ಟಾರ್ ಬಯಕೆ.

ಚೆನ್ನಾಗಿ ಊಟ ಮಾಡಬೇಕು
ಮದುವೆ ಮನೆ ಅಂದ್ಮೇಲೆ ಬಗೆ ಬಗೆಯ ಊಟಗಳು ಸಿದ್ಧವಿರುತ್ತೆ. ಎಲ್ಲ ರೀತಿಯ ಊಟವನ್ನ ಸವಿಯಬೇಕು. ಆದ್ರೆ, ಆತುರದಲ್ಲಿ ಒಂದೆರೆಡು ಬಗೆಯ ತಿಂಡಿ ತಿಂದು ಉಳಿದ ಊಟವನ್ನ ತಿನ್ನುವುದಿಲ್ಲ. ಅಡುಗೆ ಮಾಡಿಸುವುದೇ ಖುಷಿಯಿಂದ ತಿನ್ನಲು. ಅದೇ ಆಗದೇ ಇದ್ದರೇ, ಅಷ್ಟು ಊಟ ಮಾಡಿಸಿ ಕೂಡ ನಷ್ಟವಾಗುತ್ತೆ ಎಂಬ ಅಭಿಪ್ರಾಯವೂ ಅವರದ್ದು.

ಕನಸುಗಾರನ ಕನಸು ನನಸು ಆಗುತ್ತಾ?
ಮಗಳ ಮದುವೆ ಬಗ್ಗೆ ಇಷ್ಟೆಲ್ಲಾ ಕನಸು ಕಂಡಿರುವ ರವಿಚಂದ್ರನ್ ಕೆಲವು ವಿಶೇಷವಾದ ತಯಾರಿಗಳನ್ನ ಕೂಡ ಅವರೇ ಮುಂದೆ ನಿಂತು ಮಾಡುತ್ತಿದ್ದಾರೆ. ಕಾಸ್ಟ್ಯೂಮ್ ಡಿಸೈನ್, ಆರತಕ್ಷತೆ ವೇದಿಕೆ, ಮದುವೆ ಆಮಂತ್ರಣ ಪತ್ರಿಕೆ, ಹೀಗೆ ಎಲ್ಲದರಲ್ಲೂ ತುಂಬಾ ಇಷ್ಟಪಟ್ಟು ತಲೆ ಓಡಿಸಿ ವಾಹ್ ಎನ್ನುವ ರೀತಿ ಮದುವೆ ಮಾಡ್ತಿದ್ದಾರೆ. ಈ ಕನಸು ನನಸು ಆಗುತ್ತಾ ಎಂಬುದೇ ಈಗ ಪ್ರಶ್ನೆ?


Click it and Unblock the Notifications











