"ದರ್ಶನ್‌ನ ಕೆದಕಬಾರದು.. ಕೆಣಕಬಾರದು.. ಕೆಣಕಿದರೆ ಫೈಯರ್ ಆಗುತ್ತೆ": ರವಿಚಂದ್ರನ್
ನೇರ ನಡೆ, ನೇರ ನುಡಿಯಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ನಟ ದರ್ಶನ್. ಕಡ್ಡಿ ತುಂಡಾಗುವಂತೆ ಮಾತನಾಡುವ ದರ್ಶನ್, ಯಾರಿಗೂ ಜಗ್ಗಲ್ಲ, ಯಾರಿಗೂ ಬಗ್ಗಲ್ಲ. ಕೆಲವೊಮ್ಮೆ ತಮ್ಮ ನೇರ ನಡೆ ನುಡಿಯಿಂದಲೇ ದಾಸ ವಿವಾದಗಳನ್ನು ಸೃಷ್ಟಿಸಿಕೊಂಡಿರೋದು ಇದೆ. ಆದರೆ ಅದಕ್ಕೆಲ್ಲಾ ತಲೆ ಕೆಡಸಿಕೊಳ್ಳದೇ ಚಾಲೆಂಜಿಂಗ್ ಸ್ಟಾರ್ ಮುನ್ನುಗ್ಗುತ್ತಿರುತ್ತಾರೆ.
ಹತ್ತಿರದಿಂದ ಬಲ್ಲವರಿಗೆ ಮಾತ್ರ ದರ್ಶನ್ ವ್ಯಕ್ತಿತ್ವ ಎಂಥದ್ದು ಎನ್ನುವುದು ಗೊತ್ತು. ಇದೀಗ ದರ್ಶನ್ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ತೀರ್ಪುಗಾರರಾಗಿ ದರ್ಶನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಜ್ಯೂನಿಯರ್ ದರ್ಶನ್ ಅಂತ ಗುರ್ತಿಸಿಕೊಂಡಿರೋ ಅವಿನಾಶ್ ಶೋಗೆ ಈ ವಾರ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಥೇಟ್ ದಾಸನ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

ಅವಿನಾಶ್ ಎಂಟ್ರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈ ವೇಳೆ ತೀರ್ಪುಗಾರರಾದ ರವಿಚಂದ್ರನ್ ಮಾತನಾಡಿ ದರ್ಶನ್ ವ್ಯಕ್ತಿತ್ವವನ್ನು ವಿವರಿಸಿದರು. "ದರ್ಶನ್ ಹೆಂಗೆ ಅಂದ್ರೆ ಸುಮ್ಮನಿದ್ದರೆ ಬಹಳ ವಿನಯ ಅವ್ನು. ಇಲ್ಲದಿದ್ದರೆ ಅದಕ್ಕೆ ವಿರುದ್ಧ ಅಷ್ಟೆ. ಸುಮ್ಮನೆ ಬಿಟ್ಟರೆ ಅವನ ಪಾಡಿಗೆ ಮಗು ತರ ಹೋಗ್ತಾ ಇರ್ತಾನೆ ಅವನ ಕೆಲಸ ಮಾಡ್ಕೊಂಡು. ಅವನನ್ನು ಕೆದಕಬಾರದು. ಕೆಣಕಬಾರದು, ಆಗ ಒಳ್ಳೆ ವ್ಯಕ್ತಿ"
"ದರ್ಶನ್‌ನ ಕೆಣಕಬಾರದು. ಕೆಣಕಿದರೆ ಫೈಯರ್ ಆಗುತ್ತದೆ ಅಷ್ಟೆ. ಅದು ನಾನು ಅವನನ್ನು ನೋಡಿ ಅರ್ಥ ಆಗಿರೋದು. ಯಾಕಂದರೆ 2 ಸಿನಿಮಾದಲ್ಲಿ ಅವನೊಟ್ಟಿಗೆ ನಟಿಸಿದ್ದೇನೆ. ನಾನು ಯಾವಾಗಳು ಹೇಳ್ತಿರ್ತೀನಿ. ನೀನು ಯಾವಾಗಲೂ ದುರ್ಯೋಧನ, ರಾವಣ ರೀತಿಯ ಪೌರಾಣಿಕ ಪಾತ್ರ ಮಾಡು ಅಂತ. ಸದ್ಯಕ್ಕೆ ನಿನ್ನ ಬಿಟ್ಟರೆ ಇಂತಹ ಪಾತ್ರ ಮಾಡಲು ಕರ್ನಾಟಕದಲ್ಲಿ ಯಾರು ಇಲ್ಲ ಅಂತ. ಡಾ. ರಾಜ್‌ಕುಮಾರ್ ಬಿಟ್ಟರೆ ಪೌರಾಣಿಕ ಪಾತ್ರಗಳಲ್ಲಿ ಬೆರೆ ಯಾರನ್ನು ನೋಡೋಕೆ ಆಗಲಿಲ್ಲ. ಮತ್ತೆ ಅಂತಹ ಪರ್ಸನಾಲಿಟಿ ಬೇಕು ಅಂದ್ರೆ ದರ್ಶನ್ ಒಬ್ನೆ ಇರೋದು" ಎಂದಿದ್ದಾರೆ.
ಈ ಹಿಂದೆ ಮಜಾಭಾರತ ಕಾಮಿಡಿ ಶೋನಲ್ಲಿ ಅವಿನಾಶ್ ಸ್ಪರ್ಧಿಯಾಗಿದ್ದರು. ಆಟೋ ಡ್ರೈವರ್ ಅವಿನಾಶ್ ಮೂಲತಃ ಚಿಕ್ಕಮಗಳೂರಿನವರು. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ರೀತಿ ಟಿಕ್‌ಟಾಕ್ ವಿಡಿಯೋಗಳನ್ನು ಮಾಡಿ ಗಮನ ಸೆಳೆದಿದ್ದರು. ಅವಿನಾಶ್ ನಡೆ, ಮಾತನಾಡುವ ಸ್ಟೈಲ್, ಬಾಡಿ ಲಾಂಗ್ವೇಜ್ ಎಲ್ಲವೂ ಚಾಲೆಂಜಿಂಗ್ ಸ್ಟಾರ್‌ನ ನೆನಪಿಸುತ್ತದೆ. ದರ್ಶನ್ ಜತೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ರಾಮ್ ಕೂಡ ಜ್ಯೂನಿಯರ್ ದರ್ಶನ್ ಅವಿನಾಶ್ ಸ್ಟೈಲ್ ನೋಡಿ ಬೆರಗಾಗಿದ್ದರು.
ದರ್ಶನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಕಾಟೇರ' ಬಳಿಕ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಇನ್ನು ಇತ್ತೀಚೆಗೆ ದರ್ಶನ್ ಕಾಲಿಗೆ ಪೆಟ್ಟಾಗಿತ್ತು. ಚಿಕಿತ್ಸೆ ಪಡೆದು ಮತ್ತೆ 'ಕಾಟೇರ' ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಅದರ ಬೆನ್ನಲ್ಲೇ ಸ್ನೇಹಿತರ ಜೊತೆ ಬ್ರಿಟನ್ ಪ್ರವಾಸಕ್ಕೆ ಹೋಗಿ ಬಂದಿದ್ದರು.
ಇತ್ತೀಚೆಗೆ ದರ್ಶನ್ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ್ದರು. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದು ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಕೊನೆಗೆ 'ಮೆಜೆಸ್ಟಿಕ್' ಚಿತ್ರದಿಂದ ಹೀರೊ ಆದರು. ಬಳಿಕ ಸಾಕಷ್ಟು ತಮ್ಮ ಸಿನಿಕರಿಯರ್‌ನಲ್ಲಿ ಸಾಕಷ್ಟು ಏಳುಬೀಳು ಕಂಡು ಇವತ್ತು ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.


Click it and Unblock the Notifications











