'ಮನೆದೇವ್ರು' ಪುತ್ರಿ ಮದ್ವೆ ಸಂಭ್ರಮ : ಸುಧಾರಾಣಿಗೆ ಸಿಕ್ತು ಆಹ್ವಾನ
ನಟ ರವಿಚಂದ್ರನ್ ಯಾವಾಗಲೂ ಸಿನಿಮಾ.. ಸಿನಿಮಾ.. ಸಿನಿಮಾ.. ಎನ್ನುವ ವ್ಯಕ್ತಿ. ಆದರೆ, ಈಗ ರವಿಚಂದ್ರನ್ ಸಿನಿಮಾದ ಕೆಲಸದಿಂದ ಕೊಂಚ ಬಿಡುವು ಪಡೆದಿದ್ದಾರೆ. ಕಾರಣ ಕ್ರೇಜಿಸ್ಟಾರ್ ಈಗ ಮಗಳ ಮದುವೆ ಮಾಡುತ್ತಿದ್ದಾರೆ.
ಮಗಳ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ. 'ಹಬ್ಬ ಹಬ್ಬ ಮದುವೆ ಹಬ್ಬ...' ಅಂತ ಕ್ರೇಜಿ ಕುಟುಂಬ ಹಾಡು ಹೇಳುತ್ತಿದೆ. ಸದ್ಯಕ್ಕೆ ಈಗ ತಮ್ಮ ಮಗನ ಜೊತೆಗೆ ಅತಿಥಿಗಳನ್ನು ಆಮಂತ್ರಿಸುವ ಕೆಲಸದಲ್ಲಿ ರವಿಚಂದ್ರನ್ ತೊಡಗಿದ್ದಾರೆ.
ಇತ್ತೀಚಿಗಷ್ಟೆ ನಿರ್ದೇಶಕ ರಘುರಾಮ್ ಮನೆಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿದ್ದ ರವಿಚಂದ್ರನ್ ಈಗ ಜಗ್ಗೇಶ್ ಹಾಗೂ ಸುಧಾರಾಣಿ ರವರ ಮನೆಗೆ ಹೋಗಿ ಮದುವೆಗೆ ಬನ್ನಿ ಎಂದು ಆಮಂತ್ರಣ ನೀಡಿದ್ದಾರೆ. ಈ ವೇಳೆ 'ಮನೆದೇವ್ರು' ಜೋಡಿ ಜೊತೆಗೆ ಫೋಟೋ ತೆಗೆದುಕೊಂಡಿದೆ. ಮುಂದೆ ಓದಿ...

ಸುಧಾರಾಣಿಗೆ 'ಮನೆದೇವ್ರು' ಆಮಂತ್ರಣ
'ಮನೆದೇವ್ರು' ಸಿನಿಮಾದಲ್ಲಿ ರವಿಚಂದ್ರನ್ ಗೆ ಜೋಡಿಯಾಗಿದ್ದು ಸುಧಾರಾಣಿ. ಈಗ ಸುಧಾರಾಣಿ ಅವರಿಗೆ ತಮ್ಮ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ರವಿಚಂದ್ರನ್, ಸುಧಾರಾಣಿ, ರವಿಚಂದ್ರನ್ ಪುತ್ರ ವಿಕ್ರಮ್, ಸುಧಾರಾಣಿ ಪುತ್ರಿ ನಿಧಿ ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ.
ಸಂತಸ ಹಂಚಿಕೊಂಡ ಸುಧಾರಾಣಿ
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ಸುಧಾರಾಣಿ ''ಪ್ರೇಮಲೋಕದ ಸರದಾರ ಅವರ ಮಗಳ ಮದುವೆ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದರು. ಅವರನ್ನು ಭೇಟಿ ಮಾಡುವುದು, ಮಾತನಾಡುವುದು ಖುಷಿ ಕೊಡುತ್ತದೆ. ನಾವೆಲ್ಲರೂ ಒಂದು ಕುಟುಂಬ ಎಂದು ಅವರು ಹೇಳಿದಾಗ, ಅದು ಹಾಗೆ ಉಳಿಯುತ್ತದೆ'' ಎಂದಿದ್ದಾರೆ.

ಇತ್ತೀಚಿಗೆ 'ಪಡ್ಡೆ ಹುಲಿ' ಚಿತ್ರದಲ್ಲಿ ನಟನೆ
'ಮನೆದೇವ್ರು', 'ಅಭಿಮನ್ಯು', 'ಲವ್ ಯೂ ಆಲಿಯಾ' ಸಿನಿಮಾಗಳಲ್ಲಿ ರವಿಚಂದ್ರನ್ ಹಾಗೂ ಸುಧಾರಾಣಿ ನಟಿಸಿದ್ದರು. ಕಳೆದ ವಾರ ಬಿಡುಗಡೆಯಾದ 'ಪಡ್ಡೆ ಹುಲಿ' ಸಿನಿಮಾದಲ್ಲಿಯೂ ರವಿಚಂದ್ರನ್ ಹಾಗೂ ಸುಧಾರಾಣಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 'ಮನೆದೇವ್ರು' ಸಿನಿಮಾ ಮಾಡಿದಾಗಲೇ ಈ ಜೋಡಿ ಕನ್ನಡದ ಬೆಸ್ಟ್ ಫೇರ್ ಗಳಲ್ಲಿ ಒಂದಾಗಿತ್ತು.

ನಟ ಜಗ್ಗೇಶ್ ಗೆ ತಲುಪಿದ ಕರೆಯೋಲೆ
ತಮ್ಮ ಚಿತ್ರರಂಗದ ಸ್ನೇಹಿತ ನಟ ಜಗ್ಗೇಶ್ ರನ್ನು ಸಹ ಮಗಳ ಮದುವೆಗೆ ರವಿಚಂದ್ರನ್ ಆಹ್ವಾನ ಮಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ಖುಷಿ ಹಂಚಿಕೊಂಡಿದ್ದಾರೆ ಜಗ್ಗೇಶ್. ರವಿಚಂದ್ರನ್ ಹಾಗೂ ಜಗ್ಗೇಶ್ 'ರಣಧೀರ', 'ಯಾರೇ ನೀನು ಚಲುವೆ', 'ರಾಮಕೃಷ್ಣ' 'ಟಾಟಾ ಬಿರ್ಲಾ' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಮೇ 28 ಹಾಗೂ 29 ರಂದು ವಿವಾಹ
ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹ ಮೇ ತಿಂಗಳಿನ 28 ಹಾಗೂ 29 ರಂದು ನಡೆಯಲಿದೆ. ಬೆಂಗಳೂರಿನ ಅರಮನೆಯಲ್ಲಿ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ರವಿಚಂದ್ರನ್ ಮಗಳು ಗೀತಾಂಜಲಿ ಉದ್ಯಮಿ ಅಜಯ್ ಮಡದಿ ಆಗಲಿದ್ದಾರೆ. ಕಳೆದ ಫೆಬ್ರವರಿ 23 ರಂದು ಇವರ ನಿಶ್ಚಿತಾರ್ಥ ನಡೆದಿತ್ತು.

ಇದು 3D ಆಮಂತ್ರಣ ಪತ್ರಿಕೆ
ಗೀತಾಂಜಲಿ ಹಾಗೂ ಅಜಯ್ ಮದುವೆಗೆ 3D ಆಮಂತ್ರಣ ಪತ್ರಿಕೆಯನ್ನು ಮಾಡಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಸುಂದರ ಚಿತ್ರ ಇದೆ. ಮದುವೆಯ ವಿವರ ಹಾಗೂ ತಮ್ಮ ಕುಟುಂಬದವರ ಹೆಸರು ಅಲ್ಲಿದೆ. ವಿಶೇಷ ಅಂದರೆ, ಈ ರೀತಿ 3D ಮದುವೆ ಆಮಂತ್ರಣ ಪತ್ರಿಕೆಯನ್ನು ಮಾಡಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲಂತೆ. ಈ ಒಂದು ಕಾರ್ಡ್ ಗೆ 3 ಸಾವಿರ ಎಂದು ಅಂದಾಜಿಸಲಾಗಿದೆ.


Click it and Unblock the Notifications











