ರವಿಚಂದ್ರನ್ ಸಿನಿಮಾದ 'ದ ಜಡ್ಜ್‌ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಟಿಸಿರುವ ಹೊಸ ಸಿನಿಮಾ 'ದ ಜಡ್ಜ್ ಮೆಂಟ್' ಶೂಟಿಂಗ್ ಕಂಪ್ಲೀಟ್ ಆಗಿದೆ. ಲೀಗಲ್ ಥ್ರಿಲ್ಲರ್ ಜಾನರ್ ಸಿನಿಮಾವನ್ನು ಅಣ್ಣಾವ್ರ ಹುಟ್ಟುಹಬ್ಬದಂದು ಮುಗಿಸಿರುವುದು ವಿಶೇಷ.
ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ವೃತ್ತಿ ಬದುಕಿನ ವಿಶಿಷ್ಠ ಸಿನಿಮಾ. ಈ ಹಿಂದೆ ರವಿಚಂದ್ರನ್ ಹಲವು ಬಾರಿ ಕಪ್ಪು ಕೋಟು ಧರಿಸಿ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಮ್ಮೆ ವಕೀಲರಾಗಿಯೇ ನಟಿಸಿದ್ದರೂ, ಇದೊಂದು ಲೀಗಲ್ ಥ್ರಿಲ್ಲರ್ ಆಗಿರುವುದರಿಂದ ಪ್ರೇಕ್ಷಕರಿಗೆ ಬೇರೊಂದು ರೀತಿಯಲ್ಲಿಯೇ ಮನರಂಜನೆ ಸಿಗಲಿದೆ ಅನ್ನೋ ಚಿತ್ರತಂಡದ ವಾದ.

ಅಣ್ಣಾವ್ರ ಹುಟ್ಟುಹಬ್ಬದಂದೇ 'ದ ಜಡ್ಜ್‌ಮೆಂಟ್' ಸಿನಿಮಾದ ಶೂಟಿಂಗ್ ಅನ್ನು ಮುಗಿಸಲಾಗಿದೆ. ಕಳೆದ ವರ್ಷ ಇದೇ ದಿನದಂದು ಸಿನಿಮಾಗೆ ಚಾಲನೆ ನೀಡಲಾಗಿತ್ತು. ಆ ಕ್ಷಣವನ್ನು ನಿರ್ದೇಶಕ ಗುರುರಾಜ ಕುಲಕರ್ಣಿ ನೆನಪಿಸಿಕೊಂಡಿದ್ದಾರೆ. "ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ, ನಮ್ಮ ಚಿತ್ರದ ಚಿತ್ರೀಕರಣ ಕಳೆದವರ್ಷ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಮುಕ್ತಾಯವಾಗಿದೆ. " ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಸಿನಿಮಾವನ್ನು ಮೇ ತಿಂಗಳಲ್ಲಿ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.
ಈ ಸಿನಿಮಾ ಮತ್ತೊಂದು ವಿಶೇಷ ಅಂದರೆ, ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ 'ದ ಜಡ್ಜ್ ಮೆಂಟ್' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಮುಗಿದ ಖುಷಿಯಲ್ಲಿದ್ದ ಧನ್ಯಾ "ಈ ಸಿನಿಮಾದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ. ಈ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ" ಎಂದು ಹೇಳಿದ್ದಾರೆ.

ಅಂದಹಾಗೆ ಈ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಕೂಡ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇವರೊಂದಿಗೆ ದಿಗಂತ್ , ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ನಟಿಸಿದ್ದಾರೆ. ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗೂ ರಾಜಶೇಖರ ಪಾಟೀಲ್ ಸಿನಿಮಾವನ್ನು ನಿರ್ಮಿಸಿದ್ದಾರೆ.


Click it and Unblock the Notifications











