"ಯಶ್, ದರ್ಶನ್ ವರ್ಷಕ್ಕೆ 3 ಸಿನ್ಮಾ ಮಾಡಿಬಿಟ್ರೆ, 2 ವರ್ಷಕ್ಕೆ ಮನೆಗೆ ಕಳ್ಸಿಬಿಡ್ತಿರಾ"
ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಒಳ್ಳೆ ಸಿನಿಮಾಗಳು ಬರದೇ ಚಿತ್ರಮಂದಿರಗಳನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಇದೇ ವಿಚಾರದ ಬಗ್ಗೆ ಫಿಲ್ಮ್ ಚೇಂಬರ್‌ನಲ್ಲಿ ಸಭೆ ನಡೆಯಿತು. ಸ್ಟಾರ್ ನಟರನ್ನು ವರ್ಷಕ್ಕೆ ಒಂದು ಸಿನಿಮಾ ಮಾಡುವಂತೆ ಮನವಿ ಮಾಡುವುದಾಗಿ ಫಿಲ್ಮ್ ಚೇಂಬರ್ ಚರ್ಚೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.
ಸುದೀಪ್, ದರ್ಶನ್, ಯಶ್, ಉಪೇಂದ್ರ, ಧ್ರುವ ಸರ್ಜಾ ರೀತಿಯ ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಬೇಕು. ಸ್ಟಾರ್ ನಟರು ಮಾತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಸಾಧ್ಯ. ದೊಡ್ಡ ಸಿನಿಮಾಗಳು ಬಂದರೆ ಚಿತ್ರಮಂದಿರಗಳು ಉಳಿಯುತ್ತವೆ ಎನ್ನುವ ಕೂಗು ಕೇಳಿಬರುತ್ತಲೇ ಇದೆ. ಈ ಬಗ್ಗೆ ಸ್ಟಾರ್ ನಟರು ಮಾತನಾಡುತ್ತಾರೆ. ಆದರೆ ಅದು ಕಾರ್ಯರೂಪಕ್ಕೆ ಬರ್ತಿಲ್ಲ.

ಸ್ಟಾರ್ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಬೇಡಿಕೆ ಬಗ್ಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿದ್ದಾರೆ. ಚಿತ್ರರಂಗದ ಸಮಸ್ಯೆ ಏನು? ಅದಕ್ಕೆ ಪರಿಹಾರ ಮಾರ್ಗ ಏನು? ಸ್ಟಾರ್ ನಟರ ಬಳಿ ನೀವು ಪಟ್ಟು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಳ್ಳೆ ಸಿನಿಮಾ ಮಾಡಿದರೆ ಖಂಡಿತ ಜನ ಬಂದೇ ಬರುತ್ತಾರೆ. ಪ್ರೇಕ್ಷಕರ ತಪ್ಪಿಲ್ಲ ಎಂದಿದ್ದಾರೆ.
"ನಾನು ನಾಳೆ 10 ಸಿನಿಮಾ ಮಾಡೋಕೆ ರೆಡಿ. ಸಹಿ ಮಾಡೋಕೆ ಹೇಳಿ ನಿರ್ಮಾಪಕರಿಗೆ. ಅವರಿಗೆಲ್ಲಾ ಯಶ್, ದರ್ಶನ್ ಬೇಕಲ್ವಾ? ಅದು ಅವರವರ ಆಯ್ಕೆ. ಕಥೆ ಅವ್ರು ಓಕೆ ಮಾಡ್ಬೇಕಲ್ವಾ? ನಾಳೆ ಬೆಳಗ್ಗೆ ಯಶ್ 3, ದರ್ಶನ್ 3 ಸಿನಿಮಾ ಮಾಡಿಬಿಟ್ರೆ, 2 ವರ್ಷಕ್ಕೆ ಮನೆಗೆ ಕಳ್ಸಿಬಿಡ್ತಿರಾ. ಅವರಿಗೆ ಆದ ಬ್ರ್ಯಾಂಡ್, ತಾಕತ್ತು, ಅದಕ್ಕೆ ತಕ್ಕ ಬಜೆಟ್, ಸ್ಟೇಜ್ ಇರುತ್ತದೆ. ಯಾರಿಗೂ ಸಿನಿಮಾ ಮಾಡುವುದನ್ನು ಬಲವಂತ ಮಾಡಬಾರದು" ಎಂದು ರವಿಚಂದ್ರನ್ ಹೇಳಿದ್ದಾರೆ.
"ನೀನು ಇಷ್ಟೇ ಸಿನಿಮಾ ಮಾಡಬೇಕು ಅಂದರೆ ಅದು ಸಾಧ್ಯವಿಲ್ಲ. ಅದು ಅವರ ಆಯ್ಕೆ. ಕಥೆ ಆಯ್ಕೆ ಮಾಡುವುದು ಹೀರೊ ಅಲ್ಲವೇ. ಆತನದ್ದು ಒಂದು ಸ್ಥಾನ, ಬ್ರ್ಯಾಂಡ್ ಇರುತ್ತದೆ. ಅದನ್ನು ಉಳಿಸಿಕೊಳ್ಳಬೇಕಲ್ವಾ? ಕೆಜಿಎಫ್ ಆದ್ಮೇಲೆ ಯಶ್ ಏನ್ ಸಿನ್ಮಾ ಮಾಡ್ಬೇಕು? ನಿಮ್ಮ ನಿರೀಕ್ಷೆ ಏನು ಇರುತ್ತದೆ? ಕಾಟೇರ ಆದ್ಮೇಲೆ ದರ್ಶನ್ ಏನು ಮಾಡ್ಬೇಕು? ಅವರ ಇಮೇಜ್, ಬ್ರ್ಯಾಂಡ್, ಬಜೆಟ್‌ನಲ್ಲಿ ಯೋಚನೆ ಮಾಡ್ತಾರೆ. ಅವರಿಗೆ ವರ್ಷಕ್ಕೆ 3 ಸಿನಿಮಾ ಮಾಡಿ ಅಂದ್ರೆ ಸಾಧ್ಯವಿಲ್ಲ" ಎಂದಿದ್ದಾರೆ.

"ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಎಲ್ಲಾ ಕಡೆ ಇದ್ದಿದ್ದೆ. ಸ್ಟ್ರೈಕ್ ಮಾಡೋದರಿಂದ ಪ್ರಯೋಜನ ಇಲ್ಲ. ಮೊದಲು ಸಮಸ್ಯೆ ಏನು ಯೋಚಿಸಿ ಬಳಿಕ ಮಾತಾಡೋಣ. ಇದೇ ಇಂಡಸ್ಟ್ರಿ ದೊಡ್ಡ ದೊಡ್ಡ ಸಿನಿಮಾ ಕೊಟ್ಟು ಗೊತ್ತಿದೆ. ಕೆಟ್ಟ ಸಮಯ ಎಲ್ಲರಿಗೂ ಬಂದಿದೆ. ಚಿತ್ರರಂಗಕ್ಕೂ ಬಂದಿದೆ. ಯಾವತ್ತಿಗೂ ಗ್ರಾಫ್ ಒಂದೇ. ನೂರರಲ್ಲಿ 5 ಸಿನಿಮಾ ಲಾಭ ಮಾಡುತ್ತೆ. 5 ಅಲ್ಲಿಗಲ್ಲಿಗೆ ಸರಿ ಹೋಗತ್ತೆ. 90 ಸಿನಿಮಾ ಫ್ಲಾಪ್ ಆಗಿರುತ್ತದೆ. ಆ ಕಾಲದಿಂದ ಇದೇ ನಡೆದು ಬರುತ್ತಿರುವುದು" ಎಂದು ಕ್ರೇಜಿಸ್ಟಾರ್ ವಿವರಿಸಿದ್ದಾರೆ.
ಇನ್ನು ಒಳ್ಳೆ ಕಥೆ ಇಲ್ಲ ಎನ್ನುವುದಕ್ಕೆ ರವಿಚಂದ್ರನ್ ಒಂದು ಪರಿಹಾರ ಹೇಳಿದ್ದಾರೆ. "ಪ್ರೇಕ್ಷಕರು, ಚಿತ್ರಮಂದಿರದವರು ಎಲ್ಲರೂ ಒಳ್ಳೆ ಸಿನಿಮಾ ಬೇಕು ಎನ್ನುತ್ತಿದ್ದಾರೆ. ಮಾತೆತ್ತಿದರೆ ಮಲಯಾಳಂ ಸಿನಿಮಾ ಹಾಗೆ ಹೀಗೆ ಅಂತಾರಲ್ಲ. ನಾನು ಹೇಳುವುದು ಒಂದೇ. ಹೋಗಿ ಮಲಯಾಳಂ ಕಥೆಗಾರರ ಬಳಿಯೇ ಕಥೆ ಬರೆಸಿ ತಂದು ಸಿನಿಮಾ ಮಾಡಿ. ಯಾರು ಬೇಡ ಅಂತಾರೆ. ಎಲ್ಲಿ ಕಥೆ ಸಿಗುತ್ತೋ ಅಲ್ಲಿಗೆ ಹೋಗಿ ಕಥೆ ಮಾಡಿಸಿ. ಅದನ್ನು ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ ಅಲ್ಲವೇ? ಹಾಗಿದ್ದ ಮೇಲೆ ಯಾಕೆ ಮಾಡಬಾರದು?" ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications











