'ದೃಶ್ಯ 2' ಟ್ರೇಲರ್ ಬಿಡುಗಡೆ: ಒಟಿಟಿಗೆ ಬರೊಲ್ಲ ರವಿಚಂದ್ರನ್!
ರವಿಚಂದ್ರನ್ ನಟಿಸಿರುವ 'ದೃಶ್ಯ 2' ಸಿನಿಮಾದ ಟ್ರೇಲರ್ ಅನ್ನು ಇಂದು ನಟ ಸುದೀಪ್ ಬಿಡುಗಡೆಗೊಳಿಸಿದ್ದಾರೆ.
2014 ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯ' ಸಿನಿಮಾದ ಮುಂದುವರೆದ ಭಾಗವೇ ಈ ಸಿನಿಮಾ. ಆ ಸಿನಿಮಾದಲ್ಲಿ ನಟಿಸಿರುವ ಕಲಾವಿದರೇ ಈ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕೆಲವು ಹೊಸ ಪಾತ್ರಗಳೂ ಸೇರಿಕೊಂಡಿವೆ. 2014 ರ 'ದೃಶ್ಯ' ಸಿನಿಮಾದಲ್ಲಿ ರವಿ ಬೋಪಣ್ಣ ಮುಚ್ಚಿ ಹಾಕಿದ್ದ ಕೊಲೆಯ ರಹಸ್ಯ ಈ ಸಿನಿಮಾದಲ್ಲಿ ತೆರೆದುಕೊಳ್ಳಲಿವೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ.
2014 ರ 'ದೃಶ್ಯ' ಸಿನಿಮಾ ನಿರ್ದೇಶಿಸಿದ್ದ ಪಿ.ವಾಸು ಅವರೇ 'ದೃಶ್ಯ 2' ಅನ್ನು ಸಹ ನಿರ್ದೇಶನ ಮಾಡಿದ್ದಾರೆ. 2014 ರ ಸಿನಿಮಾ ಮೋಹನ್‌ಲಾಲ್‌ರ 'ದೃಶ್ಯಂ' ಸಿನಿಮಾದ ರೀಮೇಕ್ ಆಗಿತ್ತು. ಈಗಲೂ ಸಹ ಮಲಯಾಳಂ ಸಿನಿಮಾ 'ದೃಶ್ಯಂ 2' ನ ರೀಮೇಕ್ ಕನ್ನಡದ 'ದೃಶ್ಯ 2'.

ಕನ್ನಡ ಸಿನಿಮಾದ ವಿಶೇಷವೆಂದರೆ ಮಲಯಾಳಂನ ಮೂಲ 'ದೃಶ್ಯಂ 2' ಸಿನಿಮಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಿತ್ತು. ಅದರ ರೀಮೇಕ್ ತೆಲುಗಿನಲ್ಲಿ ವೆಂಕಟೇಶ್ ನಟಿಸಿದ 'ದೃಶ್ಯ 2' ಸಿನಿಮಾ ಸಹ ನೇರವಾಗಿ ಒಟಿಟಿಯಲ್ಲಿಯೇ ಬಿಡುಗಡೆ ಆಗಿತ್ತು. ಆದರೆ ರವಿಚಂದ್ರನ್ ನಟನೆಯ 'ದೃಶ್ಯ 2' ಒಟಿಟಿಗೆ ಹೋಗುತ್ತಿಲ್ಲ ಬದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
'ದೃಶ್ಯ 2' ನಲ್ಲಿ ರವಿಚಂದ್ರನ್ ಜೊತೆಗೆ ನವ್ಯಾ ನಾಯರ್, ಮಕ್ಕಳ ಪಾತ್ರದಲ್ಲಿ ಸ್ವರೂಪಿಣಿ ನಾರಾಯಣ್, ಉನ್ನತಿ, ಮೊದಲ ಸಿನಿಮಾದಲ್ಲಿದ್ದ ಸಾಧು ಕೋಕಿಲ, ತಮಿಳಿನ ಪ್ರಭು, ಆಶಾ ಶರತ್ ಇವರುಗಳ ಜೊತೆಗೆ ಮತ್ತೊಂದು ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಸಹ ಇರಲಿದ್ದಾರೆ.
ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಪ್ರಮೋದ್ ಶೆಟ್ಟಿ, ''ಈ ಸಿನಿಮಾದ ಪಾತ್ರದಲ್ಲಿ ನಟಿಸುವುದೋ ಬೇಡವೋ ಎಂಬ ಗೊಂದಲ ಇತ್ತು. ಹಾಗಾಗಿ ರಿಷಬ್ ಶೆಟ್ಟಿ ಬಳಿ ಕೇಳಿದೆ ಅವನು ಒಪ್ಪಿಕೊ ಎಂದ. ಸೆಟ್‌ಗೆ ಹೋದಾಗ ನನ್ನನ್ನು ವೆಲ್‌ಕಮ್ ಮಾಡಲು ಸ್ವತಃ ಅಂಬರೀಶ್ ಕಾಯುತ್ತಿದ್ದಿದ್ದು ನೋಡಿ ನನಗೆ ಆಶ್ಚರ್ಯವಾಯಿತು'' ಎಂದಿದ್ದಾರೆ.


Click it and Unblock the Notifications