ಡಾಲಿ ಧನಂಜಯ್ ನಟನೆಯ 'ಹೆಡ್ಡು-ಬುಷ್'ನಲ್ಲಿ ರವಿಚಂದ್ರನ್
ಡಾಲಿ ಧನಂಜಯ್ ನಟಿಸುತ್ತಿರುವ 'ಹೆಡ್ಡು-ಬುಷ್' ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ದೊಡ್ಡ-ದೊಡ್ಡ ನಟರ ದಂಡೇ ಸಿನಿಮಾಕ್ಕಾಗಿ ಒಟ್ಟಾಗುತ್ತಿದೆ.
ಮಾಜಿ ರೌಡಿ ಜಯರಾಜ್ ಜೀವನ ಆಧರಿಸಿದ ಸಿನಿಮಾ ಇದಾಗಿದ್ದು, ಡಾಲಿ ಧನಂಜಯ್ ಜಯರಾಜ್ ಪಾತ್ರದಲ್ಲಿ ಮಿಂಚಲಿದ್ದಾರೆ. ಅಗ್ನಿ ಶ್ರೀಧರ್ ಕತೆ, ಚಿತ್ರಕತೆ ರಚಿಸಿದ್ದು, ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಯೋಜನೆ ಈಗಾಗಲೇ ರೂಪುಗೊಂಡಿದೆ.
ಕೆಲವು ಅತ್ಯುತ್ತಮ ಕಲಾವಿದರ ದಂಡನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಲಾಗಿದೆ. ಲೂಸ್ ಮಾದ ಯೋಗಿ, ನಟಿ ಶ್ರುತಿ ಹರಿಹರನ್, ವಸಿಷ್ಠ ಸಿಂಹ, ರಘು ಮುಖರ್ಜಿ ಅವರುಗಳು ಈಗಾಗಲೇ 'ಹೆಡ್ಡು-ಬುಷ್' ತಂಡವನ್ನು ಸೇರಿಯಾಗಿದೆ. ಇದೀಗ ಕನ್ನಡದ ಹಿರಿಯ ಮತ್ತು ದೊಡ್ಡ ಸ್ಟಾರ್ ನಟರೊಬ್ಬರು ಸಿನಿಮಾದ ಭಾಗವಾಗಲಿದ್ದಾರೆ ಎನ್ನುವ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ 'ಹೆಡ್ಡು-ಬುಷ್' ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ರವಿಚಂದ್ರನ್ ಬಹಳ ಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ''ರೌಡಿಗಳ ಕತೆಯಾದರೂ ಅದರಲ್ಲಿ ಹಿಂಸೆ ತಪ್ಪು, ರೌಡಿಸಂ ತಪ್ಪು ಎಂಬ ಸಂದೇಶ ಸಾರುವುದು ಅವಶ್ಯಕ ಹಾಗಾಗಿ ನನ್ನ ಪ್ರತಿ ಸಿನಿಮಾದಲ್ಲಿಯೂ ನಾಯಕನ (ಹಿಂಸಾಪ್ರವೃತ್ತಿಯುಳ್ಳ) ಹೆಜ್ಜೆಗಳನ್ನು ಪ್ರಶ್ನಿಸುವ ಪಾತ್ರವೊಂದನ್ನು ಸೃಷ್ಟಿಸುತ್ತೇನೆ'' ಎಂದು ಹಿಂದೊಮ್ಮೆ ಅಗ್ನಿ ಶ್ರೀಧರ್ ಹೇಳಿದ್ದರು. ಅಂತೆಯೇ 'ಹೆಡ್ಡು-ಬುಷ್' ಸಿನಿಮಾದಲ್ಲಿ ನಾಯಕನ ನಡೆಯನ್ನು ಪ್ರಶ್ನಿಸುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ದೊಡ್ಡದಾಗಿ ತೆರೆಗೆ ತರಲು ಯೋಜನೆ
'ಹೆಡ್ಡು-ಬುಷ್' ಸಿನಿಮಾದ ಮೇಲೆ ಡಾಲಿ ಧನಂಜಯ್ ದೊಡ್ಡ ನಿರೀಕ್ಷೆ ಇಟ್ಟಿದ್ದು, ಸಿನಿಮಾವನ್ನು ದೊಡ್ಡದಾಗಿ ಹಾಗೂ ಭಿನ್ನವಾಗಿ ತೆರೆಗೆ ತರಲು ಯೋಜನೆ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕರನ್ನು ಸಹ ಬದಲಾಯಿಸಲಾಗಿದೆ.

ಎರಡು ಕೋಟಿ ವೆಚ್ಚದ ಸೆಟ್ ನಿರ್ಮಾಣ
'ಹೆಡ್ಡು-ಬುಷ್' ಸಿನಿಮಾಕ್ಕಾಗಿ ಭಾರಿ ದೊಡ್ಡ, ದುಬಾರಿ ಸೆಟ್ ಒಂದನ್ನು ಬೆಂಗಳೂರಿನ ಚಿಕ್ಕಮಾರನಹಳ್ಳಿ ಬಳಿಯ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸೆಟ್‌ಗಾಗಿ ಸುಮಾರು ಎರಡು ಕೋಟಿ ಹಣವನ್ನು ಚಿತ್ರತಂಡ ಖರ್ಚು ಮಾಡಿದೆ. 80-90ರ ದಶಕದ ಬೆಂಗಳೂರಿನ ಪರಿಸರದಲ್ಲಿ ನಡೆಯುವ ಕತೆಯನ್ನು ಸಿನಿಮಾ ಹೊಂದಿದ್ದು, ಆ ಜಮಾನವನ್ನು ಸೆಟ್‌ಗಳ ಮೂಲಕ ಮರುಸೃಷ್ಟಿ ಮಾಡಲಾಗುತ್ತಿದೆ. ಸೆಟ್‌ನ ಜವಾಬ್ದಾರಿಯನ್ನು ಕಲಾವಿದ ಬಾದಲ್ ನಂಜುಂಡಸ್ವಾಮಿ ಹೊತ್ತುಕೊಂಡಿದ್ದಾರೆ.

ಸೋಮಣ್ಣ ಎಂಬುವರ ಜೊತೆ ಧನಂಜಯ್ ಸಹ ನಿರ್ಮಾಣ
'ಹೆಡ್-ಬುಶ್' ಸಿನಿಮಾದ ಬಗ್ಗೆ ಧನಂಜಯ್‌ಗೆ ಸಾಕಷ್ಟು ನಿರೀಕ್ಷೆ, ಭರವಸೆ ಇರುವ ಕಾರಣ ಸಿನಿಮಾವನ್ನು ಧನಂಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಅಶು ಬೆದ್ರ ಎಂಬುವರು ಸಿನಿಮಾ ನಿರ್ಮಾಣ ಮಾಡಲಿದ್ದರು ಆದರೆ ಆ ನಿರ್ಮಾಪಕರು ಬದಲಾಗಿದ್ದಾರೆ. ಇದೀಗ ಸೋಮಣ್ಣ ಎಂಬುವರ ಜೊತೆ ಸೇರಿ ಧನಂಜಯ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವು ಪ್ಯಾನ್ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಶೂನ್ಯ ಎಂಬುವರು ನಿರ್ದೇಶನ ಮಾಡಲಿದ್ದಾರೆ.

ಹಲವು ಸಿನಿಮಾಗಳಲ್ಲಿ ಧನಂಜಯ್ ಬ್ಯುಸಿ
ಧನಂಜಯ್ ಪ್ರಸ್ತುತ ಬಹಳ ಬ್ಯುಸಿ ನಟ. ಬರೋಬ್ಬರಿ ಒಂಬತ್ತು ಸಿನಿಮಾಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಜೊತೆ ನಟಿಸಿರುವ 'ಭೈರವ' ಬಿಡುಗಡೆಗೆ ರೆಡಿಯಾಗಿದೆ. ತೆಲುಗಿನ 'ಪುಷ್ಪ' ಸಿನಿಮಾ ಸಹ ಬಿಡುಗಡೆಗೆ ರೆಡಿ ಇದೆ. ವಿಜಯ್ ನಟನೆಯ 'ಸಲಗ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ಕನ್ನಡದ 'ಮಾನ್‌ಸೂನ್ ರಾಗ', 'ರತ್ನನ್ ಪರ್‌ಪಂಚ', 'ಬಡವ ರಾಸ್ಕಲ್', 'ಡಾಲಿ', ಜಗ್ಗೇಶ್ ನಟನೆಯ 'ತೋತಾಪುರಿ' ಸಿನಿಮಾದಲ್ಲಿಯೂ ಡಾಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಆರ್ಕೇಸ್ಟ್ರಾ ಮೈಸೂರು' ಸಿನಿಮಾಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. 'ಹೆಡ್ಡು ಬುಷ್' ಮತ್ತು 'ಬಡವ ರಾಸ್ಕಲ್' ಸಿನಿಮಾಗಳಿಗೆ ಧನಂಜಯ್ ಬಂಡವಾಳವನ್ನೂ ಹೂಡಿದ್ದಾರೆ.


Click it and Unblock the Notifications











