For Quick Alerts
  ALLOW NOTIFICATIONS  
  For Daily Alerts

  'ಮಾಯಾಬಜಾರ್'ನ ಮಾಂತ್ರಿಕ ಸ್ಪರ್ಶ, ಕಲಾ ಶ್ರೀಮಂತಿಕೆ ಬಗ್ಗೆ ನಿಮಗೆ ಗೊತ್ತೇನು.?

  By Ravindra Kotaki
  |

  'ಮಾಯಾಬಜಾರ್'.... ಇದು ಭಾರತೀಯ ಸಿನಿಮಾರಂಗದ ನೂರು ಅತ್ಯುತ್ತಮ ಸಿನಿಮಾಗಳೆಂದು ಬಿಬಿಸಿ ವಾಹಿನಿ ಗುರುತಿಸಿ ಗೌರವಿಸಿರುವ ಚಲನಚಿತ್ರಗಳಲ್ಲಿ ಒಂದು. ಇದು ಬಿಡುಗಡೆಯಾಗಿ 60 ವಸಂತಗಳು ಉರುಳಿದ್ದರೂ, ಅದರ ಜನಪ್ರಿಯತೆ ಇಂದಿಗೂ ಕುಂದಿಲ್ಲ. ಈ ಚಿತ್ರದಲ್ಲಿನ ಮಾಂತ್ರಿಕ ಸ್ಪರ್ಶಕ್ಕೆ ಮಾಯೆ ಅಂತ ಕರೆದು, ಅದರ ಚಿತ್ರಕಥೆ ಹಾಗೂ ನಿರೂಪಣೆಯನ್ನು ಸಿನಿಮಾ ಬಜಾರ್ ನಲ್ಲಿ ಅಷ್ಟು ಸುಲಭಕ್ಕೆ ದಕ್ಕದ್ದು ಅಂತೇಳಿ ಇದನ್ನು 'ಮಾಯಾಬಜಾರ್' ಅಂತ ಹೆಸರಿಟ್ಟರೋ ಅನ್ನೋ ಒಟ್ಟಲ್ಲಿ 'ಮಾಯಾಬಜಾರ್'ನ ಮಾಯೆಯಿಂದ ಬರುವುದು ಅಷ್ಟು ಸುಲಭವಲ್ಲ, ಎಲ್ಲಾ ವೈಷ್ಣವ ಮಾಯೇ.

  ಮಾರ್ಚ್ ಮಾಸದ 27, 1957ರಲ್ಲಿ ತೆಲುಗಿನಲ್ಲಿ ತಯಾರಾಗಿ ತಮಿಳು, ಕನ್ನಡ ಮುಂದೆ ಹಿಂದಿಯಲ್ಲೂ ಬಿಡುಗಡೆಯಾಗಿ ಭಾರಿ ಯಶಸ್ಸನ್ನು ಕಂಡ ದೃಶ್ಯಕಾವ್ಯ 'ಮಾಯಾಬಜಾರ್'. ಇದೇ ಕನ್ನಡದಲ್ಲಿ ಕೊನೆಯ ಡಬ್ಬಿಂಗ್ ಚಿತ್ರವೂ ಕೂಡ. ದಕ್ಷ ನಿರ್ದೇಶಕ ಕೆ.ವಿ.ರೆಡ್ಡಿಯವರ ನಿರ್ದೇಶನ, ವಿಜಯಾ ಸಂಸ್ಥೆಯ ನಾಗಿರೆಡ್ಡಿ-ಚಕ್ರಪಾಣಿ (ಚಂದಮಾಮ ಓದುಗರಿಗೆ ಇವರ ಹೆಸರುಗಳು ಚಿರಪರಿಚಿತ) ನಿರ್ಮಾಪಕರಾಗಿದ್ದ ಈ ಚಿತ್ರವೂ ಮೂಲದಲ್ಲಿ ಮಹಾಭಾರತದ ಒಂದು ಉಪಕಥೆಯನ್ನು ಆಧಾರಿಸಿ ಸಿನಿಮಾರೂಪಕ್ಕೆ ತರಲಾಯಿತು. ವಾಸ್ತವದಲ್ಲಿ ಅಂದಿನ ಕರ್ನಾಟಕ-ಆಂಧ್ರದ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದ್ದ 'ಶಶಿರೇಖಾ ಪರಿಣಯ' ಎಂಬ ನಾಟಕದಿಂದ ಸ್ಫೂರ್ತಿ ಪಡೆದು ಚಿತ್ರಕಥೆಯನ್ನು ಕೆ.ವಿ.ರೆಡ್ಡಿ-ಪಿಂಗಳಿ ನಾಗೇಂದ್ರರಾವ್ ಜೋಡಿ ಹೆಣೆದಿದ್ದು. ಚಿತ್ರಕಥೆಗಳಿಗೆ ಇಂದಿಗೂ ಇದು ಕೇರಾಫ್ ಆಡ್ರೆಸ್. ಇದನ್ನು ನೋಡಿ ಚಿತ್ರಕಥೆ ಹೇಗೆ ರಚಿಸಿಬೇಕೆಂದು ಇಂದಿನ ಪೀಳಿಗೆಯ ನಿರ್ದೇಶಕ ತಿಳಿದುಕೊಳ್ಳಬೇಕು.

  ಚಿತ್ರದ ಕಥೆಗೆ ಬಂದಾಗ...

  ಚಿತ್ರದ ಕಥೆ ಸರಳವಾಗಿದೆ. ಬಲರಾಮ ತನ್ನ ಪ್ರೀತಿ ಮಗಳಾದ ಶಶಿರೇಖಾಳನ್ನು ತನ್ನ ತಂಗಿ ಸುಭದ್ರೆ-ಅರ್ಜುನರ ಏಕೈಕ ಸಂತಾನ ಅಭಿಮನ್ಯುವಿಗೆ ಕೊಟ್ಟು ಮದುವೆ ಮಾಡಿಕೊಡುವುದಾಗಿ ಶಶಿ-ಅಭಿ ಬಾಲ್ಯದಲ್ಲಿ ಇರಬೇಕಾದರೆ ಮಾತುಕೊಡುತ್ತಾನೆ. ಅವರಿಬ್ಬರು ಬಾಲಪ್ರೇಮಿಗಳಾಗಿ ಯೌವನಕ್ಕೆ ಕಾಲಿಡುತ್ತಾರೆ. ಇದೇ ಸಮಯಕ್ಕೆ ಪಾಂಡವರು ರಾಜ್ಯಭ್ರಷ್ಟರಾಗಿ ಅರಣ್ಯದೆಡೆಗೆ ಮುಖ ಮಾಡುತ್ತಾರೆ. ಇದರಿಂದ ಬಲರಾಮನ ಸತಿ ರೇವತಿದೇವಿ ಪಾಂಡವರ ಸಂಬಂಧ ಕಡೆದುಕೊಳ್ಳುವಂತೆ ಒತ್ತಡ ಹಾಕುತ್ತಾಳೆ. ಇದೇ ವಿಷಯವನ್ನು ಅರಿತ ದುರ್ಯೋಧನ ಬಲರಾಮನಿಗೆ ಜೀವನದಲ್ಲಿ ಮರೆಯಲಾಗದ ಅತಿಥ್ಯ ನೀಡಿ ಅವನ ಪ್ರೀತಿಗೆ ಪಾತ್ರನಾಗುತ್ತಾನೆ. ಬಲರಾಮ ತನ್ನ ಮಗಳನ್ನು ದುರ್ಯೋಧನ ಮಗನಾದ ಲಕ್ಷಣಕುಮಾರನಿಗೆ ಕೊಟ್ಟು ಮದುವೆ ಮಾಡಲು ಸಮ್ಮತಿಸುತ್ತಾನೆ. ಇದರಿಂದ ನೊಂದ ಈ ಪ್ರೇಮಿಗಳ ಪಾಲಿಗೆ ಶ್ರೀಕೃಷ್ಣನ ಭರವಸೆಯಾಗಿ ನಿಂತು ಭೀಮಸೇನ-ಹಿಡಂಬಿಯ ಪುತ್ರನಾದ ಘಟೋದ್ಗಜನ ಮೂಲಕ ಮಾಯೆಯೊಂದನ್ನು ಸೃಷ್ಟಿಸಿ ಮದುವೆಯ ಸಮಯದಲ್ಲಿ ಕೌರವರ ನಿಜಮುಖವನ್ನು ಅನಾವರಣಗೊಳಿಸಿ, ಈ ಪ್ರಣಯಜೋಡಿಯನ್ನು ಒಂದಾಗಿಸುತ್ತಾನೆ. ಅಲ್ಲಿಗೆ ಸಿನಿಮಾ ಸುಖ್ಯಾಂತವಾಗುತ್ತದೆ.

  ಪಾತ್ರವರ್ಗದ ಹಿನ್ನಲೆ:

  ಈ ಸಿನಿಮಾ ಬಗ್ಗೆ ಬರೆಯುವಾಗ ಬಹುಮುಖ್ಯವಾಗಿ ಸಣ್ಣಮಕ್ಕಳಿಂದ ಹಿರಿಯರವರಿಗೆ ಒಂದೇ ರೀತಿ ತನ್ಮಯತೆಯನ್ನು ಉಂಟು ಮಾಡುವಂತೆ ರೂಪಿಸಿದ್ದಕ್ಕೆ ಕಾರಣ ಸಿನಿಮಾದ ಆತ್ಮವಾಗಿರುವ ಚಿತ್ರಕಥೆ. ಒಂದೊಂದು ದೃಶ್ಯ, ಒಂದೊಂದು ಪಾತ್ರ, ಒಂದೊಂದು ಹಾಡು, ಗದ್ಯ-ಪದ್ಯಗಳು, ಸಂಭಾಷಣೆಗಳು, ಇಂದ್ರಜಾಲ-ಮಾಯಾಜಾಲವಿದ್ಯೆಗಳು ಒಂದಾ ಎರಡಾ... ಈ ಚಿತ್ರದ ಚಿತ್ರಕಥೆಯಲ್ಲಿ ಗಮನಸೆಳೆಯುವುದು. ಒಂದು ಕ್ಷಣ ಕೂಡ ಪ್ರೇಕ್ಷಕನ ಮನ ಅತ್ತಿತ್ತ ಸುಳಿಯದಂತೆ ಚಿತ್ರಕಥೆ ಹಿಡಿದು ಕೂರಿಸುತ್ತೆ. ಹೌದು ಪ್ರತಿ ಪಾತ್ರವನ್ನು ನೋಡಿದಾಗ ಇದಕ್ಕೆ ಅವರನ್ನು ಬಿಟ್ಟು ಬೇರೆಯವರು ನ್ಯಾಯಮಾಡಲಾರರೇನೋ ಎಂಬಂತೆ ಪ್ರತಿಯೊಬ್ಬರು ನಟಿಸಿದ್ದಾರೆ ಇಲ್ಲ ಜೀವಿಸಿದ್ದಾರೆ.

  ಶ್ರೀಕೃಷ್ಣನಾಗಿ ಎನ್.ಟಿ.ಆರ್, ಅಭಿಮನ್ಯುವಾಗಿ ಎ.ಎನ್.ಆರ್, ಬಲರಾಮನಾಗಿ ಹಿರಿಯನಟ ಗುಮ್ಮುಡಿ, ಲಕ್ಷಣಕುಮಾರನಾಗಿ ರೇಲಂಗಿ (ನಮ್ಮ ನರಸಿಂಹರಾಜುವಿನಂತೆ ತೆಲುಗಿನಲ್ಲಿ ಇವರು ಹಾಸ್ಯನಟರಲ್ಲಿ ಅಗ್ರಗಣ್ಯರು) ಇನ್ನು ಬಹುಮುಖ್ಯವಾಗಿ ಶಶಿರೇಖಾಳ ಪಾತ್ರದಲ್ಲಿ ಮಹಾನಟಿ ಸಾವಿತ್ರಿಯ ಹಾವಭಾವ ಹೇಳುವುದ್ದಿಕ್ಕಿಂತ ನೋಡಿದರೇನೇ ಚೆಂದ, ಅದರಲ್ಲೂ ಘಟೋದ್ಗಜ ಶಶಿರೇಖಾಳಾಗಿ ರೂಪುಗೊಂಡಾಗ ಲಕ್ಷಣಕುಮಾರನೊಂದಿಗೆ ಹಾಡುವ ಹಾಸ್ಯಯುಗಳ ಗೀತೆ 'ಸುಂದರಿ...ಓ ಸುಂದರಿ ನೀವೆಂಟಿ ದಿವ್ಯಸ್ವರೂಪಂ' ಹಾಡು, ಮದುವೆ ಶಾಸ್ತ್ರಗಳ ದೃಶ್ಯಗಳಲ್ಲಿ ಸಾವಿತ್ರಿಯನ್ನು ಹೊರತು ಬೇರೊಂದು ನಟಿಯಿಂದ ಇದನ್ನು ನಿರೀಕ್ಷಿಸುವುದು ಅಸಾಧ್ಯವೆಂಬಂತೆ ಜೀವಿಸಿದ್ದಾರೆ ಸಾವಿತ್ರಿ.

  ಇನ್ನು ಘಟೋದ್ಗಜನ ಪಾತ್ರದಲ್ಲಿ ಎಸ್.ವಿ.ರಂಗರಾವ್ ನಟನೆ ಬಗ್ಗೆ ಏನು ಹೇಳಿದರೂ ಕಮ್ಮಿಯೆ, ಪ್ರತಿಯೊಂದು ಫ್ರೇಮ್‍ನಲ್ಲೂ ಈ ಚಿತ್ರದ ಹೀರೋ ಇವರೇ ಆಗಿರುತ್ತಾರೆ.

  ಹೌದು ಈ ಸಿನಿಮಾ ವಿಶೇಷ, ಈ ಸಿನಿಮಾಗೆ ಹೀರೋ ಅಂತ ಯಾರನ್ನು ಕರೆಯುವುದು? ಸಾವಿತ್ರಿ ಪಾತ್ರ ನೋಡುವಾಗ ಅಲ್ಲಿ ಸಾವಿತ್ರಿಯವರೇ ಸಿನಿಮಾ ಹೀರೋ (ಹೀರೋ ಅಂದರೆ ಪ್ರಧಾನ ಪಾತ್ರಧಾರಿ ಅಷ್ಟೆ, ಅದು ಗಂಡು-ಹೆಣ್ಣು ಅಂತಲ್ಲ) ಘಟೋದ್ಗಜನನ್ನು ನೋಡಿದಾಗ ಎಸ್.ವಿ.ರಂಗರಾವ್ ಹೀರೋ, ಕೃಷ್ಣನನ್ನು ನೋಡಿದಾಗ ಎನ್‍.ಟಿ.ಆರ್ ಹೀರೋ ಹೀಗೆ ಒಂದೊಂದು ಪಾತ್ರವೂ ಪ್ರಮುಖವಾಗುತ್ತದೆ. ಇದು ಈ ಚಿತ್ರದ, ಚಿತ್ರಕಥೆಯ ಹೆಗ್ಗಳಿಕೆ. ಇಲ್ಲಿ ಯಾರು ಹೀರೋಗಳಿಲ್ಲ, ಆದರೆ ಎಲ್ಲರೂ ಹೀರೋಗಳೇ. ಹೀಗೆ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದೆ. ಇದು ಕೆ.ವಿ.ರೆಡ್ಡಿಯ ತಾಕತ್ತು.

  ತೆರೆಯ ಹಿಂದಿನ ಹೀರೋಗಳು:

  ತೆರೆಯ ಮುಂದೆ ಇಷ್ಟೊಂದು ಹೀರೋಗಳಿದ್ದರೆ, ಇನ್ನು ತೆರೆಯ ಹಿಂದೆ ಇಷ್ಟೊಂದು ಹೀರೋಗಳಿದ್ದರು ಅಂತ ನಾವು ನೋಡಿದೆ ಹೋದರೆ ಮಾಯಾಬಜಾರ್ ವಿವರಣೆ ಅಪೂರ್ಣವಾಗಿಬಿಡುತ್ತದೆ. ಸಂಗೀತ ಈ ಚಿತ್ರದ ಮೊದಲು ಆಕರ್ಷಣೆ. ಚಿತ್ರದಲ್ಲಿ ಒಟ್ಟು ಹನ್ನೆರಡು ಹಾಡುಗಳಿದ್ದು ಇದರಲ್ಲಿ ನಾಲ್ಕು ಹಾಡುಗಳನ್ನು ಸಾಲೂರಿ ರಾಜೇಶ್ವರರಾವ್ ನಿರ್ದೇಶಿಸಿದರೆ, ಉಳಿದ ಹಾಡುಗಳಿಗೆ ಘಂಟಸಾಲ ಸಂಗೀತದ ಹೊಣೆಗಾರಿಕೆ ಹೊತ್ತಿದ್ದರು. ಪಿಂಗಳಿ ನಾಗೇಂದ್ರರಾವ್ ಈ ಚಿತ್ರಕ್ಕೆ ಸಾಹಿತ್ಯ-ಸಂಭಾಷಣೆ ರಚನೆ ಮಾಡಿದ್ದಾರೆ. ಹಾಡುಗಳ ಬಗ್ಗೆ ಏನಂತ ಹೇಳುವುದು, ನಿಜವಾದ ಮಾಯೆ ಆ ಹಾಡುಗಳಲ್ಲಿದೆ, ಇದನ್ನು ಚಿತ್ರಿಸಿದ ವಿಧಾನ ಸಿನಿಮಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಯೋಗ್ಯವಾಧ ಪಠ್ಯವೇ ಸರಿ. ಬೆಳದಿಂಗಳ ಹಿನ್ನಲೆಯಲ್ಲಿ, ಸರೋವರದಲ್ಲಿ ಶಶಿರೇಖಾ, ಅಭಿಮನ್ಯು ದೋಣಿಯಲ್ಲಿ ಸಾಗುತ್ತ ಹಾಡುವ 'ಲಾಹೀರಿ ಲಾಹೀರಿ ಲಾಹೀರಲೋ ಒಹೋ ಜಗಮೇ ಊಗೇನೂಗಾ, ಊಗೇನೂಗಾ... ತೂಗೇನೂಗಾ' ಹಾಡು ಕೇಳುವುದೂ, ನೋಡುವುದು ಎರಡು ಚೆಂದ-ಅಂದ. 'ಚೂಪುಲು ಕಲಿಸಿನ ಶುಭವೇಳ' ಹಾಡು ಕೇಳಿದ್ರೇನೆ ಚೆಂದ, 'ವಿವಾಹ ಭೋಜನಂ' ನೋಡಿದರೇನೆ ಅಂದ.

  ಇವತ್ತು ಗ್ರಾಫಿಕ್ ಪ್ರಪಂಚದಲ್ಲಿ ಪ್ರತಿಯೊಂದು ಕೃತಕವಾಗಿ ಕಾಣುತ್ತದೆ. ಆದರೆ ಗ್ರಾಫಿಕ್ ತಂತ್ರಜ್ಞಾನವಿಲ್ಲದ ಅಂದಿನ ಕಾಲದಲ್ಲಿ ಇದರಲ್ಲಿನ ಒಂದೊಂದು ಚಮತ್ಕಾರಗಳು ನೈಜವೆಂಬಂತೆ ಚಿತ್ರವಾಗಿದೆ, ಅದರ ಹಿಂದಿರುವ ಮಾಂತ್ರಿಕ ಶಕ್ತಿ ಛಾಯಾಗ್ರಾಹಕ ಮಾರ್ಕಸ್ ಬ್ರೇಟ್ಲಿ, ಸೆಷ್ಟಲ್ ಎಫೆಕ್ಟ್ ಮಾಡಿರುವ ಹರ್ಬನ್ ಸಿಂಗ್ ಕಲಾನೈಪುಣ. ಇನ್ನು ನಾಗಿರೆಡ್ಡಿ-ಚಕ್ರಪಾಣಿಯೆಂಬ ಸದಾಭಿರುಚಿಯ ನಿರ್ಮಾಪಕರು ಸಿನಿಮಾದ ವ್ಯಯದ ಬಗ್ಗೆ ತಲೆಗೆಡಿಸಿಕೊಳ್ಳದೇ ಮಾಡಿದ ಸಾಹಸಕ್ಕೆ ಮೆಚ್ಚದೆ ಹೋದರೆ ಹೇಗೆ? ಕೊನೆಯದಾಗಿ ತೆರೆಯ ಹಿಂದಿನ ಹೀರೋ ನಿರ್ದೇಶಕ ಕೆ.ವಿ.ರೆಡ್ಡಿ. ಇವರೆಲ್ಲರ ಶ್ರಮದ ಫಲವೇ ಮಾಯಾಬಜಾರ್ ರೂಪುಗೊಂಡಿದ್ದು.

  ರಾಜಮೌಳಿಗೆ ಬಾಹುಬಲಿ ಮಾಡಲು ಬೇಕಾದ ತಾಂತ್ರಿಕಕಲೆ, ಸ್ಫೂರ್ತಿ ಕೂಡ ದಕ್ಕಿದ್ದು ಇದೇ ಸಿನಿಮಾದಿಂದ. ಮಾಯಾಬಜಾರ್ ಸಿನಿಮಾದ ವಿದ್ಯಾರ್ಥಿಗಳಿಗೆ ಒಂದು ಕಲಿಕೆಯ ವಸ್ತು. 2010ರಲ್ಲಿ ಹೊಚ್ಚಹೊಸ ಕಲರ್ ಪ್ರಿಂಟ್ ನಲ್ಲಿ ತೆರೆಗೆ ಬಂದು ಮತ್ತೆ ಪ್ರೇಕ್ಷಕರ ಮನೆಗೆದ್ದಿದೆ. ಆದರೆ ನಿಜವಾದ ಮಾಯಾಬಜಾರ್ ನ ಮಾಂತ್ರಿಕ ಸ್ಪರ್ಶ, ಕಲಾ ಶ್ರೀಮಂತ, ಸೌಂದರ್ಯ ನಿಮಗೆ ದಕ್ಕುವುದು ಮಾತ್ರ ಅದೇ ಕಪ್ಪು-ಬಿಳಿಪಿನಲ್ಲಿ ಮಾತ್ರ. ನೀವು ಇನ್ನು ಈ ಸಿನಿಮಾ ನೋಡಿರದೆಯಿದ್ದರೆ ಖಂಡಿತ ಡಿವಿಡಿ ಖರೀದಿ ಮಾಡಿ, ನಿಮ್ಮ ಮನೆಮುಂದಿಯೊಂದಿಗೆ ಕೂತು, ವಿಶೇಷವಾಗಿ ಮಕ್ಕಳೊಂದಿಗೆ ನೋಡಿ ಆನಂದಿಸಿ. ಕನ್ನಡದಲ್ಲಿ ಡಬ್ಬಿಂಗ್ ಚಿತ್ರವಾಗಿ ಭಾರಿ ಯಶಸ್ವಿಯಾಗಿತ್ತು. ಇದು ಕನ್ನಡದಲ್ಲಿ ಡಿವಿಡಿ ರೂಪದಲ್ಲಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಕನ್ನಡದಲ್ಲೂ ನೋಡಿದ್ದೀನಿ ಆದರೆ ಮೂಲದಷ್ಟು ಇಷ್ಟವಾಗಲಿಲ್ಲ. ನನ್ನ ಅನಿಸಿಕೆ ಇದನ್ನು ತೆಲುಗಿನಲ್ಲಿ ನೋಡಿದರೆ ಚೆಂದ...

  English summary
  Ravindra Kotaki has taken his Facebook account to explain about Mayabazaar film. Have a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X