ಸೆಲೆಬ್ರಿಟಿಗಳಿಗೆ ಸಿನಿಮಾ ತೋರಿಸಿ 'ನಾಟ್ ಔಟ್' ಆದ ಹೊಸ ಪ್ರತಿಭೆಗಳ ತಂಡ; ಏನಂದ್ರು ತಾರೆಯರು?
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿದ ಸಿನಿಮಾ 'ನಾಟ್ ಔಟ್' ರಿಲೀಸ್ ಆಗಿದೆ. ನಿನ್ನೆ (ಜುಲೈ 19) ಈ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಕನ್ನಡ ಚಿತ್ರರಂಗದ ತಾರೆಯರಿಗೆ 'ನಾಟ್ ಔಟ್' ಅನ್ನು ತೋರಿಸಿತ್ತು ಸಿನಿಮಾ ತಂಡ. ಅದಕ್ಕೂ ಮುನ್ನ ಪ್ರೇಕ್ಷಕರಿಗೆ ವಿಶೇಷವಾದ ಆಫರ್ ಒಂದನ್ನು ನೋಡಿತ್ತು. ಅದೇನಂದ್ರೆ, ಫಸ್ಟ್ ಹಾಫ್ ಫ್ರೀಯಾಗಿ ನೋಡಿ. ಸೆಕೆಂಡ್ ಹಾಫ್ ಅನ್ನು ದುಡ್ಡು ಕೊಟ್ಟು ನೋಡಿ ಎಂದಿತ್ತು.
ಇದೇ ಕುತೂಹಲದ ಮೇಲೆ ಸ್ಯಾಂಡಲ್‌ವುಡ್‌ನ ತಾರೆಯರು ಕೂಡ ಸಿನಿಮಾ ನೋಡಲು ಬಂದಿದ್ದರು. ಅಜಯ್ ಪೃಥ್ವಿ, ರಚನಾ ಇಂದರ್, ರವಿಶಂಕರ್ ನಟಿಸಿರುವ 'ನಾಟ್ ಔಟ್' ಸಿನಿಮಾವನ್ನು ತಾರೆಯರು ನೋಡಿ ಥ್ರಿಲ್ ಆಗಿದ್ದಾರೆ. ಇದೊಂದು ಆಂಬುಲೆನ್ಸ್ ಡ್ರೈವರ್ ಕಥೆ. ಇಲ್ಲಿ ಅಜಯ್ ಪೃಥ್ವಿ ಆಂಬುಲೆನ್ಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೇ ರಚನಾ ಇಂದರ್ ನರ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ರವಿಶಂಕರ್ ಖಳನಾಯಕನಾಗಿ ಈ ಸಿನಿಮಾದಲ್ಲಿ ಇದ್ದಾರೆ.

ಕಥೆ ಸಿಂಪಲ್ ಆಗಿದ್ದರೂ, ನಿರ್ದೇಶಕ ಅಂಬರೀಶ್ ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನದ ಬಗ್ಗೆ ಸೆಲೆಬ್ರಿಟಿಗಳು ದಿಲ್ ಖುಷ್ ಆಗಿದ್ದಾರೆ. ಹಾಗಿದ್ರೆ, 'ನಾಟ್ ಔಟ್' ಸಿನಿಮಾ ನೋಡಿದ ತಾರೆಯರು ಏನಂದ್ರು? ಯಾರಿಗೆ ಏನೆಲ್ಲಾ ಇಷ್ಟ ಆಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಚೇತನ್ ಅಹಿಂಸ, ನಟ
"ಬಹಳ ಒಳ್ಳೆಯ ಸಿನಿಮಾ. ಅದರಲ್ಲಿ ಎರಡು ಮಾತಿಲ್ಲ. ಈ ಸಿನಿಮಾದ ಕಥೆ ಆಗಿರಬಹುದು, ಆಕ್ಟಿಂಗ್ ಆಗಿರಬಹುದು, ಟೆಕ್ನಿಕಲ್ ವರ್ಕ್ ಆಗಿರಬಹುದು, ಸ್ಕ್ರೀನ್ ಪ್ಲೇ ಆಗಿರಬಹುದು ಬಹಳ ಗ್ರಿಪ್ಪಿಂಗ್ ಆಗಿ ಅದ್ಭುತವಾಗಿ ಮಾಡಿದೆ ತಂಡ. ನನಗೆ ಅಂಬರೀಶ್ ಅವರು ಏಳು ವರ್ಷದಿಂದ ಪರಿಚಯ. ಈ ಸಿನಿಮಾ ಬಹಳ ಚೆನ್ನಾಗಿದೆ. ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾಗಳೇ ಬರಬೇಕು. ಇಂತಹ ಸಿನಿಮಾಗಳು ಗೆಲ್ಲಬೇಕು." ಎಂದು ಚೇತನ್ ಅಹಿಂಸ ಹೇಳಿದ್ದಾರೆ.

ಸೂರಪ್ಪ ಬಾಬು, ನಿರ್ಮಾಪಕ
"ಬಹಳ ದಿನ ಆದ್ಮೇಲೆ ಅತ್ಯುತ್ತಮವಾದ ಸಿನಿಮಾ ನೋಡಿದಷ್ಟು ಖುಷಿ ಆಯ್ತು. ನಿಜವಾಗಲೂ ಎಲ್ಲಾ ರೀತಿಯಿಂದಲೂ ಒಳ್ಳೆಯ ಕಾನ್ಸೆಪ್ಟ್ ಸಿನಿಮಾ ಕೊಟ್ಟಿದ್ದಾರೆ. ಒಂದೊಂದು ಸೀನ್, ಕ್ಲೈಮ್ಯಾಕ್ಸ್ ಎಲ್ಲವೂ ಪ್ರತಿಯೊಬ್ಬರ ಮನಸ್ಸನ್ನು ನಾಟುತ್ತೆ. ಈ ಸಿನಿಮಾದ ಹೀರೋ ಯಾವುದೇ ಕಾರಣಕ್ಕೂ ನಿರಾಸೆ ಮಾಡಲ್ಲ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾ ಆಗುತ್ತೆ." ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.
ಪ್ರಿಯದರ್ಶಿನಿ, ಹಿನ್ನೆಲೆ ಗಾಯಕಿ
"ಈಗಷ್ಟೇ ನಾಟ್ ಔಟ್ ಸಿನಿಮಾ ನೋಡಿದೆ. ಸಿನಿಮಾ ತುಂಬಾನೇ ಚೆನ್ನಾಗಿದೆ. ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಸಿಕ್ಕಿದೆ. ಇದೊಂದು ವಿಭಿನ್ನ ಸ್ಟೋರಿ ಲೈನ್ ಇದೆ. ಇಡೀ ತಂಡಕ್ಕೆ ನಾವು ಶುಭ ಕೋರಲೇಬೇಕು. ಒಂದೊಂದು ಶಾಟ್ ಸಿಂಪಲ್ ಆಗಿದ್ದರೂ, ಡಿಫ್ರೆಂಟ್ ಆಗಿದೆ. ಇಂತಹದ್ದೊಂದು ಕ್ಲೈಮ್ಯಾಕ್ಸ್ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ" ಎಂದು ಗಾಯಕಿ ಪ್ರಿಯದರ್ಶಿನಿ ಅಭಿಪ್ರಾಯ ಪಟ್ಟಿದ್ದಾರೆ.
ಕಾವ್ಯಾ ಶಾ, ನಟಿ
"ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರ್ತಾ ಇಲ್ಲ ಅಂತ ಹೇಳ್ತಾನೇ ಇರುತ್ತೇವೆ. ಖಂಡಿತವಾಗಲೂ ಈ ಸಿನಿಮಾ ನೋಡಿದರೆ ಆ ಮಾತನ್ನು ವಾಪಾಸ್ ತೆಗೆದುಕೊಳ್ಳುತ್ತೀರ ಅಂತ ಹೇಳಬಹುದು. ಎಲ್ಲಾ ಪಾತ್ರಗಳನ್ನೂ ಅದ್ಭುತವಾಗಿ ಆಯ್ಕೆ ಮಾಡಿದ್ದಾರೆ ನಿರ್ದೇಶಕರು. ಅಜಯ್, ರಚನಾ, ಕಾಕ್ರೋಚ್ ಎಲ್ಲರೂ ಚೆನ್ನಾಗಿ ಮಾಡಿದ್ದಾರೆ." ಎಂದಿದ್ದಾರೆ ನಟಿ ಕಾವ್ಯ ಶಾ.
ಯಶ್ ಶೆಟ್ಟಿ, ನಟ
"ಮೊದಲನೆಯಾದಾಗಿ ಚಿತ್ರತಂಡಕ್ಕೆ ಕಂಗ್ರಾಟ್ಸ್ ಹೇಳ್ತೀನಿ. ಅವರೊಂದು ಮಾತು ಹೇಳಿದ್ದರು. ಫಸ್ಟ್ ಹಾಫ್ ಫ್ರೀ, ಸೆಕೆಂಡ್ ಹಾಫ್ ದುಡ್ಡುಕೊಟ್ಟು ನೋಡಬೇಕು ಅಂತ. ಹಾಗೆನೇ ಇದೆ ಸಿನಿಮಾ. ನನಗೆ ಆಂಬುಲೆನ್ಸ್ ಡ್ರೈವರ್ಸ್ ಅಂದರೆ, ತುಂಬಾನೇ ಇಷ್ಟ. ಅವರ ಬಗ್ಗೆ ತುಂಬಾನೇ ಸಂಶೋಧನೆ ಮಾಡಿದ್ದೆ. ಕೊರೊನಾ ಸಮಯದಲ್ಲಿ ಅವರ ಸಹಾಯವನ್ನು ಯಾರೂ ಮರೆಯುವುದಕ್ಕೆ ಆಗುವುದಿಲ್ಲ. ಆ ಆಲೋಚನೆಯನ್ನು ಇಟ್ಟುಕೊಂಡು ತುಂಬಾನೇ ಚೆನ್ನಾಗಿ ಸಿನಿಮಾ ಮಾಡಿದ್ದಾರೆ." ಎಂದು ಯಶ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











