ಇಶಾನ್, ಆಶಿಕಾ ಕಾಂಬಿನೇಶನ್ 'ರೇಮೊ' ಸಿನಿಮಾ ಶುಭಾರಂಭ
'ರೋಗ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ಇಶಾನ್ ಈಗ ತಮ್ಮ ಎರಡನೇ ಸಿನಿಮಾವನ್ನು ಶುರು ಮಾಡಿದ್ದಾರೆ. ಈ ಸಿನಿಮಾಗೆ 'ರೇಮೊ' ಎನ್ನುವ ಟೈಟಲ್ ಇಡಲಾಗಿದೆ.

'ರೇಮೊ' ಸಿನಿಮಾದ ಸ್ಕ್ರಿಪ್ಟ್ ಪೂಜೆ ಇಂದು (ಗುರುವಾರ) ಬೆಂಗಳೂರಿನ ಶಂಕರ ಮಠದಲ್ಲಿ ನಡೆದಿದೆ. ಈ ಶುಭ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭಾಗಿಯಾಗಿದ್ದು, ಚಿತ್ರತಂಡಕ್ಕೆ ವಿಶ್ ಮಾಡಿದರು.
ನಿರ್ಮಾಪಕ ಸಿ ಆರ್ ಮನೋಹರ್, ನಿರ್ದೇಶಕ ಪವನ್ ಒಡೆಯರ್, ನಟಿ ಆಶಿಕಾ ರಂಗನಾಥ್ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸರಳವಾಗಿ ಸ್ಕ್ರಿಪ್ಟ್ ಪೂಜೆಯನ್ನು ಮಾಡಲಾಯಿತು.

ಇನ್ನು, 'ನಟ ಸಾರ್ವಭೌಮ' ನಂತರ ಪವನ್ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 'ದಿ ವಿಲನ್' ಬಳಿಕ ಸಿ ಆರ್ ಮನೋಹರ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಇಶಾನ್ ಗೆ ಆಶಿಕಾ ಜೋಡಿಯಾಗಿದ್ದು, ಇಬ್ಬರ ಫೇರ್ ಚೆನ್ನಾಗಿ ಕಾಣುತ್ತಿದೆ. ಆಶಿಕಾಗೆ ದಿನೇ ದಿನೇ ಬೇಡಿಕೆ ಜಾಸ್ತಿಯಾಗುತ್ತಿದೆ.
ಈ ಸಿನಿಮಾ ಲವ್ ಸ್ಟೋರಿ ಜೊತೆಗೆ ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದೆಯಂತೆ. ಇಂದು ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಸದ್ಯದಲ್ಲಿಯೇ ಮುಹೂರ್ತ ಆಗಲಿದೆ.


Click it and Unblock the Notifications











