'ರೇಮೊ' ಟೈಟಲ್ ಡಿಸೈನ್ : ಇದು ರೇವಂತ್ - ಮೋಹನಾ ಲವ್ ಸ್ಟೋರಿ
ಕೆಲ ದಿನಗಳ ಹಿಂದೆ ಸ್ಕ್ರಿಪ್ಟ್ ಪೂಜೆ ಮಾಡಿಕೊಂಡಿದ್ದ 'ರೇಮೊ' ಸಿನಿಮಾದ ಟೈಟಲ್ ಡಿಸೈನ್ ಈಗ ರಿವೀಲ್ ಆಗಿದೆ. ಸಖತ್ ಸ್ಟೈಲಿಶ್ ಆಗಿರೋ ಟೈಟಲ್ ಡಿಸೈನ್ ಗಮನ ಸೆಳೆಯುತ್ತಿದೆ. Kanni ಸ್ಟೂಡಿಯೋ ಇದನ್ನು ಡಿಸೈನ್ ಮಾಡಿದೆ.
ಈ ಪೋಸ್ಟರ್ ಮೂಲಕ ಸಿನಿಮಾದ ತಾಂತ್ರಿಕ ವರ್ಗದ ವಿವರವನ್ನು ಸಹ ನೀಡಲಾಗಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ವೈದಿ ಕ್ಯಾಮರಾ, ಕೆ ಎಂ ಪ್ರಕಾಶ್ ಸಂಕಲನ, ಕರಣ್ ಕಲಾ ನಿರ್ದೇಶಕ ಇರಲಿದೆ.
ಸಿನಿಮಾ ಟೈಟಲ್ 'ರೇಮೊ' ಯಾಕೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇಲ್ಲಿ ಸಿನಿಮಾದ ನಾಯಕನ ಹೆಸರು ರೇವಂತ್, ನಾಯಕಿ ಮೋಹನಾ ಇಬ್ಬರ ಲವ್ ಸ್ಟೋರಿಗೆ ಅವರ ಹೆಸರಿನ ಮೊದಲ ಅಕ್ಷರವನ್ನು ತೆಗೆದುಕೊಂಡು ಟೈಟಲ್ ಮಾಡಲಾಗಿದೆ.

ಹಾಗೆಂದ ಮಾತ್ರಕ್ಕೆ 'ರೇಮೊ' ಎನ್ನುವುದರ ಅರ್ಧ ಇಷ್ಟು ಮಾತ್ರ ಅಲ್ಲವಂತೆ. ಇದೇ ಹೆಸರನ್ನು ಇಡಲು, ಸಿನಿಮಾದಲ್ಲಿ ತುಂಬ ಕಾರಣಗಳಿವೆ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
ಅಂದಹಾಗೆ, ಸಿನಿಮಾಗೆ ಇಶಾನ್ ನಾಯಕನಾಗಿದ್ದಾರೆ. ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಇಬ್ಬರ ಯಂಗ್ ಜೋಡಿ ತೆರೆ ಮೇಲೆ ಮುದ್ದಾಗಿ ಕಾಣುತ್ತದೆ.

ಸಿ ಆರ್ ಮನೋಹರ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಮನೋಹರ್, ಇಶಾನ್ ಹಾಗೂ ಆಶಿಕಾ ರಂಗನಾಥ್ ಜೊತೆಗೆ ಪವನ್ ಒಡೆಯರ್ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ 'ರೇಮೊ' ಸಿನಿಮಾದ ಮುಹೂರ್ತ ನಡೆಯಲಿದೆ.


Click it and Unblock the Notifications











