ಕ್ರಿಸ್ ಗೇಲ್ ಮತ್ತು ಎಬಿಡಿಗೆ ಗೆಲುವಿನಲ್ಲಿ ಪಾಲು ನೀಡಿದ್ದು ಕೊಹ್ಲಿಯ ದೊಡ್ಡ ಗುಣ- ಸುನಿಲ್ ರಾವ್. !

ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ಮ ತಂಡ ನಿಮ್ಮ ತಂಡ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ. ದಿನಗಳು ಉರುಳಿದಂತೆ ಐಪಿಎಲ್ ನ ಕ್ರೇಜ್ ಇನ್ನು ಹೆಚ್ಚಾಗುತ್ತೆ. ಅದರಲ್ಲಿಯೂ ಈ ವರ್ಷದ ಐಪಿಎಲ್‌ನ ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ.

ಯಾಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಾಡಿದ ಆಟವೇ ಅಂತಹದ್ದು. ಪ್ರತಿಯೊಂದು ಪಂದ್ಯಕ್ಕೂ ತಮ್ಮ ತನು ಮನ ಅರ್ಪಿಸಿ, ಈ ಬಾರಿ ಗೆಲ್ಲಲೇಬೇಕೆಂಬ ಹಠದಿಂದ ನಮ್ಮ ತಂಡದ ಪ್ಲೇಯರ್ಸ್ ಆಡಿದರು. 18 ವರ್ಷಗಳಿಂದ ಕಾಣುತ್ತಾ ಬಂದ ಕನಸನ್ನು ಎಲ್ಲರೂ ಸೇರಿ ನನಸು ಮಾಡಿದರು.

rcb-ipl-victory-excuse-me-fame-actor-sunil-rao-reacts-to-filmibeat-kannada

ಇನ್ನು, ಐಪಿಎಲ್ ಅಂದರೆ ಜನಸಾಮಾನ್ಯರಲ್ಲಿ ಮಾತ್ರವಲ್ಲ ಚಿತ್ರರಂಗದಲ್ಲಿ ಕೂಡ ಹುರುಪು ಮತ್ತು ಉತ್ಸಾಹ ಹೆಚ್ಚಿಸುತ್ತೆ. ಎಲ್ಲರಂತೆ ಇಲ್ಲಿಯೂ ಕೂಡ ಪ್ರತಿ ವರ್ಷ ಈ ಬಾರಿ ಕಪ್ ನಮ್ಮದಾಗಬೇಕೆಂದು ಪ್ರಾರ್ಥನೆಯನ್ನು ಮಾಡಿದ್ದಾರೆ. ಸೀಟಿನ ಅಂಚಿಗೆ ಕುಳಿತು ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಆ ಪೈಕಿ ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಆಡಿ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದ, ಎಕ್ಸ್ ಕ್ಯೂಸ್ ಮೀ ಚಿತ್ರದ ಮೂಲಕ ಜನ ಮನ ಗೆದ್ದ 'ಸುನಿಲ್ ರಾವ್' ಕೂಡ ಒಬ್ಬರು. ಇಂಥಾ ಸುನಿಲ್ ರಾವ್ ಆರ್‌ಸಿಬಿ ಕಪ್ ಗೆದ್ದ ಖುಷಿಯನ್ನು ನಿಮ್ಮ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸುನಿಲ್ ರಾವ್ ''ನಿನ್ನೆಯ ಪಂದ್ಯ ನಿಜಕ್ಕೂ ಅದ್ಭುತವಾಗಿತ್ತು. ಇನ್ನು ನಿನ್ನೆ ಪಂದ್ಯ ಗೆದ್ದ ನಂತರ 1 ಗಂಟೆ 2 ಗಂಟೆಯವರೆಗೆ ಪಟಾಕಿ ಸಿಡಿಸಿ ಎಲ್ಲರು ಸಂಭ್ರಮಿಸಿದ್ದು ಅತ್ಯದ್ಭುವಾಗಿತ್ತು. ಕನ್ನಡಿಗರಿಗೆ, ಬೆಂಗಳೂರಿಗರಿಗೆ ಆರ್‌ಸಿಬಿ ಮೇಲಿರುವ ಅಭಿಮಾನ ಎಂತಹದ್ದು ಎನ್ನುವುದಕ್ಕೆ ಇದೇ ಕೈಗನ್ನಡಿ. ಇಷ್ಟು ವರ್ಷಗಳ ಕಾಯುವಿಕೆಗೆ ಪ್ರತಿಫಲ ಸಿಕ್ಕಾಗ ಎಷ್ಟು ಸೆಲೆಬ್ರೇಟ್ ಮಾಡ್ತಾರೆ ಎನ್ನುವುದಕ್ಕೆ ಕೂಡ ಇದು ಉದಾಹರಣೆ'' ಎಂದು ಹೇಳಿದ್ದಾರೆ.

ಇನ್ನು ''ಸಾಮಾನ್ಯವಾಗಿ ಎಲ್ಲರೂ ದುಡ್ಡಿಗಾಗಿ ಆಡ್ತಾರೆ, ಅದು ಸರ್ವೇ ಸಾಮಾನ್ಯ. ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಎಲ್ಲರಿಗೂ ಒಂದು ಬೆಲೆ ಅಂತ ಇರುತ್ತೆ. ಆದರೆ ವಿರಾಟ್ ಕೊಹ್ಲಿ ಹಾಗಲ್ಲ. ನಾನು ಇದೇ ಫ್ರಾಂಚೈಸಿಗೆ ಆಡ್ತೀನಿ, ಆರ್‌ಸಿಬಿ ಬಿಟ್ರೆ ನಾನು ಆಡಲ್ಲ ಎಂದು ಹೇಳಿದರು. ಆರ್‌ಸಿಬಿ ಕಡೆಗೆ, ನಮ್ಮ ಕಡೆಗೆ, ನಮ್ಮ ಕರ್ನಾಟಕದ ಕಡೆಗೆ ಈ ಮೂಲಕ ತಮ್ಮ ನಿಯತ್ತು ತೋರಿಸಿದರು. ಆ ನಿಯತ್ತಿಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಇನ್ನು ಇದೆಲ್ಲದಕ್ಕೆ ಪೂರಕವಾಗಿ ಬೆಂಗಳೂರು, ಕರ್ನಾಟಕ ಅಂತೇನು ಇಲ್ಲ ಕರ್ನಾಟಕದ ಆಚೆ ಕೂಡ ಆರ್‌ಸಿಬಿಗೆ ಸಪ್ರೇಟ್ ಫ್ಯಾನ್ ಬೇಸ್ ಇದೆಯಲ್ಲ, ಅವರ ನಿಷ್ಠೆ ಇಲ್ಲಿ ತುಂಬಾನೇ ಮುಖ್ಯ. ನೀವು ಗೆಲ್ಲಿ ಅಥವಾ ಸೋಲಿ ನಾವು ನಿಮ್ಮನ್ನು ಸಪೋರ್ಟ್ ಮಾಡ್ತೀವಿ ಎನ್ನುವ ಅಮರವಾದ ಪ್ರೀತಿ ಮತ್ತು ಬೇಷರತ್ತಾದ ಬೆಂಬಲ ಇದೆಯಲ್ಲ ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಂದ ಮಾತ್ರ ಸಾಧ್ಯ'' ಎಂದು ಕೂಡ ಸುನಿಲ್ ರಾವ್ ಫಿಲ್ಮಿ ಬೀಟ್‌ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂದುವರೆದು ''ಆರ್‌ಸಿಬಿ ಅಭಿಮಾನಿಗಳ ಇಷ್ಟೊಂದು ಪ್ರೀತಿ-ಅಭಿಮಾನಕ್ಕೆ ಅನುಗುಣವಾಗಿ ವಿರಾಟ್ ಕೊಹ್ಲಿ ಸತತವಾಗಿ 18 ವರ್ಷ ನಾನು ಒಂದೇ ತಂಡಕ್ಕೆ ಆಡೋದು, ಬೇರೆ ತಂಡಕ್ಕೆ ಆಡಲ್ಲ ಎಂದು ಹೇಳುವುದು, ಇನ್ಮುಂದೆ ಐಪಿಎಲ್ ಎಷ್ಟು ವರ್ಷ ಆಡ್ತಿನೋ ಅಷ್ಟು ವರ್ಷ ನಾನು ಬೆಂಗಳೂರು ತಂಡಕ್ಕೆ ಆಡೋದು ಎಂದು ಹೇಳುವುದು ಅವರ ನಿಯತ್ತು ತೋರಿಸುತ್ತೆ, ಅವರ ಬದ್ದತೆಯನ್ನು ತೋರಿಸುತ್ತೆ. ಇದೆಲ್ಲ ಪರಿಗಣಿಸಿದಾಗ ಅವರು ನಿನ್ನೆ ಕಣ್ಣೀರು ಹಾಕಿದ್ದಾಗಲಿ, ಭಾವುಕರಾಗಿದ್ದಾಗಲಿ, ಇದ್ಯಾವುದು ನನಗೆ ಆಶ್ಚರ್ಯ ಅಂತ ಅನಿಸಲಿಲ್ಲ. ಅವರ ಕಣ್ಣಿಂದ ಕಣ್ಣೀರು ಬರುವುದು ಸಹಜ . ಆಟದ ಮೇಲೆ ಮತ್ತು ಬೆಂಗಳೂರು, ಆರ್‌ಸಿಬಿಯ ಮೇಲೆ ಅವರಿಗೆ ಇರುವ ಪ್ರೀತಿಯನ್ನು ಕೂಡ ಅದು ತೋರಿಸುತ್ತೆ'' ಎಂದು ಸುನೀಲ್ ರಾವ್ ಹೇಳಿದ್ಧಾರೆ.

ಇನ್ನು ನಿನ್ನೆಯ ಪಂದ್ಯದಲ್ಲಿ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಕೂಡ ಹಾಜರಿದ್ದರು. ಈ ಕುರಿತು ಕೂಡ ಮಾತನಾಡಿರುವ ಸುನಿಲ್ ರಾವ್ '' ಗೆಲ್ಲೋ ಟೈಮ್‌ನಲ್ಲಿ ನಾವೇ ಸರ್ದಾರರು ಎಂದು ಭಾರತದಲ್ಲಿ ಅನೇಕರು ಅಂದುಕೊಳ್ಳುತ್ತಾರೆ. ಅದು ಮನುಷ್ಯನ ಸಹಜ ಪ್ರವೃತ್ತಿ'' ಎಂದು ಸುನಿಲ್ ರಾವ್ ಹೇಳಿದ್ದಾರೆ.

''ವಿಶೇಷವಾಗಿ ಭಾರತದಲ್ಲಿ ಗೆದ್ದಾಗ ನನ್ನಿಂದ ಗೆದ್ದಿದ್ದು ಎಂದು ಹೇಳಿಕೊಳ್ಳೋರು ಜಾಸ್ತಿ. ಅಂತಹದ್ದರಲ್ಲಿ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ ಅವರನ್ನು ಕರೆದು, ಗೆಲುವಲ್ಲಿ ಅವರದ್ದು ಪಾಲಿದೆ, ಗೆಲುವಿನಲ್ಲಿ ಅವರು ಇಲ್ಲದಿರಬಹುದು ಆದರೆ ಈ ಹಂತಕ್ಕೆ ಬರಲು ಅವರ ಕೊಡುಗೆ ಕೂಡ ಇದೆ ಎನ್ನುವುದನ್ನು ಒಪ್ಪಿಕೊಂಡು ಅವರಿಗೆ ಕೂಡ ಗೆಲುವಿನಲ್ಲಿ ಕ್ರೆಡಿಟ್ ಕೊಡುವುದು ನಿಜಕ್ಕೂ ಅದು ಕೊಹ್ಲಿ ಅವರದ್ದಾಗಿರಬಹುದು ಅಥವಾ ಮ್ಯಾನೇಜ್ಮೆಂಟ್‌ ಅವರದ್ದಾಗಿರಬಹುದು ಅವರ ದೊಡ್ಡ ಗುಣ ತೋರಿಸುತ್ತೆ ಎಂದಿರುವ ಸುನಿಲ್ ರಾವ್, ಕ್ರಿಸ್ ಗೇಲ್ ಮತ್ತು ಎಬಿಡಿ ಬೆಂಗಳೂರಿಗೆ ಬಂದಾಗ ಅವರಿಗೆ ಸಿಗುವ ಸನ್ಮಾನ, ಗೌರವ, ಭಾರತದ ಅನೇಕ ಕ್ರಿಕೆಟರ್‌ಗಳಿಗೆ ಸಿಗ್ದೇ ಇರಬಹುದೇನೋ ಅಷ್ಟೊಂದು ಪ್ರೀತಿ ಮತ್ತು ಅಕ್ಕರೆಯನ್ನು ನಾವು ತೋರಿಸುತ್ತೇವೆ. ನನ್ನ ಅನಿಸಿಕೆಯಲ್ಲಿ ಅವರ ಜೊತೆ ಕ್ರೆಡಿಟ್ ಶೇರ್ ಮಾಡಿರುವುದು ಕೊಹ್ಲಿ ಅವರ ದೊಡ್ಡ ಗುಣ'' ಎಂದು ಹೇಳಿದ್ದಾರೆ.

ಇನ್ನು ಈ ವರ್ಷ ಕಪ್ ಗೆದ್ದ ಆರ್‌ಸಿಬಿ ಮೇಲೆ ಮುಂದಿನ ವರ್ಷ ಕಪ್ ಗೆಲ್ಲಲೇಬೇಕೆಂಬ ಒತ್ತಡ ಹೆಚ್ಚಾಗುತ್ತಾ ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಸುನಿಲ್ ರಾವ್, ''ಮುಂದಿನ ವರ್ಷ ಒತ್ತಡ ಇರಲ್ಲ ಅನಸುತ್ತೆ. ಕಪ್ ಗೆಲ್ಲಲು ಸಾಧ್ಯವಾಗದ ಕಾರಣ ತಲೆಯ ಮೇಲೊಂದು ಗೂಬೆ ಕೂರಿಸಲಾಗಿತ್ತು. ಆ ಗೂಬೆಯನ್ನು ಈಗ ಕಿತ್ತೆಸೆಯಲಾಗಿದೆ. ಇಷ್ಟು ವರ್ಷ ಇರುವ ಒತ್ತಡವನ್ನೇ ನಿರ್ವಹಿಸಿದವರಿಗೆ ಮುಂದೆ ಗೆಲ್ಲಬೇಕು ಎಂಬ ಒತ್ತಡ ಇರುವುದಿಲ್ಲ ಎನ್ನುವುದು ನನ್ನ ಭಾವನೆ ಎಂದಿರುವ ಸುನಿಲ್ ರಾವ್ ಸೋತು..ಸೋತು..ಸೋತು ಅಭ್ಯಾಸ ಆದವರಿಗೆ ಸೋಲಿನ ಭಯ ಇರುವುದಿಲ್ಲ. ನಾವು ಅಷ್ಟೊಂದು ಕಷ್ಟದ ಸನ್ನಿವೇಶಗಳನ್ನೇ ಎದುರಿಸಿದೀವಿ, ಇನ್ನೇನು ಗೆಲ್ಲಬೇಕೆನ್ನುವ ಒತ್ತಡ ಅಷ್ಟೇ ಗೆದ್ದಿಲ್ಲ ಎನ್ನುವ ಕೊರಗು ಇರಲ್ಲ ಹೀಗಾಗಿ ಮುಂದಿನ ವರ್ಷ ಯಾವ ಒತ್ತಡ ಇರುವುದಿಲ್ಲ ಬದಲಿಗೆ ಇನ್ನು ಹೆಚ್ಚು ಶಕ್ತಿಶಾಲಿಯಾಗಿ ಆರ್‌ಸಿಬಿ ತಂಡ ಕಣಕ್ಕಿಳಿಯುತ್ತೆ'' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Actor Sunil Rao, known for his role in 'Excuse Me,' shares his thoughts and reactions on Royal Challengers Bangalore’s historic IPL victory in an exclusive interview with Filmibeat Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X