ಮತ್ತೆ ಟ್ರೆಂಡಿಂಗ್‌ನಲ್ಲಿ ವಿವಾದಾತ್ಮಕ ಗಜಪಡೆ ಪೋಸ್ಟ್; ಕಾರಣವೇನು?
ತಿಂಗಳ ಹಿಂದೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತು ಗಜಪಡೆ ಟ್ವಿಟರ್ ಪೇಜ್‌ನಲ್ಲಿ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಮತ್ತೆ ಟ್ರೆಂಡ್ ಆಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆ(ಮೇ 18) ಗೆದ್ದು ಬೀಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಬಹಳ ರೋಚಕವಾಗಿತ್ತು.
ಸೂಪರ್ ಕಿಂಗ್ಸ್ ಎದುರು ಆರ್‌ಸಿಬಿ ತಂಡ 27 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಹೈ ವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 218 ರನ್‌ಗಳ ಟಾರ್ಗೆಟ್ ಅನ್ನು ನೀಡಿತ್ತು. ಆದರೆ ಈ ಮೊತ್ತ ಬೆನ್ನತ್ತಿದ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 191 ರನ್‌ಗಳನ್ನು ಗಳಿಸಿ ಸೋಲೊಪ್ಪಿಕೊಂಡಿದ್ದರು. ಸತತ 6 ಪಂದ್ಯಗಳಲ್ಲಿ ಸೋತಿದ್ದ ಆರ್‌ಸಿಬಿ ಬಹುತೇಕ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು.

ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದ ಆರ್‌ಸಿಬಿ ಆಟಗಾರರು ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಪ್ಲೇ ಆಫ್ ಕನಸು ನನಸಾಗಿಸಿಕೊಂಡಿದೆ. ಚೆನ್ನೈ ವಿರುದ್ಧ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಸೋತಿತ್ತು. ಅದಕ್ಕೆ ಇದೀಗ ಸೇಡು ತೀರಿಸಿಕೊಂಡಂತಾಗಿದೆ. ಅತ್ತ ಪಂದ್ಯ ಗೆಲುತ್ತಿದ್ದಂತೆ ಅಭಿಮಾನಿಗಳಂತೂ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಇದೆಲ್ಲದರ ನಡುವೆ ಗಜಪಡೆ ಪೋಸ್ಟ್ ಟ್ರೆಂಡ್ ಆಗುತ್ತಿದೆ.
ಟೂರ್ನಿ ಆರಂಭದಲ್ಲಿ ಆರ್‌ಸಿಬಿ ತಂಡ ಕಳಪೆ ಪ್ರದರ್ಶನ ತೋರಿತ್ತು. ಹಾಗಾಗಿ ಭಾರೀ ಟೀಕೆ, ಟ್ರೋಲ್ ಎದುರಿಸುವಂತಾಗಿತ್ತು. ಅಂತಹ ಸಮಯದಲ್ಲೇ ಕಿಡಿಗೇಡಿ ಒಬ್ಬ ಇದಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಸರು ಎಳೆದು ತಂಡ ಅವಹೇಳಕಾರಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಿಡಿಗೇಡಿಯ ವಿರುದ್ಧ ದೂರು ದಾಖಲಾಗಿತ್ತು. ಸಿಎಂ ಸಿದ್ದರಾಮಯ್ಯ ಕೂಡ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.
ನಟ ದರ್ಶನ್ ಅಭಿಮಾನಿಯೇ ಈ ಪೋಸ್ಟ್ ಮಾಡಿದ್ದಾನೆ ಎಂದು ಪುನೀತ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು. ಇನ್ನು ಅವಹೇಳಕಾರಿ ಪದಗಳನ್ನು ಬಳಸಿ ಮಾಡಿದ್ದ ಪೋಸ್ಟ್ ಬಗ್ಗೆ ನೆಟ್ಟಿಗರಿಂದಲೂ ಬೇಸರ ವ್ಯಕ್ತವಾಗಿತ್ತು. ಸಿನಿಮಾ ತೆರೆಯರು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪರ ನಿಂತರು. ದರ್ಶನ್ ಅಭಿಮಾನಿಗಳು ಕೂಡ ಪೊಲೀಸರಿಗೆ ದೂರು ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದರು.

ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅತಿಥಿಯಾಗಿ ಹೋಗಿದ್ದರು. "ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್‌ಸಿಬಿ ಪದೇ ಪದೆ ಸೋಲುತ್ತಿದೆ" ಎಂದು ಗಜಪಡೆ ಟ್ವಿಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸದ್ಯ ಆರ್‌ಸಿಬಿ ತಂಡ ಪ್ಲೇ ಆಫ್‌ಗೆ ಹೋಗುವುದು ಖಚಿತವಾಗುತ್ತಿದ್ದಂತೆ ಹಲವರು ಅವಹೇಳಕಾರಿ ಪೋಸ್ಟ್ ನೆನಪಿಸಿ ತಿರುಗೇಟು ನೀಡುತ್ತಿದ್ದಾರೆ.
ಈಗ ನೋಡ್ರಪ್ಪ. ಆರ್‌ಸಿಬಿ ತಂಡದ ಪ್ರದರ್ಶನ. ಹೇಗಿತ್ತು ಸಿಎಸ್‌ಕೆ ವಿರುದ್ಧ ಪಂದ್ಯ. ಅವತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ಬರೆದವರು ಈಗ ಎಲ್ಲಿದ್ದೀರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಗಜಪಡೆ ಪೋಸ್ಟ್‌ಗೆ ಈ ಗೆಲುವು ಅರ್ಪಣೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಹಲವರು ಇನ್‌ಸ್ಟಾ, ವಾಟ್ಸಪ್, ಫೇಸ್ಬುಕ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.


Click it and Unblock the Notifications