"ಗೆದ್ದೇತ್ತಿನ ಬಾಲ ಹಿಡಿಯೋರು ಗೆಲ್ಲೋವರೆಗೂ.. ಆದ್ರೆ ಸೋತಗಲೂ ಜೊತೆ ಇರುವವರು ಸಾಯುವವರೆಗೂ.."
ಮತ್ತೊಮ್ಮೆ ಆರ್‌ಸಿಬಿ ಪ್ಲೇಆಫ್ ಕನಸು ಭಗ್ನವಾಗಿದೆ. ನಿನ್ನೆ(ಮೇ 22)ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್‌ಗಳ ಸೋಲುಂಡ ಆರ್‌ಸಿಬಿ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದ ಅಭಿಮಾನಿಗಳ ಕನಸು ನುಚ್ಚು ನೂರಾಗಿದೆ. ಪ್ರತಿ ವರ್ಷ 'ಈ ಸಲ ಕಪ್ ನಮ್ದೇ' ಎನ್ನುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ನಿರಾಸೆಯಾಗಿದೆ.
ಕನ್ನಡ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ ಕೂಡ ಕ್ರಿಕೆಟ್ ಪ್ರೇಮಿ. ಆರ್‌ಸಿಬಿ ತಂಡದ ವೀರಾಭಿಮಾನಿ. ಮತ್ತೊಮ್ಮೆ ಆರ್‌ಸಿಬಿ ತಂಡ ಸೋತು ಟೂರ್ನಿಯಿಂದ ಹೊರಬಿದ್ದ ವಿಚಾರದ ಬಗ್ಗೆ ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ವರ್ಷ ಆದರೂ ಆರ್‌ಸಿಬಿ ತಂಡದ ಮೇಲಿನ ಪ್ರೀತಿ ಕಮ್ಮಿ ಆಗಲ್ಲ, ಅಷ್ಟಕ್ಕೂ ನಾವು ಯಾಕೆ ಆರ್‌ಸಿಬಿ ತಂಡವನ್ನು ಇಷ್ಟು ಪ್ರೀತಿಸುತ್ತೇವೆ ಎನ್ನುವುದನ್ನು ವಿವರಿಸಿದ್ದಾರೆ. ನಿಜಕ್ಕೂ ಈ ಸೋಲು ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ತಂದಿದೆ.

16 ವರ್ಷಗಳಿಂದ ಆರ್‌ಸಿಬಿ ತಂಡ ಐಪಿಎಲ್ ಟೂರ್ನಿಯಲ್ಲಿ ಭಾಗಿ ಆಗುತ್ತಿದೆ. ಅದ್ಭುತ ಆಟದ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. ವಿರಾಟ್ ಕೊಹ್ಲಿ ವೀರಾವೇಷದ ಆಟವನ್ನು ನೋಡುವದೇ ಚಂದ. ಪ್ರತಿ ವರ್ಷ ಟೂರ್ನಿ ಹತ್ತಿರವಾಗುತ್ತಿದ್ದಂತೆ 'ಈ ಸಲ ಕಪ್ ನಮ್ದೇ' ಎನ್ನುವ ಸ್ಲೋಗನ್ ಜೋರಾಗಿ ಸದ್ದು ಮಾಡುತ್ತದೆ. ಸೋಲುವಂತಹ ಪಂದ್ಯಗಳನ್ನೆಲ್ಲಾ ಗೆದ್ದು ತೋರಿಸಿ ಥ್ರಿಲ್ ಕೊಡುವ ತಂಡ ಕಪ್‌ಗೆ ಮುತ್ತಿಡಲು ಮಾತ್ರ ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳು ನಂಬಿಕೆ ಕಳೆದುಕೊಂಡಿಲ್ಲ, ಮುಂದಿನ ವರ್ಷ 'ಕಪ್ ನಮ್ದೇ' ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ನಿರ್ದೇಶಕ ಸುನಿ ಟ್ವೀಟ್ ಮಾಡಿ, "ನಾವು ಯಾಕೆ ಆರ್‌ಸಿಬಿ ತಂಡವನ್ನು ಇಷ್ಟು ಪ್ರೀತಿಸ್ತೀವಿ ಅಂದ್ರೆ,
2008ರಲ್ಲಿ #IPL ಎನ್ನುವ ಟೂರ್ನಿ ಅನೌನ್ಸ್ ಆದಾಗ ಭಾರತದ 28 ರಾಜ್ಯಗಳಲ್ಲಿ ಕೇವಲ 8 ರಾಜ್ಯಗಳು ಮಾತ್ರ ಸೆಲೆಕ್ಟ್ ಆಗಿತ್ತು.ಅದರೊಲ್ಲೊಂದು ಆಯ್ಕೆ ಆಗಿದ್ದೂ ಕರ್ನಾಟಕದ ವಾಣಿಜ್ಯನಗರಿ ಬೆಂಗಳೂರು. ನಮ್ಮ ಮೊದಲ ಪ್ರೇಮ ಅದೇ.. RCBಗೆ ಬ್ರ್ಯಾಂಡ್ ಆಗಿದ್ದು ರಾಹುಲ್ ದ್ರಾವಿಡ್..ಟೀಂನಲ್ಲಿ ಇದ್ದಿದ್ದೂ ಅನಿಲ್ ಕುಂಬ್ಳೆ...
ಇದಕ್ಕಿನ್ನಾ ಬೇರೇನೂ ಬೇಕು ಸಪೋರ್ಟ್ ಮಾಡಲು...
ಲೋಕಲ್ ಪ್ಲೇಯರ್ಸ್‌ಗೆ ಅಡಿಪಾಯ ಹಾಕಿದೆ
ಅಂಡರ್ 19 ವರ್ಲ್ಡ್ ಕಪ್ ಗೆದ್ದ ತಂಡದ ನಾಯಕ ವಿರಾಟ್ ಅನ್ನೂ ಕೂಡ ದೆಹಲಿ ಖರೀದಿಸದ ಕಾರಣ RCB ತನ್ನ ತೆಕ್ಕೆಗೆ ಸೇರಿಸಿಕೊಂಡಿತು...
ನಮ್ಮ ಆಶಯದಷ್ಟು ಮನ್ನಣೆ ಕೊಟ್ಟಿಲ್ಲವಾದರೂ ಮನೀಶ್ ಪಾಂಡೆ... ಕೆಎಲ್ ರಾಹುಲ್.. ಶ್ರೀನಾಥ್ ಅರವಿಂದ್.. ವಿನಯ್ .. ಬಿನ್ನಿ.. ಮಿಥುನ್.. ವೈಶಾಕ್, ಹೀಗೆ ಹಲವಾರು ಲೋಕಲ್ ಪ್ಲೇಯರ್ಸ್‌ಗೆ ಕೂಡ ಆರ್‌ಸಿಬಿ ಅಡಿಪಾಯ ಹಾಕಿದೆ... ಅಲ್ಲಿಂದ ಶುರುವಾದ ನಮ್ಮ ಅಭಿಮಾನ.. ಒಂದೊಂದೇ ಮೆಟ್ಟಿಲು ಏರುತ್ತಾ.. ಎಬಿಡಿ, ಗೇಲ್, ಕೊಹ್ಲಿ ಆಟಗಳಿಗೆ, ದಾಖಲೆಗಳಿಗೆ ರೋಚಕ ಫಿನಿಶಿಂಗ್, ಪ್ಲೇಯರ್ಸ್ ನಮಗೆ ಧನ್ಯವಾದ ಹೇಳುವ ಬಗೆ, ಕೊಹ್ಲಿ ಬೇರೆ ಜೆರ್ಸಿಯಲ್ಲೂ ನೆನೆಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಹೇಳಿಕೆಗಳು ಹಾಗೂ ಇನ್ನಿತರ ಬೆಳವಣಿಗೆಗಳು ನಮ್ಮನ್ನೂ
ಎಂದಿಗೂ ಬಿಡದ ಪ್ರಾಮಾಣಿಕ ಅಭಿಮಾನಿಗಳಾದೆವು.
ನಮಗೆ ಕಪ್ ಗೆಲ್ಲುವ ಹಂಬಲ
ಗೆದ್ದೇತ್ತಿನ ಬಾಲ ಹಿಡಿಯೋರು ಗೆಲ್ಲೋವರೆಗೂ.. ಆದ್ರೆ ಸೋತಗಲೂ ಜೊತೆ ಇರುವವರು ಸಾಯುವವರೆಗೂ... ನಮಗೆ ಕಪ್ ಗೆಲ್ಲುವ ಹಂಬಲ... ಆದರೆ ಗೆಲ್ಲದಿದ್ದರೂ ನಿಯತ್ತಿನ ತಂಡ ಎನ್ನುವ ಬಲ.. ಪ್ಲೇಯರ್ಸ್ ಗುರಾಯಿಸುವಾಗ..ಬೈಯ್ಯುವಾಗ
ಅಭಿಮಾನಿ ಒಳಗೊಳಗೆ ಬೈತಾನೆ. ಆದರೆ ನಮ್ಮ ಫ್ಯಾನ್ಸ್ #rcbiansಗೆ opp.player ಬೈದರೆ ನಮ್ಮ ಪರವಾಗಿ #ಕೊಹ್ಲಿ ನೇ ಬೈತಾನೆ...
ಅದು player ಆದ್ರೂ ಸರಿ.. Member of parliment ಆದ್ರೂ ಸರಿ.. ಮ್ಯಾಂಗೋ ಮಾರುವವನಾದ್ರೂ ಸರಿ...
ಹಲವು ಮಿಸ್ಟೇಕ್ ಇದ್ದರೂ
Fultoss ಹಾಕ್ತಾರೆ...Commentry ಮಾಡುವವರನ್ನು ಕರೆದು ಆಡಿಸುತ್ತಾರೆ.. ಚಾನ್ಸ್ ಮೇಲೆ ಚಾನ್ಸ್ ಕೊಡ್ತಾರೆ.. ಸ್ಕೌಟಿಂಗ್ ಸರಿ ಇಲ್ಲಾ.. ಲೋಕಲ್ ಪ್ಲೇಯರ್ಸ್ ಗೆ ವಾಲ್ಯೂ ಕೊಡೋಲ್ಲ, Bangalore ಬೆಂಗಳೂರು ಆಗಿಲ್ಲ.. ಈ ರೀತಿ ಹಲವು ಮಿಸ್ಟೇಕ್ ಇದ್ದರೂ #RCB ನಮ್ಮ ಮಗು... ಸ್ವಲ್ಪ ರಚ್ಚೆ.. ಕೊನೆ ಬೆಂಚ್... ಆಗಾಗ ಫೇಲ್.. ಏನೇ ಆದರೂ ಅದು ನಮ್ಮ ಮಗು. ಯಾವುದೋ ಮಗು ರ್ಯಾಂಕ್ ಬರುತ್ತದೆ ಎಂದು, ನಾವು ಆ ಮಗುವನ್ನು ನಮ್ಮ ಮಗು ಎಂದೇಳಲು ಇಷ್ಟ ಪಡುವುದಿಲ್ಲ... ಇವತ್ತಲ್ಲ ನಾಳೆ "cup""... ನಮ್ಮದಾಗಬಹುದು, ಆಗದಿದ್ರು ನಾವು ಬೇರೆ ಆಗುವುದಿಲ್ಲ" ಯಾವತ್ತೂ" ಎಂದು ಸುನಿ ಬರೆದುಕೊಂಡಿದ್ದಾರೆ.


Click it and Unblock the Notifications











