RCB vs PBKS: ಚಿತ್ರಮಂದಿರಗಳಲ್ಲಿ ಆರ್‌ಸಿಬಿ vs ಪಂಜಾಬ್ ಫೈನಲ್ ಕದನ; ಈಗ್ಲೇ ಟಿಕೆಟ್ ಬುಕ್ ಮಾಡಿ
ಆರ್‌ಸಿಬಿ ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದ ಆ ಸಮಯ ಬಂದೇಬಿಟ್ಟಿದೆ. 'ಈ ಸಲ ಕಪ್ ನಮ್ದೇ' ಎನ್ನುವ ಕೂಗು ಮತ್ತಷ್ಟು ಜೋರಾಗಿದೆ. ಪಂಜಾಬ್ ಎದುರು ಇಂದು(ಜೂನ್ 3) ಐಪಿಎಲ್ ರೋಚಕ ಫೈನಲ್ ಪಂದ್ಯ ನಡೆಯಲಿದೆ. ಚಿತ್ರಮಂದರಿಗಳಲ್ಲಿ ಕೂಡ ಪಂದ್ಯದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಂದ್ಯ ಪ್ರದರ್ಶನವಾಗಲಿದೆ. ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಎರಡು ಪಟ್ಟು ಮೂರು ಪಟ್ಟು ಹಣ ಕೊಟ್ಟು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಸಾಕಷ್ಟು ಶೋಗಳು ಸೋಲ್ಡೌಟ್ ಆಗಿದೆ. ರೆಸ್ಪಾನ್ಸ್ ನೋಡಿ ಹೊಸದಾಗಿ ಮತ್ತಷ್ಟು ಶೋಗಳನ್ನು ಓಪನ್ ಮಾಡಲಾಗುತ್ತಿದೆ. ಒಟ್ಟಾರೆ ದೊಡ್ಡ ಪರದೆಯಲ್ಲಿ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಜ್ಯದಿಂದ ಕೆಲ ಅಭಿಮಾನಿಗಳು RCB vs PBKS ಫೈನಲ್ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಹೊರಟಿದ್ದಾರೆ. ಇನ್ನು ಪಬ್‌ಗಳಲ್ಲಿ ಮಾಲ್‌ಗಳಲ್ಲಿ ಇರುವ ದೊಡ್ಡ ಪರದೆಗಳಲ್ಲಿ ಪಂದ್ಯದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪಂದ್ಯದ ನೇರ ಪ್ರಸಾರಕ್ಕೆ ಮೈದಾನಗಳಲ್ಲಿ ಬೃಹತ್ ಪರದೆಗಳನ್ನು ಹಾಕಲಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳ ವಿಚಾರಕ್ಕೆ ಬಂದರೆ ಬೆಂಗಳೂರಿನ ಪಿವಿಆರ್ ನೆಕ್ಸಸ್ ಮಾಲ್(PVR), ಕನಕಪುರ ರಸ್ತೆಯ ಸೂಪರ್‌ಪ್ಲೆಕ್ಸ್ ಫೋರಂ ಮಾಲ್(PVR), ವೈಟ್ ಫೀಲ್ಡ್ ಫಿನೆಕ್ಸ್ ಮಾಲ್(PVR), ಯಲಹಂಕದ ಗೆಲರಿಯಾ ಮಾಲ್(INOX), ಮಲ್ಲೇಶ್ವರಂ ಮಂತ್ರಿ ಮಾಲ್(INOX), ಜಯನಗರ ಗರುಡ ಸ್ವಾಗತ್(INOX), ಜೆಪಿ ನಗರ ಮಂತ್ರಿಮಾಲ್(INOX) ಹೀಗೆ ಹಲವು ಕಡೆಗಳಲ್ಲಿ ಪಂದ್ಯ ನೇರ ಪ್ರಸಾರ ಆಯೋಜಿಸಲಾಗಿದೆ. ಈಗಾಗಲೇ ಬಹುತೇಕ ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ. ಕೆಲವೆಡೆ ಫಾಸ್ಟ್ ಫಿಲ್ಲಿಂಗ್ ನಡೀತಿದೆ.
ಇನ್ನು ಮೈಸೂರಿನ ನೆಕ್ಸಸ್ ಮಾಲ್(PVR), ಮಾಲ್ ಆಫ್ ಮೈಸೂರು(INOX) ಹಾಗೂ ಗರುಡ ಮಾಲ್(PVR)ಗಳಲ್ಲಿ ಪಂದ್ಯ ವೀಕ್ಷಿಸಬಹುದು. ಒಟ್ಟಾರೆ ಪಂದ್ಯ ಆಡಲು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸಜ್ಜಾದಂತೆ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಹೈವೋಲ್ಟೇಜ್ ಪಂದ್ಯ ಶುರುವಾಗಲಿದೆ. ಈ ಬಾರಿ ಆರ್‌ಸಿಬಿ ತಂಡದ ಮೇಲೆ ಭಾರೀ ಭರವಸೆ ಹೆಚ್ಚಿದೆ. ತಂಡ ಎಲ್ಲಾ ವಿಭಾಗಗಳಲ್ಲಿ ಬಹಳ ಬಲಿಷ್ಠವಾಗಿದೆ. ಅತ್ತ ಪಂಜಾಬ್ ತಂಡವನ್ನು ಸಹ ಹಗುರವಾಗಿ ಪರಿಗಣಿಸುವಂತಿಲ್ಲ.
ಎಲ್ಲೆಲ್ಲೂ ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ ಎಂಬ ಕೂಗು ಮಾರ್ದನಿಸುತ್ತಿದೆ. ಆರ್‌ಸಿಬಿ ಜೆರ್ಸಿ ಹಾಟ್ ಮಾರಾಟವಾಗುತ್ತಿದೆ. ದುಪಟ್ಟು ಹಣ ತೆತ್ತು ಅಭಿಮಾನಿಗಳು ಟೀಶರ್ಟ್ ಖರೀದಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರ್‌ಸಿನಿ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಆರ್‌ಸಿನಿ ಹಾಗೂ ಪಂಜಾಬ್ ಎರಡೂ ತಂಡಗಳು ಈವರೆಗೆ ಟ್ರೋಫಿ ಗೆದ್ದಿಲ್ಲ. 3 ಬಾರಿ ಪ್ಲೇ ಆಫ್ ಹಂತಕ್ಕೇರಿದರೂ ಫೈನಲ್ ಗೆಲುವು ಆರ್‌ಸಿಬಿಗೆ ಮರೀಚಿಕೆಯಾಗಿಯೇ ಉಳಿದಿದೆ.
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಯುತ್ತಿದೆ. ಅಭಿಮಾನಿಗಳು ಮಾತ್ರವಲ್ಲ ತಾರೆಯರು, ರಾಜಕೀಯ ಮುಖಂಡರು ಕೂಡ ಆರ್‌ಸಿಬಿ ಪಂದ್ಯ ಗೆಲ್ಲಬೇಕು ಎಂದು ಶುಭ ಹಾರೈಸುತ್ತಿದ್ದಾರೆ. ಈ ಬಾರಿ ಟ್ರೋಫಿ ಗೆದ್ದು ವಿರಾಟ್ ಕೊಹ್ಲಿಗೆ ಉಡುಗೊರೆ ನೀಡಬೇಕು ಎಂದು ಆರ್‌ಸಿಬಿ ತಂಡದ ಆಟಗಾರರು ಕಾಯುತ್ತಿದ್ದಾರೆ. ಅತ್ತ ಪ್ರೀತಿ ಜಿಂಟಾಗೆ ಗೆಲುವಿನ ಕಿರೀಟ ತೊಡಿಸಬೇಕು ಎಂದು ಶ್ರೇಯಸ್ ಅಯ್ಯರ್ ಅಂಡ್ ಟೀಂ ಸಜ್ಜಾಗಿದೆ.
ಆರ್‌ಸಿಬಿ ತಂಡದಲ್ಲಿ ಸಾಲ್ಟ್, ವಿರಾಟ್ ಕೊಹ್ಲಿ, ಪಟಿದಾರ್, ಡೇವಿಡ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡದಲ್ಲಿ ಶ್ರೇಯಸ್ ಅಯ್ಯರ್, ಪ್ರಿಯಾಂಶು ಹಾಗೂ ಚಹಾಲ್ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.


Click it and Unblock the Notifications











