ನಿಮಗೋಸ್ಕರ ಎಲ್ಲಾ ಮುಚ್ಕೊಂಡಿದ್ದೆ.. ಯುದ್ಧಕ್ಕೆ ನಾವು ಸಿದ್ಧ, ಯಾಕಂದ್ರೆ ನಾವು ಮಾತಿಗೆ ಬದ್ಧ- ಸುದೀಪ್ ಸವಾಲು ಹಾಕಿದ್ದೇಕೆ?
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಈ ವಾರ ಬಿಡುಗಡೆ ಆಗ್ತಿದೆ. ಹೇಳಿದಂತೆಯೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ ಕಿಚ್ಚ ಸುದೀಪ್. ಈಗಾಗಲೇ ಸಾಂಗ್ಸ್, ಟ್ರೈಲರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಪ್ರೀ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗ್ತಿದೆ. ಹುಬ್ಬಳ್ಳಿಯಲ್ಲಿ ಅದ್ಧೂರಿ ಈವೆಂಟ್ ನಡೆದಿದೆ.
ಹುಬ್ಬಳ್ಳಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಈವೆಂಟ್ ನಡೆದಿದೆ. ಕಿಚ್ಚ ಸುದೀಪ್ ಸೇರಿ ಇಡೀ ಚಿತ್ರತಂಡ ಭಾಗಿ ಆಗಿ ಪ್ರಚಾರ ಮಾಡಿದೆ. ವೇದಿಕೆಯಲ್ಲಿ ಮಾತನಾಡಿದ ನಟ ಸುದೀಪ್ ತಮ್ಮ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ. ಯುದ್ಧಕ್ಕೆ ನಾವು ಸಿದ್ಧ, ಯಾಕಂದ್ರೆ ನಾವು ಮಾತಿಗೆ ಬದ್ಧ ಎಂದು ಖಡಕ್ ಆಗಿ ಹೇಳಿದ್ದಾರೆ.

'ಮ್ಯಾಕ್ಸ್' ಕಾಂಬಿನೇಷನ್‌ನಲ್ಲಿ 'ಮಾರ್ಕ್' ಸಿನಿಮಾ ನಿರ್ಮಾಣವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಆಕ್ಷನ್ ಥ್ರಿಲ್ಲರ್ ಕಥೆ ಕಟ್ಟಿಕೊಡಲಾಗಿದೆ. ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆಯ ಆಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ಕೊನೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಕಿಚ್ಚು ಸುದೀಪ್ ಮಾತನಾಡಿದರು.
ನಿಮ್ಮ ಮುಂದೆ ಮಾತನಾಡಲು ತುಂಬಾ ಆಸೆ ಇದೆ. ಆದರೆ ಕೆಲವನ್ನು ಕಂಟ್ರೋಲ್ ಮಾಡ್ಕೊಂಡು ಮಾತಾಡ್ತೀನಿ ಎಂದು ಸುದೀಪ್ ಹೇಳಿದ್ದಾರೆ. "ಹುಬ್ಬಳ್ಳಿಯಲ್ಲೇ ಕಾರ್ಯಕ್ರಮ ಮಾಡಲು ಒಂದು ಕಾರಣ ಇದೆ. ಕೆಲವು ಮಾತು ಹುಬ್ಬಳ್ಳಿಗೆ ಬಂದು ಮಾತನಾಡಿದ್ರೆ, ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ. ಹೇಗೆ ತಟ್ಟಬೇಕೋ ತಟ್ಟುತ್ತೆ, ಈ ಊರಿನಿಂದ ಸಿಕ್ಕ ಪ್ರೀತಿ ವಿಶ್ವಾಸ ಯಾವತ್ತು ಮರೆಯುವುದಿಲ್ಲ. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸ್ನೇಹಿತರಿಗೆ, ಅಭಿಮಾನಿಗಳಿಗೆ ಧನ್ಯವಾದ ಹೇಳ್ತೀನಿ. ಜುಲೈ 5ಕ್ಕೆ ಒಂದು ಹೇಳಿದ್ದೆ. ಡಿಸೆಂಬರ್ 25ಕ್ಕೆ ಥಿಯೇಟರ್ ಬಾಗಿಲು ತಟ್ತೀವಿ ಅಂತ. ಜೋರಾಗಿ ತಟ್ತಿದ್ದೀವಿ" ಎಂದು ಸುದೀಪ್ ಹೇಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಬಳಿಕ ಮಾತು ಮುಂದುವರೆಸಿದ ಕಿಚ್ಚ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಸವಾಲು ಹಾಕಿದ್ದಾರೆ. "25ಕ್ಕೆ ಥಿಯೇಟರ್‌ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ. ಈ ವೇದಿಕೆ ಮೇಲೆ ಹೇಳ್ತೀನಿ. ಯುದ್ಧಕ್ಕೆ ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ನಿಮಗೋಸ್ಕರ ಬಾಯಿ ಎಲ್ಲವನ್ನು ಮುಚ್ಚಿಕೊಂಡಿದ್ದೆ. ಬಾಯಿ ಇಲ್ಲ ಅಂತಲ್ಲ. ಬಹಳಷ್ಟು ಕಲ್ಲಿನ ತೂರಾಟ ನನ್ನಿಂದ ನಿಮ್ಮ ಬೀಳುತ್ತೆ. ಇವತ್ತು ಹೇಳ್ತಿದ್ದೀನಿ, ತಡೆಯುವಷ್ಟು ತಡೆಯಿರಿ. ಮಾತನಾಡುವ ಸಮಯದಲ್ಲಿ ಮಾತಾಡಿ. ಡಿಸೆಂಬರ್ 25ಕ್ಕೆ ಪರದೆ ಮುಂದೆ ನೀವು ಕೂಗುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು" ಎಂದು ಸುದೀಪ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಗೊತ್ತೇಯಿದೆ. 'ಮಾರ್ಕ್' ಚಿತ್ರಕ್ಕೂ ಪೆಟ್ಟು ಕೊಡಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಇಂತಹವರಿಗೆ ಸುದೀಪ್ ಕೌಂಟರ್ ಕೊಟ್ಟಿದ್ದಾರೆ. ಇದು ತಮಿಳು ಕಲಾವಿದರು, ತಂತ್ರಜ್ಞರು ಮಾಡಿರುವ ಸಿನಿಮಾ ಹಾಗಾಗಿ ನೋಡಬಾರದು ಎಂದು ಪೋಸ್ಟ್‌ಗಳು ವೈರಲ್ ಆಗ್ತಿದೆ. ಅದೇ ಕಾರಕ್ಕೆ ಹುಬ್ಬಳ್ಳಿಯಲ್ಲಿ ಈವೆಂಟ್ ಮಾಡಿ ಇದು ಕನ್ನಡ ಸಿನಿಮಾ ಎಂದು ಸುದೀಪ್ ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ.
'ಮಾರ್ಕ್' ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ ಮಾಡಬೇಕು, ಪೈರಸಿ ಮಾಡಬೇಕು ಎಂದು ಕೆಲವರು ಹವಣಿಸುತ್ತಿದ್ದಾರೆ. ಅಂತಹವರಿಗೆ ಸುದೀಪ್ ಇದೀಗ ಸವಾಲು ಹಾಕಿದ್ದಾರೆ. ನಾವು ಯುದ್ಧಕ್ಕೆ ಸಿದ್ಧ ಎಂದಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











