ಚಿತ್ರಮಂದಿರ ಮತ್ತು ಚಿತ್ರರಂಗದ ಸಮಸ್ಯೆ ; ತಪ್ಪು ಜನರದ್ದಲ್ಲ ಎಂದ ಉಪೇಂದ್ರ..!
ಕನ್ನಡ ಚಿತ್ರರಂಗದ ಅಳಿವು-ಉಳಿವು ಸೂಪರ್ ಸ್ಟಾರ್ಸ್ ಕೈಯಲ್ಲಿದೆ. ಆದರೆ ಅವರು ಕೈ ಕಟ್ಕೊಂಡು ಕುಳಿತುಕೊಂಡಿದ್ದಾರೆ. ಇನ್ನೂ ಹೊಸಬರದ್ದು ಕಥೆ ಅಲ್ಲ ಬದಲಿಗೆ ವ್ಯಥೆ.
ಪ್ರೇಕ್ಷಕರ ಕೊರತೆಯಿಂದ ಹೊಸಬರ ಮುಖದಲ್ಲಿನ ಕಾಂತಿ ಕಡಿಮೆಯಾಗುತ್ತಿದೆ ಹೊರತು ಯಾವುದೇ ಕ್ರಾಂತಿ ಆಗ್ತಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ಕನ್ನಡದ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹೀಗಿರುವಾಗ ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಉಂಟಾಗಿರುವ ಈ ಬರಗಾಲದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ

ಹೌದು, ನಿಮಗೆ ಗೊತ್ತು .. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಮರು ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿಯೇ ಉಪೇಂದ್ರ ಅವರ 'ಎ' ಸಿನಿಮಾ ಈ ಶುಕ್ರವಾರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಇನ್ನೂ ಒಬ್ಬ ನಿರ್ದೇಶಕನಾಗಿ ಈ ಕಾಲದ ಪ್ರೇಕ್ಷಕರು ಆ ಕಾಲದ ಬ್ಲಾಕ್ ಬಸ್ಟರ್ ಚಿತ್ರವನ್ನ ಹೇಗೆ ಸ್ವೀಕರಿಸುತ್ತಾರೆ ಅನ್ನುವ ಕುತೂಹಲ ಸಹಜವಾಗಿಯೇ ಉಪೇಂದ್ರ ಅವರಲ್ಲಿದೆ.
ಈ ಕಾರಣಕ್ಕೆ ಸ್ವಲ್ಪ ಎಕ್ಸೈಟ್ ಆಗಿರುವ ಉಪೇಂದ್ರ ಎ ಚಿತ್ರದ ಕುರಿತು ಸಂದರ್ಶನಗಳನ್ನ ಕೊಡ್ತಿದ್ದಾರೆ. ಚಿತ್ರದ ಕುರಿತು ಆಸಕ್ತಿಕರ ವಿಚಾರಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಟಿವಿ 9 ವಾಹಿನಿಯ ಜೊತೆ ಮಾತನಾಡಿರುವ ಉಪ್ಪಿ ಚಿತ್ರಮಂದಿರದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ಜಗತ್ತು ಬದಲಾಗಿದೆ ಇವತ್ತು ಅಂಗೈಯಲ್ಲಿಯೇ ಜಗತ್ತು ಇದೆ ಎಂದಿರುವ ಉಪೇಂದ್ರ ಕೈಯಲ್ಲೇ ಸಿಗುವ ವಿವಿಧ ಬಗೆಯ ಮನರಂಜನೆಯನ್ನೂ ಮೀರಿದ್ದನ್ನು ಜನರು ನಿರೀಕ್ಷಿಸುತ್ತಿದ್ದಾರೆ ಎಂದಿದ್ದಾರೆ. ಬರೀ ದೊಡ್ಡ ಬಜೆಟ್ ಸಿನಿಮಾ ಅಂತಲ್ಲ. ಮೇಕಿಂಗ್, ಕಂಟೆಂಟ್ ದೃಷ್ಟಿಯಿಂದಲೂ ಹೊಸತನವನ್ನ ಪ್ರೇಕ್ಷಕರು ನಿರೀಕ್ಷೆ ಮಾಡ್ತಿದ್ದಾರೆ ಹೀಗಾಗಿ ಪ್ರೇಕ್ಷಕರು ಥಿಯೇಟರ್ಗೆ ಬರಲ್ಲ ಅಂತ ನಾವು ಜನರನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಉಪೇಂದ್ರ.
ಮುಂದುವರೆದು ಮಾತನಾಡಿರುವ ಉಪ್ಪಿ, ಒಂದು ಒಳ್ಳೆಯ ಸಿನಿಮಾ ನಂತರದ 5 ಸಿನಿಮಾಗಳಿಗೆ ಜನರನ್ನು ಕರೆದುಕೊಂಡು ಬರುತ್ತದೆ ಆದರೆ ಅದೇ ಒಂದು ಕೆಟ್ಟ ಸಿನಿಮಾ ಮುಂದಿನ 5 ಒಳ್ಳೆಯ ಸಿನಿಮಾಗಳಿಗೆ ಜನರನ್ನು ತಡೆಯುತ್ತದೆ ಎಂದಿದ್ದಾರೆ. ಈ 5ರಲ್ಲಿ ಒಂದು ಒಳ್ಳೇಯ ಸಿನಿಮಾ ಬಂದರೂ ಆ ಸಿನಿಮಾ ಮಿಕ್ಕ 04 ಕೆಟ್ಟ ಚಿತ್ರಗಳಿಂದ ಪ್ರೇಕ್ಷಕರಿಗೆ ತಲುಪಲು ಸಾಧ್ಯವಾಗದೇ ಇರಬಹುದು ಎಂಬ ಅಭಿಪ್ರಾಯವನ್ನು ಕೂಡ ಉಪೇಂದ್ರ ವ್ಯಕ್ತಪಡಿಸಿದ್ದಾರೆ

ಇನ್ನೂ ಕೆಲವೊಮ್ಮೆ ಚಿತ್ರ ಚೆನ್ನಾಗಿದ್ದರೂ ಪ್ರೇಕ್ಷಕರು ಬರಲ್ಲ ಅದಕ್ಕೆ ಚುನಾವಣೆ, ಐಪಿಎಲ್ ಸೇರಿ ಬೇರೆ ಬೇರೆ ಕಾರಣಗಳಿರಬಹುದು ಎಂದಿರುವ ಉಪೇಂದ್ರ, ಇನ್ನೂ ಕೆಲವೊಮ್ಮೆ ಚಿತ್ರದ ಕಥಾವಸ್ತು ಆ ಕಾಲಕ್ಕೆ ಸರಿ ಹೊಂದದೇ ಇರುವುದು ಕೂಡ ಕಾರಣವಾಗುತ್ತೆ ಅಂದಿದ್ದಾರೆ. ಆದರೆ ಇದೆಲ್ಲದರ ನಡುವೆ ಕೆಲ ಪ್ರಾಮಾಣಿಕ ಪ್ರಯತ್ನಗಳಿಗೆ ಸಿಗಬೇಕಾದ ಜನ ಮನ್ನಣೆ ಹಿಂದೆಯೂ ಸಿಕ್ಕಿದೆ. ಮುಂದೆಯೂ ಸಿಗುತ್ತೆ. ಒಳ್ಳೇಯ ಚಿತ್ರಗಳನ್ನ ಕನ್ನಡಿಗರು ಕೈ ಬಿಟ್ಟಿರುವ ಉದಾಹರಣೆ ತುಂಬಾನೇ ಕಡಿಮೆ ಈ ಕಾರಣಕ್ಕೆ ಚಿತ್ರಮಂದಿರದ ಸಮಸ್ಯೆಗೆ ಪ್ರೇಕ್ಷಕರನ್ನ ದೂಷಿಸುವುದು ತಪ್ಪು ಅಂದಿದ್ದಾರೆ ಉಪೇಂದ್ರ
ಬೇರೆ ಬೇರೆ ಕಾರಣಗಳು ಕೂಡ ಇರುತ್ತದೆ. ಆ ಸಮಯ ಸೂಕ್ತವಾಗಿಲ್ಲದೇ ಇರಬಹುದು. ಆದರೂ ಜನರು ಒಳ್ಳೆಯ ಸಿನಿಮಾವನ್ನು ಕೈ ಹಿಡಿದಿದ್ದಾರೆ. ಜನರನ್ನು ದೂಷಿಸಬಾರದು' ಎಂದು ಉಪೇಂದ್ರ ಹೇಳಿದ್ದಾರೆ


Click it and Unblock the Notifications











