'ಯುಐ' ಲಿಪ್ ಲಾಕ್ ಸೀನ್‌ಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ; ಚಿತ್ರದ ಕಥೆ ಕೂಡ ಬಹಿರಂಗ
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಯುಐ' ಸಿನಿಮಾ ಬಿಡುಗಡೆಗೆ 6 ದಿನ ಬಾಕಿಯಿದೆ. ಶೀಘ್ರದಲ್ಲೇ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ಇನ್ನು ಈಗಾಗಲೇ ಚಿತ್ರ ಸೆನ್ಸಾರ್ ಮುಗಿಸಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲು ಸಜ್ಜಾಗಿದೆ.
ದೊಡ್ಡಮಟ್ಟದಲ್ಲಿ 'ಯುಐ' ಸಿನಿಮಾ ತೆರೆಗೆ ಬರುತ್ತಿದ್ದರೂ ಪ್ರಚಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇತ್ತೀಚೆಗೆ ಆಮೀರ್ ಖಾನ್ ಚಿತ್ರದ ವಾರ್ನರ್ ಟೀಸರ್ ನೋಡಿ ಮೆಚ್ಚಿದ್ದರು. ಅದು ಬಿಟ್ಟರೆ ನಟ, ನಿರ್ದೇಶಕ ಉಪೇಂದ್ರ ಇದೀಗ ಕನ್ನಡ ಮಾಧ್ಯಮಗಳ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಹೊರ ರಾಜ್ಯಗಳಲ್ಲಿ ಪ್ರಚಾರಕ್ಕೆ ಹೋಗುತ್ತಾರಾ? ಇಲ್ವಾ? ಎನ್ನುವ ಅನುಮಾನ ಮೂಡಿದೆ.

ಕೆ. ಪಿ ಶ್ರೀಕಾಂತ್, ಜಿ. ಮನೋಹರ್ 'ಯುಐ' ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಗುರು ಪ್ರಸಾದ್, ಮುರಳಿ ಶರ್ಮಾ, ನಿಧಿ ಸುಬ್ಬಯ್ಯ, ಓಂ ಪ್ರಕಾಶ್ ರಾವ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಹೆಚ್. ಸಿ ವೇಣು ಛಾಯಾಗ್ರಹಣ ಚಿತ್ರಕ್ಕಿದೆ. ಕೆವಿಎನ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ.
'ಯುಐ' ಚಿತ್ರದ ಟೀಸರ್, ಪೋಸ್ಟರ್‌ಗಳು ಹಿಟ್ ಆಗಿದೆ. ಆದರೆ ಚಿತ್ರದ ಟ್ರೈಲರ್ ಬರುತ್ತಾ? ಇಲ್ವಾ? ಎನ್ನುವ ಅನುಮಾನ ಮೂಡಿದೆ. ಇನ್ನು ಚಿತ್ರದ ಸೆನ್ಸಾರ್ ವೇಳೆ ಸಾಕಷ್ಟು ವಿಚಾರಗಳು ಬಹಿರಂಗವಾಗಿದೆ. ಚಿತ್ರದ ರನ್‌ಟೈಮ್ 2 ಗಂಟೆ 12 ನಿಮಿಷ ಎನ್ನುವುದು ಖಚಿತವಾಗಿದೆ. ಇನ್ನು ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಬದಲಾಯಿಸುವಂತೆ ಹೇಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಹುಡುಗಿಯರ ಲಿಪ್‌ಲಾಕ್ ಸನ್ನಿವೇಶ ಇಂಟೆನ್ಸಿಟಿ ಕಮ್ಮಿ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಇನ್ನು ಧೂಮಪಾನ ಆರೋಗ್ಯಕ್ಕೆ ಹಾನಿಕರ ಸೂಚನೆಯನ್ನು ಸನ್ನಿವೇಶವೊಂದರಲ್ಲಿ ಹಾಕಲು ಹೇಳಿದ್ದಾರೆ. ಇನ್ನುಳಿದಂತೆ ಸಣ್ಣ ಪುಟ್ಟ ಬದಲಾವಣೆಗೆ ಸೂಚಿಸಿ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಿದೆ. ಇನ್ನು 'ಯುಐ' ಚಿತ್ರದಲ್ಲಿ ಯಾವುದೇ ರಕ್ತಸಿಕ್ತ ಸನ್ನಿವೇಶಗಳು ಇಲ್ಲ ಎನ್ನುವುದು ಗೊತ್ತಾಗುತ್ತಿದೆ.
'ಯುಐ' ಚಿತ್ರಕ್ಕೆ ಸೆನ್ಸಾರ್ ಸಿಕ್ಕ ಬೆನ್ನಲ್ಲೇ ಸ್ಟೋರಿಲೈನ್ ಏನು? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಉಪೇಂದ್ರ ತಮ್ಮ ಸಿನಿಮಾಗಳ ಕಥೆ ವಿಚಾರದಲ್ಲಿ ಬಹಳ ಕೇರ್ ತೆಗೆದುಕೊಳ್ಳುತ್ತಾರೆ, ಮಾಮೂಲಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡಲ್ಲ. ಬಹಳ ವಿಭಿನ್ನ ಆಲೋಚನೆಯ ಕಥೆಯನ್ನು ತೆರೆಗೆ ತರುತ್ತಾರೆ. ಅದನ್ನು ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರ ಮುಂದಿಡುತ್ತಾರೆ. ಜೊತೆಗೆ ಒಂದು ಸಂದೇಶವೂ ಇರಲಿದೆ.
ಒಂದು ಕಾಲ್ಪನಿಕ ಪ್ರಪಂಚ. ಆ ನಗರದಲ್ಲಿ ಒಬ್ಬ ರಾಜ ಹಾಗೂ ಒಬ್ಬ ಅಸಾಮಾನ್ಯ ವ್ಯಕ್ತಿಯ ನಡುವಿನ ಮಾನಸಿಕ ಸಂಘರ್ಷದ ಕಥೆ. ಆ ವ್ಯಕ್ತಿ ತನ್ನ ಕುತಂತ್ರ ಹಾಗೂ ಚಾಕಚಕ್ಯತೆಯಿಂದೆ ಹೇಗೆ ಆ ಇಡೀ ಪಟ್ಟಣದ ಮೇಲೆ ಹಿಡಿತ ಸಾಧಿಸುತ್ತಾನೆ. ಬಳಿಕ ಡಿಕ್ಟೇಟರ್ ರೀತಿ ಹೇಗೆ ಅಧಿಕಾರ ಚಲಾಯಿಸುತ್ತಾನೆ ಎನ್ನುವುದು 'ಯುಐ' ಚಿತ್ರದ ಒನ್‌ಲೈನ್ ಸ್ಟೋರಿ ಎನ್ನಲಾಗ್ತಿದೆ.
ಇತ್ತೀಚೆಗೆ ಬಂದ 'ಯುಐ' ವಾರ್ನರ್ ಟೀಸರ್ ಚಿತ್ರದ ಸ್ಟೋರಿಲೈನ್‌ಗೆ ಹತ್ತಿರ ಎನ್ನುವಂತಿದೆ. ಹಾಗಾಗಿ ಇದೇ ಚಿತ್ರದ ಕಥೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಬಹಳ ವರ್ಷಗಳ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
ಬಹಳ ಹಿಂದೆಯೇ ಬರಬೇಕಿದ್ದ 'ಯುಐ' ಸಿನಿಮಾ ಕೊಂಚ ತಡವಾಗಿದೆ. ಅದಕ್ಕೆ ಕಾರಣ ಹೆಚ್ಚಿನ ಗ್ರಾಫಿಕ್ಸ್. ಇನ್ನು ವಿದೇಶದಲ್ಲಿ ರೀ-ರೆಕಾರ್ಡಿಂಗ್ ಮಾಡಲಾಗಿದೆ. ಚಿತ್ರದ ಮೇಲೆ ಉಪ್ಪಿ ಬಹಳ ಭರವಸೆಯಿಂದ ಇದ್ದಾರೆ. ಇನ್ನು 'ಯುಐ' ಬಿಡುಗಡೆಯಾದ 5 ದಿನಕ್ಕೆ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಕೂಡ ತೆರೆಗೆ ಬರ್ತಿದೆ. ಹಾಗಾಗಿ ಸಹಜವಾಗಿಯೇ ಬಾಕ್ಸಾಫೀಸ್ ಕ್ಲ್ಯಾಶ್ ಭೀತಿ ಶುರುವಾಗಿದೆ.


Click it and Unblock the Notifications











