ದರ್ಶನ್-ಸುದೀಪ್ ಅಭಿಮಾನಿಗಳ ಕಿತ್ತಾಟ: 'ಪೈರಸಿ' ಹಿಂದಿರುವ ಅಸಲಿ ಕತೆ!
Recommended Video
ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ನಡುವೆ ಸಂಬಂಧ ಒಂದು ಹಂತಕ್ಕೆ ಹಳಿಸಿದೆ. ಈಗಿನ ಬೆಳವಣಿಗೆಗಳನ್ನ ಗಮಿಸುತ್ತಿದ್ದರೆ ಇಬ್ಬರ ನಡುವಿನ ಸಂಹವನ ಪೂರ್ತಿ ಮುರಿದು ಬಿದ್ದಿದೆ ಎಂದೇ ಹೇಳಬಹುದು. ಹಾಗಾಗಿಯೇ ಅಭಿಮಾನಿಗಳು ಕೂಡ ಅವರನ್ನೇ ಫಾಲೋ ಮಾಡ್ತಿದ್ದಾರೆ. ಸದ್ಯ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಹಾವು ಮುಂಗುಸಿ ರೀತಿ ಕಿತ್ತಾಡುತ್ತಿದ್ದಾರೆ. ಅದಕ್ಕೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ.
ಮೊದಲೇ ಹಳಸಿದ್ದ ಸಂಬಂಧದಲ್ಲಿ ಬಿರುಕು ಇನ್ನೊಂದು ಹಂತಕ್ಕೆ ಹೋಗಲು ಕಾರಣವಾಗಿರುವುದು ಪೈಲ್ವಾನ್ ಸಿನಿಮಾ. ಸುದೀಪ್ ಅಭಿನಯದ ಬಹುಭಾಷಾ ಸಿನಿಮಾ ಪೈಲ್ವಾನ್ ಬಗ್ಗೆ ಡಿ-ಬಾಸ್ ಭಕ್ತರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೈಲ್ವಾನ್ ಸಿನಿಮಾ ಅದ್ಭುತವಾಗಿದೆ, ಆದರೆ ದರ್ಶನ್ ಫ್ಯಾನ್ಸ್ ಉದ್ದೇಶಪೂರ್ವಕವಾಗಿ ಚಿತ್ರದ ಕುರಿತು ನೆಗಿಟಿವ್ ಪ್ರಚಾರ ಮಾಡ್ತಿದ್ದಾರೆ. ಪೈರಸಿ ಕಾಪಿ ಮಾಡಿ ವೈರಲ್ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕಿಚ್ಚನ ಫ್ಯಾನ್ಸ್ ಗಳದ್ದು.
ಇದರಿಂದ ಸಹಜವಾಗಿ ಕೋಪಗೊಂಡ ದಾಸನ ಭಕ್ತಗಣ ಅಭಿನಯ ಚಕ್ರವರ್ತಿ ಬಳಗದ ವಿರುದ್ಧ ಸಮರಕ್ಕೆ ನಿಂತಿದ್ದಾರೆ. ಆದರೆ, ವಾಸ್ತವನೇ ಬೇರೆ ಇದೆ. ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ನಿಜವಾಗಲೂ ಪ್ರತಿಭಟಿಸಬೇಕಿರುವ ವಿಚಾರವೇ ಬೇರೆ ಇದೆ. ಅಭಿಮಾನಿಗಳ ಆರಾಧನೆಯನ್ನು ಕೊಂಚ ಪಕ್ಕಕ್ಕಿಟ್ಟು ಕನ್ನಡದ ಸಿನಿಮಾ ಲೋಕದ ದಿಗ್ಗಜರು ಆಲೋಚನೆ ಮಾಡಬೇಕಾದ ಸಂಗತಿ ಬೇರೆಯದೇ ಇದೆ.

ಪೈರಸಿ ಮಾಡಿದ್ದು ಆ 'ಕಿರಾತಕರು'
ಪೈಲ್ವಾನ್ ಚಿತ್ರವನ್ನ ಪೈರಸಿ ಮಾಡಿರೋದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಚಿತ್ರಜಗತ್ತಿಗೆ ಮಾರಕವಾಗಿರುವ ಆ ಅಗೋಚರ ವೆಬ್ ಸೈಟ್ ಪೈಲ್ವಾನ್ ಚಿತ್ರವನ್ನೂ ನಕಲು ಮಾಡಿದೆ. ದುರಂತ ಅಂದ್ರೆ ಆ ಪೈರಸಿ ಕಾಪಿಯನ್ನ ಕನ್ನಡ ಸಿನಿ ಪ್ರೇಕ್ಷಕರೇ ವೈರಲ್ ಮಾಡುತ್ತಿದ್ದಾರೆ. ಇದರಲ್ಲಿ ಅವರ ಅಭಿಮಾನಿಗಳು, ಇವರ ಅಭಿಮಾನಿಗಳು ಎನ್ನುವ ಪ್ರತ್ಯೇಕತೆ ಇಲ್ಲ. ಕೇವಲ ಒಬ್ಬ ನಟನ ಅಭಿಮಾನಿಗಳ ಮೇಲೆ ಆರೋಪ ಮಾಡುತ್ತಿರುವುದರಿಂದ ಈ ಜಗಳಕ್ಕೆ ಯಾವುದೇ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ನಟಸಾರ್ವಭೌಮ, ಯಜಮಾನ, ಕುರುಕ್ಷೇತ್ರವೂ ಆಗಿತ್ತು
ಹಾಗ್ನೋಡಿದ್ರೆ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ, ದರ್ಶನ್ ಅಭಿನಯದ ಯಜಮಾನ, ಹಾಗೂ ಕುರುಕ್ಷೇತ್ರ ಚಿತ್ರಗಳು ಕೂಡ ಪೈರಸಿಗೆ ಒಳಗಾಗಿದ್ದವು. ಆಗಲೂ ಅದೇ ವೆಬ್ ಸೈಟ್ ನಕಲು ಮಾಡಿತ್ತು. ಆಗ ಯಾರೂ ಕೂಡ ಈ ವಿಷಯವನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರ ಅಭಿಮಾನಿಗಳು ಮಾಡಿದ್ರು, ಇವರ ಅಭಿಮಾನಿಗಳು ಮಾಡಿದ್ರು ಎಂದು ದೂಷಿಸಿಲ್ಲ. ಸೈಬರ್ ಕ್ರೈಂನಲ್ಲಿ ದೂರು ನೀಡಿ ಸುಮ್ಮನಾದರು. ಈಗ ಆ ಕಿರಾತಕರ ಕೆಟ್ಟ ದೃಷ್ಠಿಗೆ ಪೈಲ್ವಾನ್ ಬಲಿಯಾಗಿದೆ.

ನಾಳೆ ಇನ್ನೊಂದು ಚಿತ್ರ ಪೈರಸಿ ಆಗಬಹುದು
ಇಂದು ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಪೈರಸಿ ವಿಚಾರದಲ್ಲಿ ಕಿತ್ತಾಡುತ್ತಿರುವುದು ಸಮಂಜಸವಲ್ಲ. ನಾಳೆ ಇನ್ನೊಂದು ಚಿತ್ರವೂ ಪೈರಸಿ ಆಗಬಹುದು. ಆಗಲೂ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಂತೆ, ಆ ಸ್ಟಾರ್ ನಟನ ಅಭಿಮಾನಿಗಳು ಇನ್ನೊಬ್ಬ ನಟನ ಅಭಿಮಾನಿಗಳ ಮೇಲೆ ಆರೋಪ ಮಾಡಿದ್ರೆ ಏನು ಬಂತು? ಅದಕ್ಕೆ ಯಾರು ಹೊಣೆ?

ಮಾಡಬೇಕಿರುವ ಕೆಲಸ ಬೇರೆಯೇ ಇದೆ
ಇಡೀ ಭಾರತೀಯ ಚಿತ್ರರಂಗಕ್ಕೆ ಮಾರಕವಾಗಿರುವ ಆ ಪೈರಸಿ ವೆಬ್ ಸೈಟ್ ಶಾಶ್ವತವಾಗಿ ಬಂದ್ ಮಾಡಿಸಬೇಕು. ಆ ದೃಷ್ಟಿಯಲ್ಲಿ ಏನು ಮಾಡಬೇಕು ಎಂಬುದನ್ನ ಅಭಿಮಾನಿಗಳು ಮಾತ್ರ ಅಲ್ಲ ಸ್ಟಾರ್‌ಗಳೂ ಕೂಡ ಚಿಂತಿಸಬೇಕಾಗಿದೆ. ಪೈರಸಿ ಆದ ಕೂಡಲೇ ಅದನ್ನ ವೈರಲ್ ಮಾಡುವುದನ್ನ ಬಿಟ್ಟು ಅದನ್ನ ನಿಯಂತ್ರಿಸಲು ಸಂಬಂಧಪಟ್ಟ ಚಿತ್ರತಂಡ, ಇಲಾಖೆಗೆ ಮಾಹಿತಿ ನೀಡಿ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಇದು ಇಬ್ಬರು ಅಭಿಮಾನಿಗಳು ಮಾತ್ರವಲ್ಲ, ಎಲ್ಲ ಸಿನಿಮಾ ಪ್ರೇಕ್ಷಕರು ಕೂಡ ಮಾಡಬೇಕಾದ ಕೆಲಸ.

ದರ್ಶನ್-ಸುದೀಪ್ ಫ್ಯಾನ್ಸ್ ವಾರ್ ತೀರಾ ವೈಯಕ್ತಿಕ
ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದಾರೆ ಎಂಬುದು ಕೇವಲ ನೆಪ ಮಾತ್ರ. ಇಬ್ಬರು ನಟರು ಸ್ನೇಹ ಮುರಿದುಕೊಂಡು ದೂರಾಗಿದ್ದಾರೆ. ಅವರಿಬ್ಬರು ಒಂದಾಗಬೇಕು ಎಂದು ಒಂದು ವರ್ಗದ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಆದರೆ, ಇನ್ನೊಂದು ವರ್ಗ ಈ ವಿಷಯವನ್ನ ಮುಂದಿಟ್ಟುಕೊಂಡು ಪರಸ್ಪರ ತೀರಾ ವೈಯಕ್ತಿಕವಾಗಿ ನಿಂದನೆ, ಅವಾಚ್ಯ ಪದಗಳಿಂದ ಬೈಯುವುದು, ಟೀಕಿಸುವುದು, ಅಪಪ್ರಚಾರ ಮಾಡಿಕೊಂಡು ಅವರಿಬ್ಬರ ಸ್ನೇಹವನ್ನ ಶಾಶ್ವತವಾಗಿ ದೂರ ಮಾಡುವ ಹಾದಿಯಲ್ಲಿದ್ದಾರೆ. ಇದು ಸ್ಯಾಂಡಲ್ ವುಡ್ ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ.

ಇಬ್ಬರು ನಟರು ಸ್ಪಷ್ಟ ಸಂದೇಶ ನೀಡಬೇಕಿದೆ
ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಅಭಿಮಾನಿಗಳ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಕಿತ್ತಾಡುತ್ತಿರುವುದನ್ನ ನಟರಿಬ್ಬರು ಖಂಡಿಸಬೇಕಿದೆ. ತಮ್ಮ ತಮ್ಮ ಅಭಿಮಾನಿ ಬಳಗಕ್ಕೆ ಸ್ಪಷ್ಟ ಸಂದೇಶ ನೀಡಬೇಕಿದೆ. ಆಗ ಮಾತ್ರ ಫ್ಯಾನ್ಸ್ ಸುಮ್ಮನಾಗ್ತಾರೆ. ಇದರ ಬಗ್ಗೆ ಗೊತ್ತಿದ್ದು ನಟರೇ ಸುಮ್ಮನಿದ್ದರೇ ಏನೂ ಮಾಡಲು ಸಾಧ್ಯವಿಲ್ಲ.


Click it and Unblock the Notifications











