ಬೆಂಗಳೂರಿನಲ್ಲಿ 'ಟಾಕ್ಸಿಕ್' ಚಿತ್ರೀಕರಣ ಆರಂಭಿಸುತ್ತಿರುವುದು ಯಾಕೆ? ಚಿತ್ರತಂಡ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣಕ್ಕೆ ಭರದ ಸಿದ್ಧತೆ ನಡೀತಿದೆ. ಹೆಚ್‌ಎಂಟಿ ಫ್ಯಾಕ್ಟರಿ ಕಾಂಪೌಟ್ ಒಳಗೆ 2 ಎಕರೆ ಪ್ರದೇಶದಲ್ಲಿ ಭಾರೀ ಸೆಟ್ ನಿರ್ಮಾಣವಾಗುತ್ತಿದೆ. ನೂರಾರು ಕಾರ್ಮಿಕರು ಸೆಟ್ ನಿರ್ಮಾಣ ಕೆಲಸದಲ್ಲಿ ತೊಡಗಿಸಿದ್ದಾರೆ. ಏಪ್ರಿಲ್ 15 ಬಳಿಕ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
'KGF' ಸರಣಿ ಸೂಪರ್ ಸಕ್ಸಸ್ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು. ಹಾಗಿ ನಿರೀಕ್ಷೆ ಎವರೆಸ್ಟ್ ಎತ್ತರಕ್ಕಿದೆ. ಜೊತೆಗೆ ರಾಕಿಂಗ್ ಸ್ಟಾರ್ ಮೇಲೆ ಒತ್ತಡ ಕೂಡ ಇದೆ. ಅದನ್ನೆಲ್ಲಾ ಮೀರಿ ಸಿನಿಮಾ ನಿರ್ಮಿಸುವ ಪ್ರಯತ್ನ ನಡೀತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗುತ್ತಿದೆ. ನಟ ಯಶ್ ಕೂಡ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

70ರ ದಶಕದ ಕಥೆಯನ್ನು 'ಟಾಕ್ಸಿಕ್' ಚಿತ್ರದಲ್ಲಿ ಹೇಳ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಗೋವಾ, ಶ್ರೀಲಂಕಾದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ನಗರದಲ್ಲೇ ಅದ್ಧೂರಿ ಸೆಟ್ ನಿರ್ಮಿಸಿ ಮೊದಲು ನಮ್ಮ ಊರಲ್ಲೇ ಸಿನಿಮಾ ಚಿತ್ರೀಕರಣಕ್ಕೆ ಚಿತ್ರತಂಡ ಮುಂದಾಗಿದೆ.
'ಟಾಕ್ಸಿಕ್' ಸಿನಿಮಾ ಸೆಟ್, ಶೂಟಿಂಗ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಗೋವಾದಲ್ಲಿ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಸೆಟ್ ನಿರ್ಮಾಣ ಕೆಲಸಗಳು ನಡೀತಿದೆ. ದೊಡ್ಡ ಕಟ್ಟಡಗಳು, ಎತ್ತರದ ಟವರ್‌ಗಳು, ಜೋಕರ್ ಆಡಿಟೋರಿಯಂ ಮಾದರಿಯಲ್ಲಿ ಸೆಟ್ ನಿರ್ಮಾಣವಾಗುತ್ತಿದೆ. 50 ವರ್ಷಗಳ ಹಿಂದಿನ ಯಾವುದೋ ನಗರವನ್ನೇ ನೆನಪಿಸುವಂತೆ ಸೆಟ್ ಹಾಕಲಾಗುತ್ತಿದೆ.
ಸದ್ಯ 'ಟಾಕ್ಸಿಕ್' ಸೆಟ್ ಬಗ್ಗೆ ಚಿತ್ರತಂಡ ಆಂಗ್ಲ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. "ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ, ನಮ್ಮ ಎಲ್ಲಾ ದೊಡ್ಡ ಚಿತ್ರಗಳು ರಾಜ್ಯದ ಹೊರಗೆ ಚಿತ್ರೀಕರಣಗೊಳ್ಳುತ್ತವೆ, ಯಶ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ನಾವು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಕರ್ನಾಟಕದಲ್ಲೇ ಚಿತ್ರೀಕರಣ ಆರಂಭಿಸಲು ಮುಂದಾಗಿದ್ದೇವೆ. ನಾವು ಈಗಾಗಲೇ ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದೇವೆ, ಇಲ್ಲಿನ ಜನರು, ತಂತ್ರಜ್ಞರು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸಿದ್ದೇವೆ. ನಾವು ಜಾಗತಿಕ ಸಾಮರ್ಥ್ಯದ ಸಿನಿಮಾ ನಿರ್ಮಿಸಲು ಶ್ರಮಿಸುತ್ತಿದ್ದೇವೆ" ಎಂದಿದ್ದಾರೆ.

"ನಿರ್ಮಾಪಕರಾಗಿ ನಮಗೆ ಭಾರತದ ಬೇರೆ ಬೇರೆ ಲೊಕೇಶನ್‌ಗಳಲ್ಲಿ ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ನಡೆಸುವ ಆಯ್ಕೆ ಇತ್ತು. ಈ ಚಿತ್ರಕ್ಕಾಗಿ ಬೇರೆ ಬೇರೆ ಇಂಡಸ್ಟ್ರಿ ಕಲಾವಿದರು, ತಂತ್ರಜ್ಞರು ಜೊತೆಗೆ ಅಂತರರಾಷ್ಟ್ರೀಯ ಪ್ರತಿಭೆಗಳೂ ಕೆಲಸ ಮಾಡುತ್ತಿದ್ದಾರೆ. ಬೇರೆ ಕಡೆ ಚಿತ್ರೀಕರಣ ಮಾಡುವುದು ಆರ್ಥಿಕವಾಗಿ ಉತ್ತಮ ಎನಿಸುತ್ತಿತ್ತು. ಆದಾಗ್ಯೂ, ಯಶ್ ಮತ್ತು ಕೆವಿಎನ್ ಈ ನಿರ್ಧಾರಕ್ಕೆ ಬಂದರು. ನಾವು ಬೇರೆ ಕಡೆ ಚಿತ್ರೀಕರಣ ನಡೆಸುವ ಮುನ್ನ ನಮ್ಮ ರಾಜ್ಯ, ನಮ್ಮ ಜನರ ಸಾಮರ್ಥ್ಯ ಪ್ರದರ್ಶಿಸಲು ತೀರ್ಮಾನಿಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
'ಟಾಕ್ಸಿಕ್' ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆಯೂ ಭಾರೀ ಕುತೂಹಲವಿದೆ. ಯಶ್ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್ ನಟಿಸುವ ಸಾಧ್ಯತೆಯಿದೆ. ಇನ್ನು ಶ್ರುತಿ ಹಾಸನ್ ಹಾಗೂ ಸಾಯಿ ಪಲ್ಲವಿ ಕೂಡ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಚಿತ್ರದಲ್ಲಿ ಯಶ್ ಲುಕ್, ಪಾತ್ರ ಎಲ್ಲವೂ ಭಾರೀ ನಿರೀಕ್ಷೆ ಮೂಡಿಸಿದೆ.


Click it and Unblock the Notifications











