ಗಣೇಶ ವಿಸರ್ಜನೆಯಲ್ಲಿ ಕಾಂತಾರ ಹಾಡಿಗೆ ಫಿಲ್ಮಿ ಎಫೆಕ್ಟ್ ನೀಡಲು ಯತ್ನಿಸಿ ಅಗ್ನಿ ಅವಘಡ, ಐವರು ಗಾಯಾಳು
ದೇಶದೆಲ್ಲೆಡೆ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದ್ದು, ಗಣೇಶ ವಿಸರ್ಜನೆ ಕೂಡ ಅದ್ಧೂರಿಯಾಗಿ ನಡೆಯುತ್ತಿದೆ. ಗಣೇಶೋತ್ಸವ ಎಂದರೆ ಅಲ್ಲಿ ಸಂಗೀತದ ರಸದೌತಣವಿರುತ್ತದೆ. ಹಾಗೆಯೇ ಹೊಸ ಹೊಸ ಸಿನಿಮಾ ಗೀತೆಗಳನ್ನು ಕೂಡ ಹಾಕಲಾಗುತ್ತದೆ. ಅದರಲ್ಲೂ ಸಿನಿಮಾದಲ್ಲಿನ ದೇವರ ಹಾಡುಗಳು ಖಾಯಂ ಸ್ಥಾನ ಪಡೆದಿರುತ್ತವೆ.
ಹಾಗೆ ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರದ ವರಾಹ ರೂಪಂ ಹಾಡಿಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆದ ಸಿನಿಮಾದ ಹಾಡು ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲಾ ಗಲ್ಲಿಗಳಲ್ಲೂ ಕೇಳಿ ಬಂದಿದೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಲ್ಲೂ ಸದ್ದು ಮಾಡಿದೆ. ಆದರೆ, ಆಂಧ್ರ ಪ್ರದೇಶದಕ ಡಪ ಜಿಲ್ಲೆಯಲ್ಲಿ ದೊಡ್ಡ ದುರಂತಕ್ಕೆ ಸಾಕ್ಷಿಯಾಗಿದೆ.

ಕಾಂತಾರದ ವರಾಹ ರೂಪಂ ಹಾಡಿಗೆ ಗಣೇಶ ವಿಸರ್ಜನೆಯಲ್ಲಿ ನೃತ್ಯ
ರಿಷಬ್ ಶೆಟ್ಟಿ ಅಭಿನಯದ ಸಿನಿಮಾದ ವರಾಹ ರೂಪಂ ಹಾಡಿಗೆ ಗಣೇಶ ವಿಸರ್ಜನೆಯಲ್ಲಿ ಫಿಲ್ಮಿ ಎಫೆಕ್ಟ್ ಸೃಷ್ಟಿಸಲು ಕೆಲವು ಯುವಕರು ಮತ್ತು ನೃತ್ಯಪಟುಗಳು ಪ್ರಯತ್ನ ಮಾಡಿದ್ದು, ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಆಂಧ್ರ ಪ್ರದೇಶದ ಕಡಪಾ ವೈಎಸ್‌ಆರ್ ಜಿಲ್ಲೆಯ ಎರ್ರಗುಂಟ್ಲ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ಕಾಂತಾರ ಸಿನಿಮಾದ ಸೂಪರ್ ಹಿಟ್ ಸೀನ್ ಆದ ದೇವ ನರ್ತಕನ ಸುತ್ತಲೂ ಬೆಂಕಿ ಹಚ್ಚುವ ದೃಶ್ಯವನ್ನು ಮರು ಸೃಷ್ಟಿ ಮಾಡಲಾಗುತ್ತಿತ್ತು. ನರ್ತಕರು ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಂತೆ, ಫಿಲ್ಮಿ ಎಫೆಕ್ಟ್ ನೀಡಲು ಅವರ ಸುತ್ತಲೂ ಬೆಂಕಿ ಹಚ್ಚಲಾಯಿತು. ಆದರೆ, ಬೆಂಕಿಯ ಕೆನ್ನಾಲಿಗೆ ಹೆಚ್ಚು ಎತ್ತರಕ್ಕೆ ಏರಿದೆ. ಇದರಿಂದ ಕಲಾವಿದರು ತೊಂದರೆ ಎದುರಿಸಿದ್ದಾರೆ. ಅವರಿಂದ ನೃತ್ಯ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಮೈಯೆಲ್ಲಾ ಸುಟ್ಟು ಹೋಗಿದೆ.

ಪೊಲೀಸರ ವಿರುದ್ಧ ಪೋಷಕರ ಆಕ್ರೋಶ
ಇದೇ ವೇಳೆ ಗಣೇಶನ ಮೆರವಣಿಗೆ ನೋಡಲು ಬಂದ ಮಕ್ಕಳು ಕೂಡ ಬೆಂಕಿಯ ಕೆನ್ನಾಲಿಗೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರಿಂದ ಸಂತ್ರಸ್ಥರ ಕುಟುಂಬಸ್ಥರು ತೀವ್ರ ಬೇಸರ ಹೊರಹಾಕಿದ್ದಾರೆ.
ಗಾಯಾಳುಗಳನ್ನು ಪ್ರದತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸ್ ಭದ್ರತೆ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರ ಮಧ್ಯೆ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ವಿನಾಯಕ ಸಮಿತಿಯ ಸದಸ್ಯರು ಅಡ್ಡಾಡುತ್ತಿದ್ದರೂ ಪೊಲೀಸರು ತಡೆಯಲಿಲ್ಲ ಎಂದು ಮಕ್ಕಳ ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











