ಕೋರ್ಟ್ ನಲ್ಲಿ ಒಡೆದ ಕನ್ನಡಿ ಜೋಡಿಸಲು ಸಾಧ್ಯವೇ?
ಮಂಜುಳಾ ಅವರ ಪ್ರಕರಣ ಬೇರೆ, ಶ್ರುತಿ ಅವರ ಪ್ರಕರಣ ಬೇರೆ. ಎರಡನೂ ದಯವಿಟ್ಟು ಬೇರೆ ಬೇರೆಯಾಗಿ ನೋಡಿ. ಮಂಜುಳಾ ಮತ್ತು ನನ್ನ ಸಂಬಂಧ ಎಂಟು ವರ್ಷಗಳ ಹಿಂದೆ ಮುರಿದುಬಿದ್ದಿತ್ತು. ಹತ್ತಿರ ಹತ್ತಿರ ಹತ್ತು ವರ್ಷಗಳ ಕಾಲ ನಾವಿಬ್ಬರೂ ಬೇರೆ ಬೇರೆಯಾಗಿ ಬದುಕಿದ್ದೇವೆ. ಒಬ್ಬೊಬ್ಬರಿಗೆ ಸಂಬಂಧ ಇಲ್ಲದಂತೆ ಬದುಕಿದ್ದೇವೆ.
ಇದೆಲ್ಲವನ್ನೂ ಸುಳ್ಳು ಮಾಡಲಿಕ್ಕೆ ಆಗುವುದಿಲ್ಲ ನ್ಯಾಯಾಲಯದಲ್ಲಿ. ಸಮಾಜಕ್ಕೂ ಸುಳ್ಳು ಹೇಳಲಿಕ್ಕಾಗದು. ನನ್ನ ಸ್ನೇಹಿತರಿಗೆ, ಕುಟುಂಬದವರಿಗೆ, ನನ್ನ ಪರಿಚಯಸ್ಥರಿಗೆ ನನ್ನ ಜೊತೆ ಬದುಕಿದವರಿಗೆ ಸಮಾಜಕ್ಕೂ ಗೊತ್ತಿದೆ. ನಾನೊಬ್ಬ ಪತ್ರಕರ್ತನಾಗಿ ಎಷ್ಟು ವರ್ಷಗಳ ಕಾಲ ಒಂಟಿಯಾಗಿದ್ದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಇದ್ಯಾವುದನ್ನೂ ನಾನು ಮುಚ್ಚಿಟ್ಟುಕೊಂಡಿಲ್ಲ.

ಮುಚ್ಚಿಟ್ಟುಕೊಳ್ಳುವಂತಹ ಪ್ರಮೇಯ ನನಗೆ ಬಂದೂ ಇಲ್ಲ. ಎಲ್ಲವನ್ನೂ ನೇರವಾಗಿ ಸಮಾಜಕ್ಕೆ ಹೇಳುತ್ತಾ ಬಂದಿದ್ದೇನೆ. ನಾವಿರುವುದು ಹೀಗೆ ಎಂದು ಹೇಳಿದ್ದೇನೆ. ಪ್ರತಿ ಸಲವೂ ನಾನು ಯಾ ಹೊತ್ತು ಪಲಾಯನ ವಾದ ಮಾಡಿಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳಿದ್ದೇನೆ. ತಪ್ಪಾಗಿದ್ದರೆ ಹೌದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೇನೆ.
ನನ್ನ ಕಡೆ ಸತ್ಯ ಇದೆ ಎಂದರೆ ಹೋರಾಟ ಮಾಡುತ್ತೇನೆ. ಮದುವೆ ಎನ್ನುವುದು ಮನಸ್ಸಿನ ವಿಚಾರ, ಒಂದು ಬಾಂಧವ್ಯದ ವಿಚಾರ. ಮಂಜುಳಾ ಮತ್ತು ನನ್ನ ಬಾಂಧವ್ಯ ಮುರಿದು ಬಿದ್ದು ಹತ್ತು ವರ್ಷಗಳ ಮೇಲಾಯಿತು. ಅದನ್ನು ಅವರು ಬೇರೆ ರೀತಿಯಲ್ಲಿ ಕೇಳುತ್ತಿದ್ದಾರೆ. ಅದು ಅವರಿಗೂ ಸಾಧ್ಯವಿಲ್ಲ, ನನಗೂ ಸಾಧ್ಯವಿಲ್ಲ. ಅವರ ಹಠ ಗೆಲ್ಲುತ್ತದೋ ನನ್ನ ಸತ್ಯ ಗೆಲ್ಲುತ್ತದೋ ನೋಡೋಣ.
ಶ್ರುತಿ ಅವರು ನನಗೆ ಕಳೆದ ಆರೇಳು ವರ್ಷಗಳಿಂದ ಪರಿಚಯ, ಸ್ನೇಹ ಎಲ್ಲಾ ತರಹದಲ್ಲೂ ನನ್ನ ಬದುಕು ಹೇಗಿತ್ತು ಎಂಬುದನ್ನು ಅವರು ನೋಡಿದ್ದಾರೆ. ನಾನು ಮಾಡಿದ ಒಂದೇ ಒಂದು ತಪ್ಪು ಏನೆಂದರೆ ಮಂಜುಳಾ ಜೊತೆಗಿನ ಸಂಬಂಧವನ್ನು ಕೋರ್ಟ್ ಗೆ ಹೋಗಿ ಮುಗಿಸಿಕೊಳ್ಳಬೇಕಾಗಿತ್ತು. ಅದನ್ನು ನಾನು ಮಾಡಲಿಲ್ಲ. ನಾನು ನಂಬಿದೆ. ಕೊಟ್ಟ ಮಾತಿಗೆ ಇವರು ಕಟಿಬದ್ಧರಾಗಿ ನಿಲ್ಲುತ್ತಾರೆ ಎಂದು ಭಾವಿಸಿದೆ.
ಇನ್ನೇನು ಪಿತೂರಿಗಳನ್ನು ಮಾಡಲ್ಲ ಎಂದು ನಂಬಿದ್ದೆ. ಅದು ಇಂದು ಸುಳ್ಳಗಾಗಿದೆ. ಅವರು ಒಂದಲ್ಲ ಮೂರು ಪ್ರಕರಣಗಳನ್ನು ಕೋರ್ಟ್ ನಲ್ಲಿ ದಾಖಲಿಸಿದ್ದಾರೆ. ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಬಹುದು ನನ್ನದೇನು ಅಭ್ಯಂತರವಿಲ್ಲ. ನನ್ನದು ತಪ್ಪಾಗಿದ್ದರೆ ನ್ಯಾಯಾಲಯ ಶಿಕ್ಷೆ ಕೊಡಲಿ ಅದನ್ನು ಶಿರಸಾವಹಿಸಿ ಪಾಲಿಸುತ್ತೇನೆ.


Click it and Unblock the Notifications











