SSE Side-B: ಒಂದು ತಿಂಗಳು ತಡವಾಗಿ 'ಸಪ್ತ ಸಾಗರದಾಚೆ ಎಲ್ಲೋ'-2 ರಿಲೀಸ್
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಸಕ್ಸಸ್ ಕಂಡಿದ್ದು ಗೊತ್ತೇಯಿದೆ. ಪ್ರೇಕ್ಷಕರು ಈ ಸಿನಿಮಾ ಸೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾ ಓಟಿಟಿಗೂ ಬಂದಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಸೀಕ್ವೆಲ್ ಥಿಯೇಟರ್‌ನಲ್ಲಿ ನೋಡಲು ಕಾಯುವಂತಾಗಿದೆ.
ಪದೇ ಪದೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ರಿಲೀಸ್ ತಡವಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಒಂದು ವಾರ ತಡವಾಗಿ ಸಿನಿಮಾ ತೆರೆಗೆ ತರಲು ರಕ್ಷಿತ್ ಶೆಟ್ಟಿ ಮನಸ್ಸು ಮಾಡಿದರು. ಜನ ಓಟಿಟಿಯಲ್ಲಿ ಸಿನಿಮಾ ನೋಡಲಿ, ದಸರಾ ಬಾಕ್ಸಾಫೀಸ್ ಕ್ಲ್ಯಾಶ್ ಬೇಡ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದರು. ಇದೀಗ ಆ ದಿನಾಂಕ ಕೂಡ ಬದಲಾಗುತ್ತಿದೆ. ಅಕ್ಟೋಬರ್ 27ಕ್ಕೆ ಮನು ಮುಂದುವರೆದ ಲವ್ ಸ್ಟೋರಿ ನೋಡೊಕೆ ಸಿಗುತ್ತಿಲ್ಲ.

ಇದೀಗ ಮತ್ತೆ ಚಿತ್ರತಂಡ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅಕ್ಟೋಬರ್ 27 ಅಲ್ಲ, ನವೆಂಬರ್ 3, 10 ಕೂಡ ಅಲ್ಲ. ನವೆಂಬರ್ 17ಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಸಿನಿಮಾ ತೆರೆಗೆ ತರೋದಾಗಿ ಪರಂವಃ ಸಂಸ್ಥೆ ಘೋಷಿಸಿದೆ. ಅಂದರೆ ಇನ್ನು ಒಂದು ತಿಂಗಳ ಬಳಿಕ ಸಿನಿಮಾ ತೆರೆಗೆ ಬರಲಿದೆ. "7 ವಾರಗಳ ಬಳಿಕ ನಾವು ನಿಮ್ಮ ನೋಡುತ್ತೇವೆ ಎಂದು ಭಾವಿಸಿದ್ದೇವೆ. ಥಿಯೇಟರ್‌ಗಳಲ್ಲಿ ನಿಮ್ಮನ್ನು ಭೇಟಿ ಆಗುತ್ತೇವೆ" ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲೂ ಭಾಗಿಯಾಗಿ ರಕ್ಷಿತ್, ರುಕ್ಮಿಣಿ ಹಾಗೂ ಚೈತ್ರಾ ಸಿನಿಮಾ ಪ್ರಚಾರ ಮಾಡಿದ್ದಾರೆ.
ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- A ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಅದಕ್ಕೂ ಮುನ್ನ ಸಿನಿಮಾ ಪ್ರೀಮಿಯರ್ ಶೋಗಳು ನಡೆದು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕೆಮೆಸ್ಟ್ರಿ ನೋಡಿ ಸಿನಿರಸಿರಕರು ಫಿದಾ ಆಗಿದ್ದರು. ಮನು- ಪ್ರಿಯಾ ಪ್ರೇಮಕತೆ ಎಲ್ಲರ ಮನಗೆದ್ದಿತ್ತು. ಸ್ಲೋ ನರೇಷನ್ ಇದ್ದರೂ ಸಿನಿಮಾ ನಿಧಾನವಾಗಿಯೇ ಪ್ರೇಕ್ಷಕರ ಮನಸ್ಸನ್ನು ಆವರಿಸಿಕೊಂಡಿತ್ತು. ಸ್ಲೋ ಪಾಯ್ಸನ್ ರೀತಿ ಪ್ರೇಕ್ಷಕರಿಗೆ ಏರುತ್ತಾ ಹೋಗಿತ್ತು.
ರುಕ್ಮಿಣಿ ವಸಂತ್ ಅಭಿನಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಅಂದಾಜು 20 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಬಳಿಕ ತೆಲುಗಿಗೂ ಡಬ್ ಆಗಿ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ಡಬ್ ಮಾಡಲಾಗಿತ್ತು. ಆದರೆ ಕನ್ನಡ, ತೆಲುಗಿನಲ್ಲಿ ಮಾತ್ರ ಸಿನಿಮಾ ಥಿಯೇಟರ್‌ಗೆ ಬಂದಿತ್ತು. ಆದರೆ 5 ಆ ಭಾಷೆಗಳಲ್ಲಿ ಓಟಿಟಿಗೆ ಬಂದಿದೆ.
'ಸಪ್ತ ಸಾಗರದಾಚೆ ಎಲ್ಲೋ' ಎರಡನೇ ಭಾಗವನ್ನು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳಿನಲ್ಲಿ ಪ್ರೇಕ್ಷಕರ ಮುಂದೆ ತರುವ ನಿರೀಕ್ಷೆಯಿದೆ. ಹೇಮಂತ್ ರಾವ್ ಮತ್ತೊಮ್ಮೆ ತಮ್ಮ ನಿರ್ದೇಶನದಮೂಲಕ ಪ್ರೇಕ್ಷಕರನ್ನು ಕಟ್ಟಿ ಹಾಕುವ ಸಾಧ್ಯತೆಯಿದೆ. ಮೊದಲಿಗೆ ಒಂದು ಸಿನಿಮಾ ಆಗಿ ಶುರುವಾಗಿದ್ದ ಈ ಲವ್ ಸ್ಟೋರಿ ಬಳಿಕ 2 ಭಾಗಗಳಾಗಿ ಬದಲಾಯಿತು. ಕೆಲವರು ರೊಮ್ಯಾಂಟಿಕ್ ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರುವ ಅವಶ್ಯಕತೆ ಇತ್ತಾ? ಎಂದು ಕೇಳಿದ್ದರು. ಆದರೂ ಕೂಡ ಪ್ರೇಕ್ಷಕರು 2ನೇ ಭಾಗ ನೋಡಲು ಉತ್ಸುಕರಾಗಿದ್ದಾರೆ.
ಮನು ಪಾತ್ರಕ್ಕಾಗಿ ಎರಡು ವಿಭಿನ್ನ ಶೇಡ್‌ನಲ್ಲಿ ರಕ್ಷಿತ್ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ತೂಕ ಹೆಚ್ಚಿಸಿ, ಇಳಿಸಿ ಬಹಳ ಶ್ರಮಿಸಿದ್ದಾರೆ. ಮೊದಲ ಭಾಗದಲ್ಲಿ ಲವರ್ ಬಾಯ್ ಆಗಿ ಮನು ಕಾಣಿಸಿಕೊಂಡಿದ್ದು 2ನೇ ಭಾಗದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











