»   » ಪ್ರೇಕ್ಷಕರಿಗೆ ಈ ಪರಿಯ ಆತಿಥ್ಯ

ಪ್ರೇಕ್ಷಕರಿಗೆ ಈ ಪರಿಯ ಆತಿಥ್ಯ

Posted By: Staff
Subscribe to Filmibeat Kannada

ಮದುವೆ ಆಗೋಣ ಬಾ ಹಾಗೂ ಲಂಕೇಶ ಈ ವಾರ ತೆರೆಕಾಣಲಿರುವ ಮತ್ತೆರಡು ಕನ್ನಡ ಚಿತ್ರಗಳು. ಇತ್ತೀಚೆಗಂತೂ ನೋಡುಗರೇ ಇಲ್ಲದೆ ಚಿತ್ರಮಂದಿರಗಳು ಭಣಗುಡುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಈ ಎರಡು ಚಿತ್ರಗಳು ಹಲವು ಆಮಿಷಗಳನ್ನೂ ಒಡ್ಡಿವೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಬಿ.ಸಿ. ಪಾಟೀಲರ ಕೃಷ್ಣಾರ್ಜುನ ಒಂದೇ ವಾರಕ್ಕೆ ಬಹುತೇಕ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿತ್ತು. ಈ ಹಿನ್ನೆಲೆಯಲ್ಲಿ 9-2-2001ರಂದು ಬೆಳಗ್ಗೆ 10 ಗಂಟೆಗೆ ಲಂಕೇಶ ಚಿತ್ರ ಪ್ರದರ್ಶನಗೊಳ್ಳುವ ನರ್ತಕಿ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸ್ವಾಗತಿಸಲು ನಾಯಕ ಬಿ.ಸಿ. ಪಾಟೀಲ್‌ ಹಾಗೂ ನಾಯಕಿ ಭಾವನಾ ಸಜ್ಜಾಗಿದ್ದಾರೆ.

ಈ ಚಿತ್ರದ ಮೊದಲ ದಿನದ ಗಳಿಕೆಯಲ್ಲಿ ಹತ್ತು ಸಾವಿರದ ಒಂದು ರುಪಾಯಿಗಳನ್ನು ಗುಜರಾತ್‌ ಭೂಕಂಪ ಸಂತ್ರಸ್ತರ ನಿಧಿಗೆ ನೀಡುವ ಘೋಷಣೆಯನ್ನೂ ಮಾಡಲಾಗಿದೆ. ಅಲ್ಲದೆ 1-30ಕ್ಕೆ ಪುಟ್ಟಣ್ಣ ಚಿತ್ರಮಂದಿರ, 4 ಗಂಟೆಗೆ ಪ್ರಮೋದ್‌, 5 ಗಂಟೆಗೆ ವೀರಭದ್ರೇಶ್ವರ, 6 ಗಂಟೆಗೆ ಗೋವರ್ದನ್‌ ಚಿತ್ರಮಂದಿರಗಳಲ್ಲಿ ಅಭಿಮಾನಿಗಳನ್ನು ಈ ನಾಯಕ ನಾಯಕಿಯರು ಸ್ವಾಗತಿಸುವ ಕಾರ್ಯಕ್ರಮವೂ ಇದೆ.
ಈ ನಿಟ್ಟಿನಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸಹ ಹಿಂದೆ ಬಿದ್ದಿಲ್ಲ. ಶಿವರಾಜ್‌ ಕೂಡ ಇತರ ಸಹ ನಟ ನಟಿಯರ ಜತೆಗೂಡಿ ಮೇನಕಾ ಚಿತ್ರಮಂದಿರದಲ್ಲಿ ಚಿತ್ರದ ಮಧ್ಯಂತರ ಸಮಯದಲ್ಲಿ ಅಭಿಮಾನಿಗಳನ್ನು ಖುದ್ದು ಭೇಟಿ ಮಾಡಲಿದ್ದಾರೆ.

ಡೋನರ್‌ ಪಾಸ್‌ಗಳ ಲಕ್ಕಿಡಿಪ್‌ ಸಹ ನಡೆಯಲಿದೆ. ಪ್ರಥಮ ಮೂವರು ಅದೃಷ್ಟ ಶಾಲಿಗಳಿಗೆ ಬಹುಮಾನ ನೀಡುವ ಆಕರ್ಷಣೆಯನ್ನೂ ಒಡ್ಡಲಾಗಿದೆ.

ಮದುವೆ : ತಾರಾ, ಅವಿನಾಶ್‌, ಮಾಳವಿಕಾ, ಸುಮನ್‌ ನಗರ್‌ಕರ್‌, ಸುಧಾರಾಣಿ ಅವರುಗಳ ಮದುವೆಯ ಸುದ್ದಿಗಳ ಸಂದರ್ಭದಲ್ಲೇ ತೆರೆಕಾಣುತ್ತಿರುವ ಚಿತ್ರದ ಹೆಸರೂ ಮದವೆ ಆಗೋಣ ಬಾ ಎಂದೇ. ದಾಖಲೆಗಳ ನಿರ್ಮಾಪಕ ಡಾ. ಡಿ. ರಾಮಾನಾಯ್ಡು ನಿರ್ಮಿಸಿರುವ ಈ ಚಿತ್ರ ಇದೇ ಶುಕ್ರವಾರ ಬೆಂಗಳೂರಿನ ಮೇನಕ, ವೀರೇಶ, ಉಮಾ, ಶಾಂತಿ, ಗೀತಾಂಜಲಿ, ಪುಷ್ಪಾಂಜಲಿ, ಆದರ್ಶ, ನಳಂದ, ನವರಂಗ್‌, ನಂದ, ಕಾವೇರಿ ಮೊದಲಾದ ಚಿತ್ರಮಂದಿರಗಳೂ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಪ್ರೀತಿ, ಪ್ರೇಮ, ಹೊಡೆದಾಟ ಎಲ್ಲ ಇರುವ ಈ ಚಿತ್ರಕ್ಕೆ ಭೂಪತಿ ರಾಜರ ಕಥೆ, ಕೆ. ನಂಜುಂಡ ಅವರ ಸಂಭಾಷಣೆ, ಕೆ. ಕಲ್ಯಾಣ್‌ ಸಾಹಿತ್ಯ, ಥಾಮಸ್‌ ನಿರ್ಮಾಣ -ನಿರ್ವಹಣೆ, ವಿ. ಪ್ರತಾಪ್‌ ಛಾಯಾಗ್ರಹಣ, ಶ್ರೀಲೇಖಾರ ಸಂಗೀತ ಇದೆ. ಶಿವರಾಜ್‌ಕುಮಾರ್‌ ಜತೆಯಲ್ಲಿ ಲಯಾ, ಶಿಲ್ಪ, ಸುಮಿತ್ರ, ಕಾಶಿ, ಶಿವರಾಂ, ಅರವಿಂದ್‌,ಶರಣ್‌, ಮಂಡ್ಯ ರಮೇಶ್‌, ದೇವಿಶ್ರೀ, ಮೇಘನಾ ನಟಿಸಿದ್ದಾರೆ.

ಲಂಕೇಶ : ಡಾ. ರಾಜ್‌ಕುಮಾರ್‌ ಅಪಹರಣವಾಗಿದ್ದ ಕಾಲದಲ್ಲಿ ಇಡೀ ಚಿತ್ರನಗರಿಯೇ ಸ್ತಬ್ಧವಾಗಿತ್ತು. ಚಿತ್ರೀಕರಣವೂ ನಿಂತಿತ್ತು. ಆಗ ಆರಂಭಗೊಂಡ ಮೊದಲ ಚಿತ್ರೀಕರಣ ಲಂಕೇಶನದು. ಪೊಲೀಸ್‌ ಅಧಿಕಾರಿ ಆಗಿದ್ದ ಪಾಟೀಲ್‌. ಈಗ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಸ್ಪೆಂಡ್‌ ಆಗಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಅನುಕಂಪವೂ ಇದೆ.

ದಿ ಹೀರೋ ಆಫ್‌ ರಾಮಾಯಣ ಇನ್‌ ದಿ ಬ್ಯಾಟಲ್‌ ಆಫ್‌ ಪ್ರೇಮಾಯಣ ಎಂಬ ಶೀರ್ಷಿಕೆಯಾಂದಿಗೆ ಬಿಡುಗಡೆ ಆಗುತ್ತಿರುವ ಈ ಚಿತ್ರ ಗೆಲ್ಲುತ್ತದೆ ಎಂಬುದು ಸ್ಯಾಂಡಲ್‌ವುಡ್‌ ಪಂಡಿತರ ಲೆಕ್ಕಾಚಾರ. ಸೌಮ್ಯ ಫಿಲಂಸ್‌ ಲಾಂಛನ, ಬಿ.ಸಿ. ಪಾಟೀಲ್‌ ನಿರ್ದೇಶನದ ಈ ಚಿತ್ರದಲ್ಲಿ ಬಿ.ಸಿ. ಪಾಟೀಲ್‌ರೇ ನಾಯಕರು. ಮಧು ಅವರ ಕತೆ - ಸಂಭಾಷಣೆ, ಆನಂದ್‌ ನಿರ್ದೇಶನದ ಸಹಾಯ ಇರುವ ಚಿತ್ರದಲ್ಲಿ ಭಾವನಾ, ಶೀತಲ್‌ ಬೇಡಿ ನಾಯಕಿಯರು.
ಬೆಂಗಳೂರಿನ ನರ್ತಕಿ, ಪ್ರಮೋದ್‌, ಪುಟ್ಟಣ್ಣ, ಗೋವರ್ಧನ್‌, ವೀರಭದ್ರೇಶ್ವ, ಉಮಾ ಸೇರಿದಂತೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಈ ಚಿತ್ರ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.

English summary
kannada film walas extend warm welcome to audience in the theater

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada