ಜೀವನಕ್ಕೆ ಈಗ ಮನೆ ಬಾಡಿಗೆ ಹಣನೇ ದಿಕ್ಕು ; ನಟನೆ ಬಿಡುವ ಆಲೋಚನೆ - ಕನ್ನಡ ಚಿತ್ರರಂಗದ ಕಹಿ ಸತ್ಯ ಹೇಳಿದ ದಿಗಂತ್
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗದ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬೇರೆ ಎಲ್ಲ ಉದ್ಯಮಗಳಿಗೆ ಹೋಲಿಸಿದರೆ ಇಲ್ಲಿ ಅಭದ್ರತೆ ಹೆಚ್ಚೇ ಇದೆ. ಇಲ್ಲಿ ಇವತ್ತು ಇಲ್ಲ ಅಂದರೆ ನಾಳೆ ಗೆದ್ದೇ ಗೆಲ್ಲುತ್ತೇವೆ ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತೆ ಎಂಬ ಭರವಸೆಯಿಂದ ಅನೇಕ ವರ್ಷಗಳಿಂದ ಅನೇಕ ಕಾರ್ಮಿಕರು, ತಂತ್ರಜ್ಞರು, ಕಲಾವಿದರು ಕಾಯುತ್ತಲೇ ಇದ್ದಾರೆ.
ಇನ್ನು ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ. ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ಅವರಿಗೂ ಅವರದ್ದೇ ಆದ ಹೊಣೆಗಾರಿಕೆ ಇರುತ್ತೆ. ಜವಾಬ್ದಾರಿ ಇರುತ್ತೆ. ಕ್ಯಾಮರಾ ಆಫ್ ಆದ ನಂತರ ಅವರು ಕೂಡ ನಮ್ಮ-ನಿಮ್ಮಂತೆಯೇ ಬದುಕಿನ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಾರೆ. ಎಲ್ಲರಂತೆ ಕೆಲಸದ ವಿಚಾರದಲ್ಲಿ ಚೂರು ಆಚೀಚೆ ಆದರೂ ಚಿಂತಾಕ್ರಾಂತರಾಗುತ್ತಾರೆ. ಇದಕ್ಕೆ ದಿಗಂತ್ ಮೊನ್ನೆ ಮೊನ್ನೆ ಮಾತನಾಡಿದ ಮಾತುಗಳೇ ಕೈಗನ್ನಡಿ.

ಹೌದು, ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡೋದು ತುಂಬಾ ಈಸಿಯಲ್ಲ ಅನ್ನೋದು ಗೊತ್ತಿರೋ ವಿಚಾರನೇ. ಒಂದೆರಡು ಸಿನಿಮಾದಲ್ಲಿ ನೇಮ್- ಫೇಮ್ ಸಿಗೋದು ಇಲ್ಲಿ ವಿರಳ. ಪ್ರಯತ್ನ ನಿರಂತರವಾಗಿ ಇದ್ದಾಗಲೇ ಸಾಧನೆಯ ಶಿಖರವನ್ನೇರಬಹುದು. ನೆಲೆಯೂರಬಹುದು. ಈ ಮಾತನ್ನ ಚೆನ್ನಾಗಿ ಅರ್ಥೈಸಿಕೊಂಡವರಲ್ಲಿ ''ದೂದ್ ಪೇಡಾ ದಿಗಂತ್'' ಕೂಡ ಒಬ್ಬರು.
''ಮಿಸ್ ಕ್ಯಾಲಿಪೋರ್ನಿಯಾ''ದಿಂದ ''ಮಾ ಇಂಟಿ ಬಂಗಾರಂ''ವರೆಗೆ.. ಚಿತ್ರರಂಗದಲ್ಲಿ ಎರಡು ದಶಕ ಪೂರೈಸಿರುವ ದಿಗಂತ್ ಸದ್ಯ ''ರುದ್ರಕಾಲ'' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಮೊನ್ನೆ ಈ ಚಿತ್ರದ ಮುಹೂರ್ತ ಸಮಾರಂಭ ಕೂಡ ನೆರವೇರಿದೆ.
ಇದೇ ಸಮಯದಲ್ಲಿ ತಮ್ಮ ಮನದ ಭಾವನೆಗಳನ್ನು ದಿಗಂತ್ ಹೊರ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತೇಲುತ್ತಿರುವ ಕನ್ನಡ ಚಿತ್ರರಂಗದ ವಾಸ್ತವ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಿದ್ದಾರೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ ತೀರ್ಥಹಳ್ಳಿಗೆ ಹೋಗಬೇಕೆಂದುಕೊಂಡಿದ್ದೇ ಎಂದು ಹೇಳುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿರುವ ದಿಗಂತ್, ಕನ್ನಡ ಚಿತ್ರರಂಗದ ಪರಿಸ್ಥಿತಿ ಈಗ ಮೊದಲಿನಂತೆ ಇಲ್ಲ ಎಂದು ಹೇಳಿದ್ದಾರೆ. ನಿರ್ಮಾಪಕರಲ್ಲಿ ಮೊದಲಿದ್ದ ಭಂಡ ಧೈರ್ಯ ಈಗ ಇಲ್ಲ ಬದಲಿಗೆ ಹಣ ಹೂಡಲು ಭಯ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಅನುಭವದ ಉದಾಹರಣೆಯನ್ನೇ ನೀಡಿರುವ ದಿಗಂತ್, ಒಂದು ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೇ, ಆದರೆ.. ನಿರ್ಮಾಪಕರು ಒಂದು ದಿನ ಬಂದು ಸದ್ಯ ಪರಿಸ್ಥಿತಿ ಚೆನ್ನಾಗಿಲ್ಲ ಈಗ ಸಿನಿಮಾ ಮಾಡೋದು ಬೇಡ ಎಂದು ಹೇಳಿದರು ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಪರಿಸ್ಥಿತಿಯ ಕುರಿತು ನನಗೆ ಆಗಲೇ ಗೊತ್ತಾಗಿದ್ದು ಎಂದು ಹೇಳಿರುವ ದಿಗಂತ್, ಜೀವನೋಪಾಯಕ್ಕೆ ಬೇರೆ ವೃತ್ತಿ ಜೀವನ ಕಂಡುಕೊಳ್ಳಬೇಕಾ ಅಥವಾ ತೀರ್ಥಹಳ್ಳಿಗೆ ಮರಳಿ ಹೋಗಿ, ಅಲ್ಲಿರುವ ತೋಟ ನೋಡಿಕೊಳ್ಳಬೇಕಾ ಎನ್ನುವ ಯೋಚನೆ ಆಗ ನನಗೆ ಬಂತು ಎಂದಿದ್ದಾರೆ.
ಈ ತರಹದ ಯೋಚನೆ ಬರಲು ಕಾರಣವನ್ನು ಕೂಡ ಹೇಳಿರುವ ದಿಗಂತ್, ನನ್ನ ಕೈಯಲ್ಲಿ ವರ್ಷ ಪೂರ್ತಿ ಕೆಲಸ ಇರುತ್ತಿತ್ತು, ಚಿತ್ರದ ಸೋಲು-ಗೆಲುವು ಏನೇ ಇರಬಹುದು ಆದರೆ ನಾನು ವರ್ಷ ಇಡೀ ಬ್ಯುಸಿಯಾಗಿರುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ಈಗ ಮೊದಲ ಬಾರಿ ಸಿನಿಮಾ ಅವಕಾಶ ಸಿಗುತ್ತಾ ಅಂತ ಎದುರು ನೋಡುವಂತಾಗಿದೆ ಎಂದಿದ್ದಾರೆ.
ಮುಂದುವರೆದು ಪರಿಸ್ಥಿತಿ ಸದ್ಯ ಎಷ್ಟು ಬಿಗಡಾಯಿಸಿದೆ ಅಂದರೆ , ನಂದಿ ಹಿಲ್ಸ್ ಬಳಿ ನನ್ನದೊಂದು ಗೇಟೆಡ್ ಕಮ್ಯುನಿಟಿಯಲ್ಲಿ ಮನೆ ಇದೆ, ಈಗ ಆ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದೇನೆ ಎಂದು ಹೇಳಿರುವ ದಿಗಂತ್, ಜೀವನೋಪಾಯಕ್ಕೆ ಈಗ ಅಲ್ಲಿಂದ ಬರುವ ಬಾಡಿಗೆಯನ್ನೇ ನಂಬಿಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.
ಹಾಗಂಥ ಇದು ದಿಗಂತ್ ಅವರ ಸಮಸ್ಯೆ ಮಾತ್ರ ಅಲ್ಲ. ಖುದ್ದು ದಿಗಂತ್ ಹೇಳಿದಂತೆ ಬಹುತೇಕರು ಒಂದೇ ದೋಣಿಯ ಪಯಣಿಗರು. ಕ್ರಿಕೆಟ್ ಆಡುವಾಗ ನಾನು ನನ್ನ ಬಹಳಷ್ಟು ಸ್ನೇಹಿತರ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿರುವ ದಿಗಂತ್ ಎಲ್ಲರದ್ದೂ ಕಥೆ ರೀತಿ ಇದೆ ಎಂದಿದ್ದಾರೆ.
ಇನ್ನು ಈ ಸಮಸ್ಯೆ ಕೇವಲ ಕನ್ನಡ ಚಿತ್ರರಂಗದ್ದು ಮಾತ್ರ ಎಂದು ಹೇಳಿರುವ ದಿಗಂತ್, ತೆಲುಗು ಸೇರಿ ಬೇರೆ ಭಾಷೆಗಳಲ್ಲಿ ಸಿನಿಮಾ ಕೆಲಸಗಳು ನಡೆಯುತ್ತಲೇ ಇವೆ ಎಂದು ಹೇಳಿದ್ಧಾರೆ. ಅಲ್ಲಿ ಸಿನಿಮಾ ಶುರುವಾದ ತಕ್ಷಣವೇ ವ್ಯಾಪಾರ ವ್ಯವಹಾರ ಎಲ್ಲ ನಡೆದು ಹೋಗುತ್ತೆ, ಆದರೆ ಕನ್ನಡದಲ್ಲಿ ಅಂತಹ ಸಹಕಾರ ಇಲ್ಲ ಎಂದು ಹೇಳಿದ್ಧಾರೆ. ಗಗನಕ್ಕೇರಿರುವ ಟಿಕೆಟ್ ಬೆಲೆ ಕೂಡ ಜನರನ್ನು ಚಿತ್ರಮಂದಿರಕ್ಕೆ ಬಾರದಂತೆ ತಡೆಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.


Click it and Unblock the Notifications