»   » ರಿಮೇಕ್‌ ಸಿನಿಮಾ, ಬದುಕು ಮತ್ತು ಜಿರಳೆ

ರಿಮೇಕ್‌ ಸಿನಿಮಾ, ಬದುಕು ಮತ್ತು ಜಿರಳೆ

Posted By: *ಸತ್ಯನಾರಾಯಣ
Subscribe to Filmibeat Kannada

ಕಳೆದ ವಾರ ಸೆಟ್ಟೇರಿದ ನಾಲ್ಕು ಚಿತ್ರಗಳಲ್ಲಿ ಮೂರು ರಿಮೇಕ್‌. ಹಾಗಾಗಿ ಸಹಜವಾಗಿಯೇ ಇವೆಲ್ಲಾ ಚಿತ್ರಗಳ ಸೆಟ್‌ನಲ್ಲಿ ರಿಮೇಕ್‌ ಬಗ್ಗೆ ವೈವಿಧ್ಯಮಯ ಚರ್ಚೆ ನಡೆಯಿತು.

ಈಗ ಎಲ್ಲ ರೂ ರಿಮೇಕ್‌ ಮಾಡ್ತಾ ಇದ್ದಾರೆ. ನಾನೊಬ್ಬನೇ ಮಾಡೋಲ್ಲ ಅಂದರೆ ಸರಿಯಾಗುತ್ತಾ ? ಪಾರ್ಟಿಗೆ ಹೋಗಿ ವಿಸ್ಕಿ ಕುಡಿಯೋದಿಲ್ಲ ಅಂದರೆ ಟೇಬಲ್‌ ಮ್ಯಾನರ್ಸ್‌ ಇಲ್ಲ ಅನ್ನೋಲ್ವಾ ? ಈ ಮ್ಯಾನರ್ಸ್‌ ನೆನಪಾಗಿದ್ದಕ್ಕೆ ಅವರೀಗ ಶ್ರುತಿ ಪತಿಯಾಗಿರುವುದೇ ಕಾರಣವಾಗಿರಬಹುದೇ ?

ಹಾಗಿದ್ದೂ, ಮಹೇಂದರ್‌ ಅವರೇ ಹೇಳುವ ಪ್ರಕಾರ ಅವರಿಗೆ 10 ನಿರ್ಮಾಪಕರಿಗೆ 10 ಒರಿಜಿನಲ್‌ ಕತೆಗಳನ್ನು ಹೇಳಿ ಒಪ್ಪಿಸುವ ತಾಕತ್ತಿದೆ. ಹಾಗನ್ನುತ್ತಲೇ ಇತ್ತಿತ್ತಲಾಗಿ ನೇರ ಕತೆ ಹೇಳಿ ನಿರ್ಮಾಪಕರನ್ನು ಕನ್ವಿನ್ಸ್‌ ಮಾಡೋದಕ್ಕಾಗಲ್ಲ ಎಂಬ ವಿರುದ್ಧ ಅಭಿಪ್ರಾಯವನ್ನು ಮಂಡಿಸಿದರು. ಈ ಕಾರಣಕ್ಕೇ ಕೆರೆಗೆ ಹಾರ ಜನಪದ ಕತೆಯನ್ನು ಚಿತ್ರವಾಗಿಸುವ ಮಹೇಂದರ್‌ ಕನಸು ಹಾಗೇ ಉಳಿಯಿತು. ನಿರ್ಮಾಪಕರಿಂದ ಹಿಡಿದು ನಾಯಕನ ತನಕ ಪ್ರತಿಯಾಬ್ಬರೂ ಆ ಚಿತ್ರ ಮಾಡೋದು ಬೇಡ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತ ಪಡಿಸಿದರಂತೆ.

ಸದ್ಯಕ್ಕೆ ಮಹೇಂದರ್‌ ನಿರ್ದೇಶಿಸುತ್ತಿರುವ ಕ್ಷೇಮವೇ ಕುಶಲವೇ ಚಿತ್ರಕ್ಕೆ ತಮಿಳು ಚಿತ್ರ ಕಾಲಮೆಲ್ಲಾ ಕಾದಲ್‌ವಾಳ್ಗೆ ಚಿತ್ರವೇ ಆಧಾರ . ಆ ಚಿತ್ರಕ್ಕೆ ಕನ್ನಡದ ಬೆಳದಿಂಗಳ ಬಾಲೆಯೇ ಸ್ಫೂರ್ತಿ . ನಾಯಕ ನಾಯಕಿಯರಿಬ್ಬರೂ ಪತ್ರ ಮತ್ತು ಫೋನ್‌ ಮೂಲಕವೇ ಪ್ರೀತಿ ಮಾಡ್ತಾರೆ. ಅಮೆರಿಕಾ ನಿವಾಸಿ ಡಾ. ಸತ್ಯಮೂರ್ತಿ ಕೋಟಂರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಎರಡು ಕನ್ನಡ ಚಿತ್ರ ನಿರ್ಮಿಸಿ (ರವಿಮಾಮ, ಮಾತಿನ ಮಲ್ಲ ) ಕೈ ಸುಟ್ಟುಕೊಂಡಿರುವ ಸತ್ಯ ಮೂರ್ತಿಯವರಿಗೆ ಈಗ ರಿಮೇಕ್‌ ಚಿಕಿತ್ಸೆ ಅನಿವಾರ್ಯವಾಗಿದೆ. ರಮೇಶ್‌ ಮತ್ತು ನವನಟಿ ರೇಖಾ ತಾರಾಗಣದಲ್ಲಿದ್ದಾರೆ.

ಬದುಕು ಮುಖ್ಯ : ರಿಮೇಕೋ ಸ್ವಮೇಕೋ ಬದುಕು ಮುಖ್ಯ ಅನ್ನುವ ಡೈಲಾಗ್‌ ಹೊಡೆದವರು ಜೇನುಗೂಡು ಚಿತ್ರದ ನಿರ್ದೇಶಕ ಉಮೇಶ್‌. ಅವರಿಗೆ ಈ ರಿಮೇಕ್‌ ನಿರ್ದೇಶನದ ಅವಕಾಶ ಸಿಕ್ಕದೇ ಇದ್ದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿರ್ದೇಶಕ ಉಮೇಶ್‌ ಆತ್ಮಹತ್ಯೆ ಎಂಬ ಸುದ್ದಿಯನ್ನು ನಾವೆಲ್ಲಾ ಪತ್ರಿಕೆಗಳಲ್ಲಿ ಓದಬೇಕಾಗಿತ್ತಂತೆ. ಆ ಮಟ್ಟಕ್ಕೆ ಅವರ ಸಾಲದ ಹೊರೆ ಬೆಳೆದಿತ್ತಂತೆ. ಅದಕ್ಕೆ ಕಾರಣ ಅವಳೇ ನನ್ನ ಹುಡುಗಿ ಎಂಬ ಚಿತ್ರವನ್ನು ಉಮೇಶ್‌ ನಿರ್ಮಿಸಿ ನಷ್ಟಮಾಡಿಕೊಂಡದ್ದು. 25 ಲಕ್ಷ ಸಾಲ ಮಾಡಿದ್ದರಂತೆ. ಅದನ್ನು ತೀರಿಸುವುದಕ್ಕೆ ದಾರಿಯಿಲ್ಲ , ಇನ್ನೊಂದೆಡೆ ಅವಕಾಶಗಳಿಗೆ ಬರ. ಇನ್ನೇನು ಟಿಕ್‌ ಟ್ವೆಂಟಿ ಕುಡಿಯಬೇಕು ಅನ್ನೋ ಹೊತ್ತಲ್ಲಿ ಸಿನಿಮಾ ನಾಯಕನ ಥರ ನಿರ್ಮಾಪಕ ಕೆ. ಮಂಜು ಬಂದರು. ಕರೆದು ಅವಕಾಶ ಕೊಟ್ಟರು.

ಉಮೇಶ್‌ ಈ ಹಿಂದೆ ಅವಳೇ ನನ್ನ ಹೆಂಡ್ತಿ, ತುಂಬಿದಮನೆಯಂಥಾ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದವರು. ಸದ್ಯಕ್ಕೆ ರಿಮೇಕ್‌ ಟ್ರೆಂಡಿಗೆ ಇವರು ಲೇಟೆಸ್ಟ್‌ ಬಲಿ. ತಮಿಳಿನ ವಾಳ್ದಾನ್‌ ಕೂಡಿ ನನ್ನೈ ಚಿತ್ರದ ರಿಮೇಕ್‌ ಆಗಿರುವ ಜೇನುಗೂಡು ಚಿತ್ರದ ಕತೆಯೂ ತುಂಬಿದ ಮನೆಯ ಕತೆಗೆ ಹತ್ತಿರವಿದೆ. ಅವಿಭಕ್ತ ಕುಟುಂಬದ ಹಾಡುಪಾಡಿನ ಕತೆಯಿದು. ದೊಡ್ಡಣ್ಣನ ಪಾತ್ರದಲ್ಲಿ ದೇವರಾಜ್‌ ನಟಿಸುತ್ತಿದ್ದಾರೆ. ತಮ್ಮನಾಗಿ ಗೋವಿಂದು ಇದ್ದಾರೆ. ಮಿಕ್ಕ ಪಾತ್ರವರ್ಗದಲ್ಲಿ ಶ್ರುತಿ, ಉಮಾಶ್ರೀ, ಸಿತಾರಾ ಮೊದಲಾದವರು. ಹಾಲುಂಡ ತವರು ಖ್ಯಾತಿಯ ಸಿತಾರಾ ನಾಲ್ಕು ವರ್ಷದ ನಂತರ ಮತ್ತೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ಅವರು ತೆಲುಗು , ತಮಿಳು ಸೀರಿಯಲ್‌ನಲ್ಲಿ ಬಿಜಿಯಾಗಿದ್ದರಂತೆ.

ರಿಮೇಕ್‌ ಮಾಡಬೇಡಿ ಅಂತ ಹೇಳೋದು ಒಂದೇ.............

ರಿಮೇಕ್‌ ಮಾಡಬೇಡಿ ಅಂತ ಹೇಳೋದು ಒಂದೇ, ಊರಿಗೆ ಬುದ್ಧಿ ಹೇಳೋದೂ ಒಂದೇ ಎಂಬ ವೈರಾಗ್ಯ ರಾಗ ಹಾಡಿದವರು ಭಾವಮೈದ ಚಿತ್ರದ ನಿರ್ದೇಶಕ ಕಿಶೋರ್‌ ಸರ್ಜಾ. ತುತ್ತಾ ಮುತ್ತಾದಂತಹ ಸ್ವಮೇಕ್‌ ಚಿತ್ರದ ನಂತರ ಸರ್ಜಾ ಯಾವ ಚಿತ್ರವನ್ನೂ ನಿರ್ದೇಶಿಸಿರಲಿಲ್ಲ. ನಾಲ್ಕು ಕತೆ ಕೈಯ್ಯಲ್ಲಿದ್ದರೂ ಅದನ್ನು ಕೇಳುವವರಿಲ್ಲ. ಆಗ ರಾಮು ಬಂದು ರಿಮೇಕ್‌ ಮಾಡಿ ಅಂದರು. ಅವರ ಕೈಯ್ಯಲ್ಲಿ ತೆಲುಗಿನ ಭಾವಮರ್ದಿ ಚಿತ್ರದ ರಿಮೇಕ್‌ ರೈಟ್ಸ್‌ ಇತ್ತು.

ಭಾವಮೈದನಾಗಿ ಶಿವರಾಜ್‌ ಕುಮಾರ್‌ ಮತ್ತು ಪ್ರಕಾಶ್‌ ರೈ ನಟಿಸುತ್ತಿದ್ದಾರೆ. ರೈ ನಿರ್ವಹಿಸುತ್ತಿರುವ ಪಾತ್ರವನ್ನು ಅಂಬರೀಷ್‌ ಅವರಿಂದ ಮಾಡಿಸಬೇಕೆಂದು ರಾಮು ಶತಾಯ ಗತಾಯ ಪ್ರಯತ್ನ ಪಟ್ಟಿದ್ದುಂಟು. ಆದರೆ ಆ ಪಾತ್ರಗಳಲ್ಲಿ ನೆಗೆಟಿವ್‌ ಅಂಶಗಳಿವೆ ಅನ್ನೋ ಕಾರಣಕ್ಕೆ ಅಂಬಿ ತಿರಸ್ಕರಿಸಿದ್ದರಂತೆ. ತೆಲುಗು ಚಿತ್ರರಂಗದಲ್ಲೂ ಈಗ ತಯಾರಾಗುತ್ತಿರುವ ಚಿತ್ರಗಳಲ್ಲಿ ಅರ್ಧಕ್ಕರ್ಧ ರಿಮೇಕೇ ಇವೆ. ಅಷ್ಟಕ್ಕೂ ಈಗ ಪ್ರೇಕ್ಷಕರು ಸ್ಟಾರ್‌ ಮುಖ ನೋಡಿ ಚಿತ್ರಕ್ಕೆ ಬರ್ತಾ ಇಲ್ಲ . ಕತೆ, ನಿರ್ದೇಶಕ, ಬ್ಯಾನರ್‌ ಎಲ್ಲಾ ಮುಖ್ಯವಾಗುತ್ತದೆ. ಕತೆ ಚೆನ್ನಾಗಿದ್ದು, ನಿರ್ಮಾಪಕನ ಅದೃಷ್ಟವೂ ಚೆನ್ನಾಗಿದ್ದರೆ ಚಿತ್ರ ಯಶಸ್ಸು ಕಾಣುತ್ತದೆ. ಹಾಗಾಗಿ ರಿಮೇಕ್‌ನಲ್ಲಿ ತಪ್ಪೇನೂ ಇಲ್ಲ ಎಂಬ ವಿಚಿತ್ರ ವಾದವನ್ನು ಪ್ರಕಾಶ್‌ ರೈ ಮಂಡಿಸಿದರು.

ಶಿವರಾಜ್‌ ತರ್ಕ : ಶಿವರಾಜ್‌ ಈ ಚರ್ಚೆಗೆ ಹೊಸ ಆ್ಯಂಗಲ್‌ ಕೊಟ್ಟರು. ನಮ್ಮ ಸಲುವಾಗಿಯಲ್ಲದಿದ್ದರೂ ಕಾರ್ಮಿಕರ ಸಲುವಾಗಿಯಾದರೂ ರಿಮೇಕ್‌ ಚಿತ್ರದಲ್ಲಿ ನಟಿಸಬೇಕು. ಇಲ್ಲದಿದ್ದಲ್ಲಿ ಕಾರ್ಮಿಕರಿಗೆ ಕೆಲಸ ಇರುವುದಿಲ್ಲ ಅನ್ನೋದು ಅವರ ತರ್ಕ.

ಯಲಹಂಕದ ಕಲ್ಯಾಣಮಂಟಪವೊಂದರಲ್ಲಿ ನೆರವೇರಿದ ಭಾವ ಮೈದ ಚಿತ್ರದ ಮುಹೂರ್ತಕ್ಕೆ ಮುಖ್ಯ ಅತಿಥಿ ವಿಷ್ಣು ಎರಡು ತಾಸು ತಡವಾಗಿ ಬಂದರು. ಯಾರ ಜೊತೆಗೂ ಮಾತಾಡದೇ ಅಲ್ಲಿಂದ ಹಾಗೇ ಕೋಲಾರಕ್ಕೆ ಹೊರಟು ಹೋದರು. ಯಜಮಾನ ಅಂದರೆ ತಮಾಷೇನಾ !

ಅದಿರಲಿ, ರಿಮೇಕ್‌ ಪಿಶಾಚಿಯನ್ನು ಓಡಿಸುವುದಕ್ಕೆ ಇರುವ ಉಪಾಯವೇನು ? ಈ ಪ್ರಶ್ನೆಗೆ ರಮೇಶ್‌ ಒಂದು ವಾಕ್ಯದ ಉತ್ತರ ನೀಡುತ್ತಾರೆ. ವರ್ಷಕ್ಕೊಂದು ಸಿಲ್ವರ್‌ ಜ್ಯೂಬಿಲಿ ಓಡುವಂಥಾ ಸ್ವಮೇಕ್‌ ಚಿತ್ರ ಬರಲಿ, ರಿಮೇಕ್‌ ತಾನಾಗಿಯೇ ಮೂಲೆಗುಂಪಾಗುತ್ತದೆ. ಡೆಲಿವರಿಯಾಗುವ ಮೊದಲೇ ಮಗುವಿನ ಜಾತಕ ಗೊತ್ತಾಗೋದು ಹೇಗೆ. ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಸಾಧ್ಯವಿಲ್ಲ.

English summary
Kannada remake films, what our filmdom feels?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada