»   » ಜಗತ್ತಿನಲ್ಲೇ ರೀಮೇಕ್‌ ಸಿನಿಮಾಗಳಿಗೆ ಅತಿ ಹೆಚ್ಚು ಪ್ರದರ್ಶನ

ಜಗತ್ತಿನಲ್ಲೇ ರೀಮೇಕ್‌ ಸಿನಿಮಾಗಳಿಗೆ ಅತಿ ಹೆಚ್ಚು ಪ್ರದರ್ಶನ

Posted By: Super
Subscribe to Filmibeat Kannada
Theatre owners
ಏಪ್ರಿಲ್‌ 1, 2002 ರಿಂದ ರೀಮೇಕ್‌ ಚಿತ್ರಗಳಿಗೆ ತೆರಿಗೆ ವಿಧಿಸಿರುವುದನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಹೊಸದಾಗಿ ರಚಿತವಾಗಿರುವ ಕರ್ನಾಟಕ ಚಿತ್ರಮಂದಿರಗಳ ಮಾಲೀಕರ ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಬಿ.ಎಸ್‌.ಅರುಣ್‌ ಕುಮಾರ್‌ ಹಾಗೂ ಉಪಾಧ್ಯಕ್ಷ ಎಸ್‌.ದೇವರಾಜ್‌ ಪಾಂಡೆ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಗೆ ಈ ವಿಷಯ ತಿಳಿಸಿದ್ದಾರೆ. ತೆರಿಗೆ ವಿಧಿಸಿದಲ್ಲಿ ಆಗುವ ವ್ಯತಿರಿಕ್ತ ಪರಿಣಾಮಗಳನ್ನು ಸಂಘ ಪಟ್ಟಿ ಮಾಡಿರುವುದು ಹೀಗೆ-

ವರ್ಷಕ್ಕೆ ಸುಮಾರು 75 ಕನ್ನಡ ಚಿತ್ರಗಳು ತೆರೆ ಕಾಣುತ್ತವೆ. ಈ ಪೈಕಿ ಶೇ. 60ರಷ್ಟು ರೀಮೇಕ್‌. ಇವುಗಳ ಮೇಲೆ ತೆರಿಗೆ ವಿಧಿಸಿದಲ್ಲಿ, ನಿರ್ಮಿತವಾಗುವ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಪ್ರತಿಶತ 80ರಷ್ಟು ಮನರಂಜನಾ ತೆರಿಗೆ ಹಾಗೂ ಪ್ರತಿ ಪ್ರದರ್ಶನಕ್ಕೆ 250 ರುಪಾಯಿ ತೆರಿಗೆಯನ್ನು ಸರ್ಕಾರ ಹೇರಿದೆ. ದೇಶದಲ್ಲೇ ಇದು ಅತಿ ಹೆಚ್ಚು ಮನರಂಜನಾ ತೆರಿಗೆ. ಇನ್ನು ಪ್ರದರ್ಶನ ಸುಂಕವಂತೂ ಜಗತ್ತಿನಲ್ಲೆಲ್ಲೂ ಇಷ್ಟೊಂದು ಪ್ರಮಾಣದಲ್ಲಿಲ್ಲ ! ಇದರಿಂದಾಗಿ ಚಿತ್ರಮಂದಿರಗಳಿಗೆ ಕನ್ನಡ ಚಿತ್ರಗಳೇ ಇಲ್ಲದೆ ನೊಣ ಹೊಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ.

ಮಂಗಳೂರು, ಹಾಸನ, ಚಿತ್ರದುರ್ಗ, ಕೋಲಾರ ಹಾಗೂ ಚಿಂತಾಮಣಿ ಜಿಲ್ಲೆಗಳಲ್ಲಿ ಈಚೀಚೆಗೆ ಲೇಸಾರ್‌ ಡಿಸ್ಕ್‌ ಚಿತ್ರಮಂದಿರಗಳ ಹಾವಳಿ ಹೆಚ್ಚಾಗಿದೆ. ಚಿಕ್ಕದೊಂದು ಕೋಣೆ. ಒಂದಿಷ್ಟು ಕುರ್ಚಿಗಳು. ಅಲ್ಲೇ ಸ್ನ್ಯಾಕ್ಸ್‌ ದುಕಾನು. ಎಲ್ಲಾ ಭಾಷೆಯ ಚಿತ್ರಗಳನ್ನೂ ಅಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಿಂದ ಚಿತ್ರಮಂದಿರಗಳಿಗೆ ದೊಡ್ಡ ಪೆಟ್ಟು. ಸರ್ಕಾರ ಇಂಥಾ ಲೇಸಾರ್‌ ಡಿಸ್ಕ್‌ ಚಿತ್ರಮಂದಿರಗಳ ಹಾವಳಿ ತಪ್ಪಿಸಬೇಕು. ಅದನ್ನು ಬಿಟ್ಟು ರೀಮೇಕ್‌ ಚಿತ್ರಗಳ ಮೇಲೆ ಸಿಕ್ಕಾಪಟ್ಟೆ ತೆರಿಗೆ ವಿಧಿಸಿದರೆ ಉದ್ದಿಮೆಗೇ ಕೊಡಲಿ ಪೆಟ್ಟು ಎಂದಿದ್ದಾರೆ ಸಂಘದ ಉಪಾಧ್ಯಕ್ಷ ದೇವರಾಜ್‌.

ಸಂಘ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಅರುಣ್‌ ಕುಮಾರ್‌ ಹೇಳಿರುವುದು ಹೀಗೆ- ಚಿತ್ರಮಂದಿರಗಳಿಗೆ ಪರವಾನಗಿ ಕೊಡಲು ಒಂದೇ ಒಂದು ವ್ಯವಸ್ಥಿತ ಏಜೆನ್ಸಿಯನ್ನು ಸ್ಥಾಪಿಸಬೇಕೆಂಬುದು ನಮ್ಮ ಆಗ್ರಹ. ಈಗಿರುವ ವ್ಯವಸ್ಥೆಯಲ್ಲಿ ಪರವಾನಗಿ ಪಡೆಯಲು ಆರೇಳು ಇಲಾಖೆಗಳನ್ನು ಸುತ್ತಬೇಕು. ವೃಥಾ ಸಮಯ ಹಾಳು. ಜೊತೆಗೆ ಪ್ರತಿ ವರ್ಷ ನವೀಕರಣದ ತಲೆನೋವು ಬೇರೆ ಇದೆ.

ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದನ್ನು ಪರಿಶೀಲಿಸಲೆಂದೇ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ಸಮಿತಿಯನ್ನು ರಚಿಸಿದೆ. ಚಿತ್ರಮಂದಿರಗಳನ್ನು ಕಂಡು, ಅಲ್ಲಿ ಸರಿಪಡಿಸಬೇಕಾದ ಸವಲತ್ತುಗಳ ಪಟ್ಟಿಯನ್ನು ಸಮಿತಿ ಮಾಲೀಕರಿಗೆ ಕೊಡುತ್ತದೆ. ಅದನ್ನು ಪಾಲಿಸದಿರುವ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತದೆ. ಈ ನಿಟ್ಟಿನಲ್ಲೂ ಸಂಘ ಸಮರ್ಪಕವಾಗಿ ಸಹಕರಿಸಲಿದೆ ಎಂದು ಅರುಣ್‌ ಕುಮಾರ್‌ ಹೇಳಿದ್ದಾರೆ.

English summary
Theatre owners oppose tax on remake films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada