»   » ಸ್ಯಾಂಡಲ್‌ವುಡ್‌ಗೀಗ ಸ್ವಲ್ಪವೂ ಬಿಡುವಿಲ್ಲ !! ಹೌದೆ? ಏಕೆ?

ಸ್ಯಾಂಡಲ್‌ವುಡ್‌ಗೀಗ ಸ್ವಲ್ಪವೂ ಬಿಡುವಿಲ್ಲ !! ಹೌದೆ? ಏಕೆ?

Posted By: Staff
Subscribe to Filmibeat Kannada

ಬೆಂಗಳೂರು : ಈ ಹೊತ್ತು ಸ್ಯಾಂಡಲ್‌ವುಡ್‌ ಸಕತ್‌ ಬ್ಯುಸಿಯಾಗಿದೆ. ಹಿಂದೆಂದೂ ಕಾಣದ ಲವಲವಿಕೆ, ಚಟುವಟಿಕೆ ಇಲ್ಲಿ ತುಂಬಿ ತುಳುಕುತ್ತಿದೆ. ನಟ-ನಟಿಯರಿಗಂತೂ ಬಿಡುವಿಲ್ಲದ ಷೆಡ್ಯುಲ್‌. ಒಂದರ ಹಿಂದೊಂದರಂತೆ ಷೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬಿಡುವಿಲ್ಲದ ಬದುಕು.

ಏಕಾಏಕಿ ಕನ್ನಡಚಿತ್ರರಂಗದಲ್ಲಿ ಈ ಪರಿಯ ಚಟುವಟಿಕೆ ಏಕೆ? ಇದಕ್ಕೊಂದು ಬಲವಾದ ಕಾರಣವಿದೆ ಸ್ವಾಮಿ. ಕನ್ನಡ ಚಿತ್ರಗಳಿಗೆ ರಾಜ್ಯ ಸರಕಾರ ನೀಡುವ ಮನರಂಜನೆ ತೆರಿಗೆ ವಿನಾಯಿತಿಯ ಗಡುವು ರೀಮೇಕ್‌ ಚಿತ್ರಗಳಿಗೆ ಮಾರ್ಚ್‌ 31ಕ್ಕೆ ಕೊನೆಗೊಳ್ಳುತ್ತದೆ.

ಈಗಂತೂ ಕನ್ನಡದಲ್ಲಿ ರೀಮೇಕ್‌ದೇ ಸಾಮ್ರಾಜ್ಯ. ಚಿತ್ರೀಕರಣ ಹಂತದಲ್ಲಿರುವ ಶೇ.80ರಷ್ಟು ಚಿತ್ರಗಳು ರೀಮೇಕೇ. ಹೀಗಾಗಿ ಗಡುವು ಮುಗಿವುದರೊಳಗೆ ತಮ್ಮ ಚಿತ್ರಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್‌ ಪಡೆವ ಹವಣಿಕೆ ನಿರ್ಮಾಪಕರದು. ಇದುವೇ ಉದ್ಯಮದಲ್ಲಿ ಹಿಂದೆಂದೂ ಕಾಣದ ಚುರುಕು ಚಟುವಟಿಕೆಯ ಮೂಲ. ನಟ-ನಟಿಯರಂತೂ ಬಳಲಿ ಬೆಂಡಾಗಿದ್ದಾರೆ.

ಶ್ರಾವಣ ಮಾಸದಲ್ಲಿ ಅಂದರೆ ಜುಲೈ 27ರ ಶುಕ್ರವಾರ ಸೆಟ್ಟೇರಿದ್ದು ನಾಲ್ಕು ರೀಮೇಕ್‌ ಚಿತ್ರಗಳು. ಕಳೆದ ಶುಕ್ರವಾರ ಮುಹೂರ್ತ ನಡೆದ ಆರು ಚಿತ್ರಗಳ ಪೈಕಿ ಮೂರು ರೀಮೇಕ್‌. ಶ್ರಾವಣದಿಂದ ಕಾರ್ತೀಕದ ಕೊನೆವರೆಗೆ ಮುಹೂರ್ತ ನಡೆಸಿಕೊಂಡ ಡಜನ್‌ಗೂ ಹೆಚ್ಚು ಚಿತ್ರಗಳು ರೀಮೇಕ್‌ಗಳೇ.

ಈ ಎಲ್ಲ ಚಿತ್ರಗಳೂ ಡಿ.31ರೊಳಗೆ ಸೆನ್ಸಾರ್‌ ಸರ್ಟಿಫಿಕೇಟ್‌ ಗಳಿಸಿದಲ್ಲಿ ಇವಕ್ಕೆ ಸರಕಾರದ ವಿನಾಯಿತಿ -ರಿಯಾಯಿತಿ ಸೌಲಭ್ಯ ಸಿಗುತ್ತದೆ. ಈ ಅವಕಾಶ ತಪ್ಪಿಸಿಕೊಳ್ಳಲು ಸಾಧ್ಯವೇ. ಇದಕ್ಕಾಗಿ ಈ ನಿಲ್ಲದ ಹೋರಾಟ. ಈ ನಡುವೆ ಚಿತ್ರರಂಗದ ಕೆಲವು ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬೀರಿ, ರೀಮೇಕ್‌ ಚಿತ್ರಗಳಿಗೆ ವಿಧಿಸಿರುವ ಮಾರ್ಚ್‌ 31ರ ಗಡುವನ್ನು ವಿಸ್ತರಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಸದ್ಯ ಚಿತ್ರೀಕರಣ ಹಂತದಲ್ಲಿರುವ ಕೆಲವು ರೀಮೇಕ್‌ ಚಿತ್ರಗಳ ವಿವರ ಇಲ್ಲಿದೆ :

  • ರಮೇಶ್‌, ಶಿವರಾಜ್‌ ಅಭಿನಯದ 'ನಿನ್ನೆ ಪ್ರೀತಿಸುವೆ". ಇದು ತಮಿಳಿನ 'ನೀ ವರುವಾಯಿ ಎನ್‌" ಚಿತ್ರದ ರೀಮೇಕು.
  • ಮಹೇಂದರ್‌ ನಿರ್ದೇಶಿಸುತ್ತಿರುವ 'ಕ್ಷೇಮವೇ ಕುಶಲವೇ" ಚಿತ್ರಕ್ಕೆ ತಮಿಳು ಚಿತ್ರ ಕಾಲಮೆಲ್ಲಾ ಕಾದಲ್‌ವಾಳ್ಗೆ ಚಿತ್ರವೇ ಆಧಾರ.
  • ನುವ್ವೆ ಕಾವಾಲಿ ಚಿತ್ರದ ಕನ್ನಡ ರೀಮೇಕ್‌ 'ನಿನಗಾಗಿ" (ಚಿತ್ರದ ಹೆಸರು ಅಧಿಕೃತವಾಗಿ ಪ್ರಕಟವಾಗಿಲ್ಲ) ಆರಂಭವಾಗಿದೆ.
  • ಸುದೀಪ್‌ ಅಭಿನಯದ 'ಸ್ವಯಂವರ" ಇದು 'ದಿನ" ಚಿತ್ರದ ಪ್ರತಿಬಿಂಬವಂತೆ. (ವಾಲಿ ನಂತರ ಮತ್ತಾವ ರೀಮೇಕ್‌ನಲ್ಲೂ ನಟಿಸಲ್ಲ ಅಂತ ಸುದೀಪ್‌ ಹೇಳಿದ್ದರು ಎನ್ನುವ ನೆನಪು)
  • ಡಿ. ರಾಜೇಂದ್ರಸಿಂಗ್‌ ಬಾಬು 'ರಾಜಾ ಹಿಂದೂಸ್ತಾನಿ"ಯನ್ನು ಕನ್ನಡಕ್ಕೆ ಭಟ್ಟಿ ಇಳಿಸುತ್ತಿದ್ದಾರೆ. ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದೆ.
  • ರಮೇಶ್‌ ನಾಯಕನಟರಾಗಿರುವ 'ಮುತ್ತು" ಕೂಡ ತಮಿಳು ಚಿತ್ರದ ರೀಮೇಕ್‌.
  • ಈ ಮಧ್ಯೆ 'ಬಾಜಿಗರ್‌" ಕನ್ನಡದ ಮತ್ತೊಂದು 'ನಾಗರಹಾವು" ಆಗಿ ಹರಿದು ಬರುತ್ತಿದೆ.
English summary
Tight schedule in kannada film industry.. All for government benefits

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada