ಹೊಸ ವರ್ಷಕ್ಕೆ 'ರೆಮೋ' ಸರ್ಪ್ರೈಸ್: ಜನವರಿ 3ರಂದು ಪೋಸ್ಟರ್ ರಿಲೀಸ್
'ನಟಸಾರ್ವಭೌಮ' ಸಿನಿಮಾದ ಬಳಿಕ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಚಿತ್ರ ರೆಮೋ. ಇಶಾನ್ ನಾಯಕನಾಗಿ ನಟಿಸುತ್ತಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಸಿನಿಮಾ ಶೀರ್ಷಿಕೆ, ಮೇಕಿಂಗ್ ಮೂಲಕ ಕುತೂಹಲ ಹುಟ್ಟುಹಾಕಿರುವ ರೆಮೋ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಲಿದೆ. ಹೊಸ ವರ್ಷದ ವಿಶೇಷವಾಗಿ ಜನವರಿ 3 ರಂದು ರೆಮೋ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ. ಶುಕ್ರವಾರ ಸಂಜೆ 4 ಗಂಟೆಗೆ, ಆನಂದ್ ಆಡಿಯೋ ಯ್ಯೂಟ್ಯೂಬ್ ಚಾನಲ್ನಲ್ಲಿ ಪೋಸ್ಟರ್ ಬಿಡುಗಡೆಯಾಗಲಿದೆ.
ಇದುವರೆಗೂ ರೆಮೋ ಸಿನಿಮಾದ ಕುರಿತು ಯಾವುದೇ ಪೋಸ್ಟರ್ ಬಂದಿಲ್ಲ. ಇದೀಗ, ಮೊದಲ ಪೋಸ್ಟರ್ ಪ್ರೇಕ್ಷಕರ ಮುಂದೆ ಬರ್ತಿದೆ. ಹಾಗಾಗಿ, ಪೋಸ್ಟರ್ ಕುರಿತು ನಿರೀಕ್ಷೆ ಹೆಚ್ಚಿದೆ.

'ಗೂಗ್ಲಿ' ಸಿನಿಮಾ ಬಳಿಕ ಔಟ್ ಅಂಡ್ ಔಟ್ ಲವ್ ಸ್ಟೋರಿ ಸಿನಿಮಾ ಮಾಡ್ತಿರುವ ಪವನ್ ಒಡೆಯರ್, ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ತಯಾರಿಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಮೇಕಿಂಗ್ ಕೂಡ ಆಗಿದೆ.
ಅಂದ್ಹಾಗೆ, ಸಿನಿಮಾದಲ್ಲಿ ನಾಯಕ ಇಶಾನ್ ಸಿಂಗರ್ ಆಗಿರಬಹುದು ಎಂಬ ಸುಳಿವು ಸಿಕ್ಕಿದೆ. ಸ್ವತಃ ಚಿತ್ರತಂಡವೇ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಗಿಟಾರ್ ಹಿಡಿದು ನಿಂತಿರುವ ನಾಯಕ 'ನಾನು Rap ಸಿಂಗರ್' ಎಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.
ಸಿಆರ್ ಮನೋಹರ್ ಈ ಚಿತ್ರ ನಿರ್ಮಿಸುತ್ತಿದ್ದು, ಭಾರಿ ಬಜೆಟ್ ನಲ್ಲಿ ತಯಾರಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ಮತ್ತು ವೈದಿ ಛಾಯಾಗ್ರಹಣ ಒಳಗೊಂಡಿರುವ ಈ ಸಿನಿಮಾ 2020ನೇ ವರ್ಷದ ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಎಲ್ಲ ಅಂದುಕೊಂಡಂತೆ ಆದರೆ, ಮೊದಲಾರ್ಧದಲ್ಲೇ ಈ ಸಿನಿಮಾ ತೆರೆಗೆ ಬರಬಹುದು.


Click it and Unblock the Notifications











