ರೇಣುಕಾಸ್ವಾಮಿ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ಹೋಗ್ತಾರಾ ನಟ ದರ್ಶನ್?
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ಆತನಿಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿದೆ. ಪ್ರಕರಣದಲ್ಲಿ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಹಾಗೂ ಇನ್ನಿತರ 15 ಜನರ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. 3 ತಿಂಗಳಿಂದ ಜೈಲಿನಲ್ಲಿರುವ ಆರೋಪಿಗಳಿಗೂ ಆತಂಕ ಶುರುವಾಗಿದೆ.
ಜೂನ್ 8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಲಾಗಿತ್ತು. 90 ದಿನಗಳ ಒಳಗೆ ಪೊಲೀಸರು 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ರೇಣುಕಾಸ್ವಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸಲು ಆರಂಭಿದ್ದರಿಂದ ಶುರುವಾಗಿ ಆತನ ಅಪಹರಣ, ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ, ಹತ್ಯೆ ಬಳಿಕ ಪ್ರಕರಣ ಮುಚ್ಚಿಹಾಕಲು ನಡೆಸಿದ ಕರಸತ್ತು ಎಲ್ಲವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಯಾರೆಲ್ಲರ ಕೈವಾಡ ಇದೆ ಎನ್ನುವುದನ್ನು ತನಿಖಾಧಿಕಾರಿಗಳು ಸಾಕ್ಷಿ ಸಮೇತ ಮಾಹಿತಿಗಳನ್ನು ಕಲೆ ಹಾಕಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಸದ್ಯ ಆರೋಪಪಟ್ಟಿ ಅಷ್ಟೇ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್‌ಗೆ ತಲುಪಿದೆ. ಮುಂದೆ ಚಾರ್ಜ್‌ಶೀಟ್ ಆಧರಿಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಎಲ್ಲಾ ಸಾಕ್ಷ್ಯಾಧಾರಗಳನ್ನು ಪೊಲೀಸರು ರುಜುವಾತು ಮಾಡಬೇಕು, ಸಾಕ್ಷಿದಾರರು ತನಿಖೆ ವೇಳೆ ಸಾಕ್ಷ್ಯ ನುಡಿದಂತೆ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಹೇಳಬೇಕು. ಆಗ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಆಗಲಿದೆ.
ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ ಮಾತ್ರಕ್ಕೆ ಪೊಲೀಸರ ಕೆಲಸ ಮುಗಿಯಲಿಲ್ಲ. ಅಸಲಿ ಸವಾಲು ಇನ್ನು ಮುಂದೆ ಇದೆ. ಆರೋಪಿಗಳ ಪರ ವಕೀಲರು ಚಾರ್ಜ್‌ಶೀಟ್‌ನಲ್ಲಿರುವ ಲೋಪದೋಷಗಳನ್ನು ಅಸ್ತ್ರವಾಗಿಟ್ಟುಕೊಂಡು ವಾದಕ್ಕೆ ಇಳಿಯುತ್ತಾರೆ. ಅದನ್ನೆಲ್ಲಾ ಮೆಟ್ಟಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಅಷ್ಟು ಬೇಗ ಪ್ರಕರಣಕ್ಕೆ ಮುಗಿಯುವುದಿಲ್ಲ. ಆರೋಪಿಗಳಿಗೂ ತಮ್ಮ ವಾದ ಮುಂದಿಡಲು ಅವಕಾಶ ಇರುತ್ತದೆ. ಹಾಗಾಗಿ ಕೋರ್ಟ್ ವಿಚಾರಣೆ ತಿಂಗಳುಗಳ ಕಾಲ ಮುಂದುವರೆಯಲಿದೆ.

ಆರೋಪಿಗಳು ಒಬ್ಬೊಬ್ಬರಾಗಿ ಈಗಾಗಲೇ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಆರಂಭಿಸಿದ್ದಾರೆ. ಪವಿತ್ರಾ ಗೌಡ ಕೂಡ ವಾರದ ಹಿಂದೆಯೇ ವಕೀಲರ ಮೂಲಕ ಬೇಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಶೀಘ್ರದಲ್ಲೇ ದರ್ಶನ್ ಸಹ ಮುಂದಾಗುವ ಸಾಧ್ಯತೆಯಿದೆ. ಆದರೆ ಪ್ರಕರಣ ಗಂಭೀರವಾಗಿರುವುದರಿಂದ ಚಾರ್ಜ್‌ಶೀಟ್‌ನಲ್ಲಿ ಇವರಿಬ್ಬರು ಕೈವಾಡ ಹೆಚ್ಚು ಇದೆ ಎಂದು ಉಲ್ಲೇಖವಾಗಿದೆ. ಹಾಗಾಗಿ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎಂದು ಹೇಳಲಾಗ್ತಿದೆ.
ನಟ ದರ್ಶನ್ ಬಹಳ ಪ್ರಭಾವಿ. ಹಣವಂತ. ಹಾಗಾಗಿ ಒಂದು ವೇಳೆ ಜಾಮೀನು ಸಿಗದಿದ್ದರೂ ತಮಗೆ ಸಂಕಷ್ಟ ಎದುರಾದರೂ ಸುಪ್ರೀಂ ಕೋರ್ಟ್‌ವೆರೆಗೆ ಹೋಗಿ ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಭಾಗಿ ಆಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಈ ರೀತಿ ಭವಿಷ್ಯ ನುಡಿದಿದ್ದಾರೆ.
ಇದು ಬಹಳ ಗಂಭೀರ ಪ್ರಕರಣವಾಗಿದ್ದು ದೇಶದ ಗಮನ ಸೆಳೆದಿದೆ. ಅಷ್ಟು ಸುಲಭವಾಗಿ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಾದ ಕೆಲವರದ್ದು. ಅದೇ ರೀತಿ ಎಲ್ಲರಿಗೂ ಗಂಭೀರ ಶಿಕ್ಷೆ ಆಗಿಬಿಡುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ. ಕೊನೆಪಕ್ಷ ಆರೋಪಿಗಳಿಗೆ ಜಾಮೀನು ಸಿಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಪೊಲೀಸರು ತನಿಖೆ ಮುಂದುವರೆಸಿದ್ದು ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











