ದರ್ಶನ್ ಬಟ್ಟೆಯ ಮೇಲಿದ್ದ ರಕ್ತದ ಕಲೆ ಹೇಳಿದ ಸತ್ಯವೇನು ? ಪೊಲೀಸರಿಗೆ ಸಿಕ್ತಾ ಪ್ರಬಲ ಸಾಕ್ಷಿ..?
ಇನ್ನೇನು ಕೆಲ ದಿನ. ಈ ಹನ್ನೊಂದನೇ ತಾರೀಖಿಗೆ ದರ್ಶನ್ ಪರಪ್ಪನ ಅಗ್ರಹಾರದ ಪಾಲಾಗಿ ಎರಡು ತಿಂಗ್ಳಾಗಲಿವೆ. ಇಲ್ಲಿಯವರೆಗೆ ದರ್ಶನ್ ಅವರನ್ನು ಹೊರತರುವ ಪ್ರಯತ್ನಗಳು ನಡೆದಿವೆ. ಆದರೆ.. ಫಲಪ್ರದವಾಗಿಲ್ಲ. ಹೀಗಾಗಿಯೇ ದರ್ಶನ್ ಅವರ ಭಕ್ತಗಣ ಚಿಂತೆಯಲ್ಲಿ ಮುಳುಗಿದೆ. ಹೀಗಿರುವಾಗ ದರ್ಶನ್ ಬಟ್ಟೆಯ ಮೇಲೆ ಪಟ್ಟಣಗೆರೆ ಶೆಡ್‌ನಲ್ಲಿ ಕೊನೆಯುಸಿರೆಳೆದ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆಯಾಗಿವೆ ಎಂಬ ಸುದ್ದಿಯನ್ನು ಮಾಧ್ಯಮಗಳು ವರದಿ ಮಾಡಿವೆ.
ಹೌದು, ಅಸಲಿಗೆ ರೇಣುಕಾ ಸ್ವಾಮಿ ಹತ್ಯೆಯ ಪ್ರಕರಣದ ಬೆನ್ನತ್ತಿದ್ದ ಪೊಲೀಸರು, ಅನೇಕ ಸಾಕ್ಷಿಗಳನ್ನೂ ಸಂಗ್ರಹಿಸಿದ್ದರು. ಕೊಲೆಯಾದ ಮೇಲೆ ದರ್ಶನ್ ಅವರನ್ನು ಬಂಧಿಸಿದ ಪೊಲೀಸರು ಅವರ ಮನೆಯಲ್ಲಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ ಅನ್ನು ವಶಪಡಿಸಿಕೊಂಡಿದ್ದರು. ಕಲೆ ಹಾಕಿದ್ದ ಸಾಕ್ಷ್ಯಗಳನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಯಲಕ್ಕೆ ಕೂಡ ಕಳಿಸಿದ್ದರು. ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ದರ್ಶನ್ ಬಟ್ಟೆಯ ಮೇಲಿದ್ದ ರಕ್ತದ ಕಲೆ ರೇಣುಕಾ ಸ್ವಾಮಿಯದ್ದೇ ಅನ್ನುವುದು ಖಚಿತವಾಗಿದೆ ಅನ್ನುವುದು ಸದ್ಯದ ಬ್ರೇಕಿಂಗ್ ನ್ಯೂಸ್.

ಇನ್ನೂ .. ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಬಂಧನವಾದ ನಂತರವೂ, ಅನೇಕರು ದರ್ಶನ್ ಪರ ವಕಾಲತ್ತು ವಹಿಸಿದ್ದರು. ದರ್ಶನ್ ಈ ತರಹದ ಕೆಲಸ ಮಾಡುವ ವ್ಯಕ್ತಿಯಲ್ಲ ಎಂಬ ವಾದವನ್ನು ಮಾಡಿದ್ದರು. ಆದರೆ ಈಗ ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿಯ ರಕ್ತ ಬಿದ್ದಿರುವುದು ಖಚಿತವಾಗಿದೆ. ಹೀಗಾಗಿ ಈ ಸಾಕ್ಷ್ಯದಿಂದ ರೇಣುಕಾಸ್ವಾಮಿ ಕೊಲೆಯಲ್ಲಿ ಆರೋಪಿ ದರ್ಶನ್ ಅವರು ಭಾಗಿಯಾಗಿದ್ದಾರೆ ಎನ್ನುವ ಮಹತ್ವಪೂರ್ಣ ಸಾಕ್ಷ್ಯವನ್ನು ಪೊಲೀಸರು ಒದಗಿಸುವ ಸಾಧ್ಯತೆ ಇದೆ. ದರ್ಶನ್ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಉಳಿದಂತೆ ಎಫ್ಎಸ್ಎಲ್ ತಂಡದವರು ಜಪ್ತಿ ಮಾಡಿದ್ದ ಇನ್ನೂ ಹಲವು ವಸ್ತುಗಳ ವರದಿ ಬರುವುದು ಬಾಕಿ ಇದೆ. ಇನ್ನೂ ದರ್ಶನ್ ಬಂಧನವಾಗಿ ಎರಡು ತಿಂಗಳಾಗುತ್ತಾ ಬಂದರೂ ಕೂಡ, ಇಲ್ಲಿಯವರೆಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿ ಎಂದು ದರ್ಶನ್ ಪರ ವಕೀಲರು ಕಾಯುತ್ತಿದ್ದಾರೆ. ಚಾರ್ಜ್ ಶೀಟ್ ನಂತರ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಇನ್ನೂ.. ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರಿಗೆ 90 ದಿನಗಳ ಕಾಲಾವಕಾಶ ಇರುತ್ತೆ. ಒಂದು ವೇಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ, ಚಾರ್ಜ್ ಶೀಟ್ಸಲ್ಲಿಕೆಗೂ ಮುನ್ನ ಕೊಲೆ ಕೇಸ್ನಲ್ಲಿ ಬೇಲ್ ಸಿಗೋದಿಲ್ಲ.ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ದರ್ಶನ್ & ಗ್ಯಾಂಗ್ಗೆ ನ್ಯಾಯಾಂಗ ಬಂಧನವೇ ಗಟ್ಟಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ 4 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 14ರಂದು ಮುಕ್ತಾಯವಾಗಲಿದೆ.


Click it and Unblock the Notifications











