ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ; ಪವಿತ್ರಾ ಗೌಡ ಪ್ರಶ್ನೆ ಯಾರಿಗೆ ?
ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವರು ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಪವಿತ್ರಾ ಗೌಡ ಕೇವಲ ನಾಯಕಿ ಮಾತ್ರ ಅಲ್ಲ ದರ್ಶನ್ ಸಾಂಗತ್ಯ ಬೆಳೆಸಿಕೊಂಡ ನಂತರ ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದರು. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದರು.
ಆ ನಂತರ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಹೋಗಿ ಬಂದರು.ಇಂಥಾ ಪವಿತ್ರಾ ಗೌಡ ಸದ್ಯ ನಿರಾಳರಾಗಿದ್ದಾರೆ. ತಾವು ಜೈಲಿನಲ್ಲಿದ್ದಾಗ ಮುಚ್ಚಿದ್ದ ತಮ್ಮ 'ರೆಡ್ ಕಾರ್ಪೆಟ್ 777 ಸ್ಟುಡಿಯೋ'ಗೆ ಮರು ಜೀವ ನೀಡಿದ್ದಾರೆ.

ಇನ್ನು ಇಲ್ಲಿಯವರೆಗೆ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆಗಳು ದೊರೆಯುತ್ತಿದ್ದವು. ಹಬ್ಬ ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಡಿಸೈನರ್ ಸೀರೆ, ಲೆಹಂಗಾ ಸೇರಿದಂತೆ ಬಗೆ ಬಗೆಯ ಉಡುಗೆಗಳು ಸಿಗುತ್ತಿದ್ದವು. ಆದರೆ ಈಗ ತಮ್ಮ ಡಿಸೈನರ್ ಕಲೆಕ್ಷನ್‌ಗಳಲ್ಲಿ ಸೀರೆಯನ್ನು ಕೂಡ ಸೇರಿಸಿದ್ದಾರೆ. ಅತ್ಯಾಕರ್ಷಕ, ವೈವಿಧ್ಯಮಯ, ಡಿಸೈನರ್ ಸೀರೆಗಳನ್ನು ಕೂಡ ಪವಿತ್ರಾ ಗೌಡ ಮಾರುತ್ತಿದ್ದಾರೆ.
ಇದರ ನಡುವೆ ಬಿಡುವು ಮಾಡಿಕೊಂಡು ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಧಾರ್ಮಿಕ ಪ್ರವಾಸವನ್ನು ಮುಂದುವರೆಸಿದ್ದಾರೆ. ಸದ್ಯ ಮಂತ್ರಾಲಯಕ್ಕೆ ತೆರಳಿ ಶ್ರೀ ಗುರುರಾಘವೇಂದ್ರ ಸ್ವಾಮಿ ದರ್ಶನ ಪಡೆದು ಪುನೀತರಾಗಿದ್ದಾರೆ.
ಹೌದು, ಜೈಲಿಂದ ಹೊರ ಬಂದ ನಂತರ ಬೆಂಗಳೂರಿನ ಹಲವು ದೇವಸ್ಥಾನಕ್ಕೆ ತೆರಳಿದ್ದ ಪವಿತ್ರಾ ಗೌಡ ಆ ನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು ಶಿರಡಿಗೆ ತೆರಳಿದ್ದರು. ಸಾಯಿ ಬಾಬಾ ದರ್ಶನ ಪಡೆದಿದ್ದರು. ಇದಲ್ಲದೇ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ತೆರಳಿ ಮಹಾಕುಂಭ ಮೇಳದಲ್ಲಿ ಮಿಂದೆದ್ದಿದ್ದರು. ಶಾಹಿ ಸ್ನಾನ ಮಾಡಿದ್ದರು.
ಇದೀಗ ಪವಿತ್ರಾ ಗೌಡ ಮಂತ್ರಾಲಯಕ್ಕೆ ತೆರಳಿ ಗುರುರಾಯರ ದರ್ಶನವನ್ನು ಪಡೆದಿದ್ದಾರೆ. ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ರಾಘವೇಂದ್ರ ಸ್ವಾಮಿ ದೇಗುಲದ ವರಾಂಡದಲ್ಲಿ ಕುಳಿತುಕೊಂಡಿರುವ ಪವಿತ್ರಾ ಗೌಡ ಕ್ಯಾಮರಾ ಕಣ್ಣಿನಲ್ಲಿ ನಾನಾ ರೂಪದಲ್ಲಿ ಸೆರೆಯಾಗಿದ್ದಾರೆ. ಕೆಲ ಕಡೆ ಪವಿತ್ರಾ ಗೌಡ ಅವರ ಮುಖದಲ್ಲಿ ನಗು ಅರಳಿದ್ದರೆ ಇನ್ನು ಕೆಲ ಕಡೆ ಮುಖದಲ್ಲಿ ನಿರಾಸೆಯ ಭಾವನೆ ಇದೆ.
ಇನ್ನು ತಮ್ಮ ಫೋಟೊಗಳನ್ನು ಕೊಲಾಜ್ ಮಾಡಿ ವಿಡಿಯೋ ಹಂಚಿಕೊಂಡಿರುವ ಪವಿತ್ರಾ ಗೌಡ ವಿಡಿಯೋದ ಹಿನ್ನೆಲೆಯಲ್ಲಿ ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ.. ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೆ ಹೇಳು ರಾಘವೇಂದ್ರ.. ಎಲ್ಲಿದ್ದರೇನು ನಾನು ಹೇಗಿದ್ದರೇನು ನಾ ರಾಘವೇಂದ್ರ ಹಾಡನ್ನು ಹಾಕಿದ್ದಾರೆ.
ಸದ್ಯ ಪವಿತ್ರಾ ಗೌಡ ಅವರ ಈ ವಿಡಿಯೋಗೆ ಅನೇಕರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಬೇಜಾರು ಮಾಡಿಕೊಳ್ಳಬೇಡಿ ಮೇಡಂ ರಾಘವೇಂದ್ರ ಸ್ವಾಮಿ ಸದಾ ನಿಮ್ಮ ಜೊತೆ ಇರುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ಧಾರೆ. ಕೇವಲ 7 ಗಂಟೆಯಲ್ಲಿ 20,000ಕ್ಕೂ ಅಧಿಕ ಜನ ಪವಿತ್ರಾ ಗೌಡ ಅವರ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.
ಇನ್ನುಳಿದಂತೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಪವಿತ್ರಾ ಗೌಡ ಹಬ್ಬದ ಸಂಭ್ರಮದಲ್ಲಿ ಕೆಟ್ಟ ದೃಷ್ಟಿಯ ಬಗ್ಗೆ ಮಾತನಾಡಿದ್ದರು. ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ ಆದರೆ ನನ್ನ ಮುಟ್ಟೋಕಾಗಲ್ಲ ಎಂದು ಬರೆದುಕೊಂಡಿದ್ದರು. ಪವಿತ್ರಾ ಗೌಡ ಅವರ ಈ ಮಾರ್ಮಿಕ ಸಂದೇಶದ ಕುರಿತು ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು.
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ದರ್ಶನ್ ಮತ್ತು ಪವಿತ್ರಾ ಗೌಡಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೇರಿದೆ. ಇದೇ 21ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.


Click it and Unblock the Notifications











