ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಇಬ್ಬರಿಗೆ ಜಾಮೀನು ಮಂಜೂರು
ನಟ ದರ್ಶನ್ ಯಾವಾಗ ಜೈಲಿನಿಂದ ಹೊರ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ದರ್ಶನ್ ಪರ ವಕೀಲರು ಜಾಮೀನು ಕೋರಿ ಸೆಪ್ಟೆಂಬರ್ 21ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ಬಳಿಕ ಪದೇ ಪದೆ ಅರ್ಜಿ ವಿಚಾರಣೆ ಮುಂದೂಲಾಗಿತ್ತು. ಕೊನೆಗೆ ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಿದ್ದರು.
ನಟ ದರ್ಶನ್‌ಗೆ ಯಾಕೆ ಜಾಮೀನು ಕೊಡಬೇಕು ಎಂದು ಸಿವಿ ನಾಗೇಶ್ ಪ್ರಬಲವಾಗಿಯೇ ತಮ್ಮ ವಾದ ಮುಂದಿಟ್ಟಿದ್ದರು. ಚಾರ್ಜ್‌ಶೀಟ್‌ನಲ್ಲಿನ ಕೆಲ ವಿಚಾರಗಳನ್ನು ಪ್ರಸ್ತಾಪಿಸಿ ತಮ್ಮ ಕಕ್ಷಿದಾರರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದಿದ್ದರು. ಪೊಲೀಸರ ತನಿಖೆ ಬಗ್ಗೆಯೇ ನಾಗೇಶ್ ತರಾಟೆಗೆ ತೆಗೆದುಕೊಂಡಿದ್ದರು. ಪ್ರಕರಣದ ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂದು ವಾದಿಸಿದ್ದರು.

ಸಿವಿ ನಾಗೇಶ್ ವಾದದ ಬಳಿಕ ಪೊಲೀಸರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ದರ್ಶನ್ ಪರ ವಕೀಲರು ಎತ್ತಿದ ಪ್ರಶ್ನೆಗಳಿಗೆಲ್ಲಾ ಅವರು ಉತ್ತರ ಕೊಟ್ಟರು. ಪ್ರಕರಣ ಸಂಬಂಧ ದರ್ಶನ್ ಪರ ವಕೀಲರು ಅನುಮಾನಗಳಿಗೆಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಪಷ್ಟನೆ ಕೊಟ್ಟಿದ್ದರು. ಘಟನೆ ನಡೆದ ಸಮಯದಲ್ಲಿ ದರ್ಶನ್ ಸ್ಥಳದಲ್ಲೇ ಇದ್ದರು ಎನ್ನುವುದಕ್ಕೆ ಸಾಕಷ್ಟ ಸಾಕ್ಷ್ಯಗಳಿವೆ ಎಂದು ಹೇಳಿದ್ದರು.
ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 14) ಕೋರ್ಟ್ ಆದೇಶ ಪ್ರಕಟಿಸಿದೆ. ಎ1 ಪವಿತ್ರಾ ಗೌಡ ಮತ್ತು ಎ2 ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿ ಕೋರ್ಟ್ ತೀರ್ಪು ನೀಡಿದೆ. ಜೊತೆಗೆ ಎ11 ನಾಗರಾಜ್, ಎ12 ಲಕ್ಷ್ಮಣ್ ಜಾಮೀನು ಅರ್ಜಿ ಸಹ ವಜಾ ಆಗಿದೆ. ಎ8 ರವಿಶಂಕರ್ ಹಾಗೂ ಎ13 ದೀಪಕ್‌ಗೆ ಕೋರ್ಟ್ ಜಾಮೀನು ನೀಡಲು ಒಪ್ಪಿದೆ. ನಟ ದರ್ಶನ್ ಜಾಮೀನು ಅರ್ಜಿ ಬಗ್ಗೆ ಇನ್ನಷ್ಟೇ ಆದೇಶ ಹೊರ ಬೀಳಲಿದೆ.
ಜಾಮೀನು ಅರ್ಜಿ ತೀರ್ಪು ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೂ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಟೆನ್ಷನ್‌ನಲ್ಲಿ ಇದ್ದರು ಎಂದು ವರದಿಯಾಗಿದೆ. ಬೆಳಗ್ಗೆ ವೈದ್ಯರು ನಟ ದರ್ಶನ್ ಆರೋಗ್ಯ ತಪಾಸಣೆಯನ್ನು ಮಾಡಿದ್ದರು. ಇದೀಗ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲು ವಾಸ ಮುಂದುವರೆದಿದೆ. ಸೆಷನ್ಸ್ ಕೋರ್ಟ್ ದರ್ಶನ್‌ಗೆ ಶಾಕ್ ನೀಡಿದ್ದು ಮುಂದೆ ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಸದ್ಯಕ್ಕೆ ದರ್ಶನ್ ಮತ್ತಷ್ಟು ದಿನ ಜೈಲಿನಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.


Click it and Unblock the Notifications











