ಮನೆಯ ಅನ್ನದ ಅಗಳಿಗಾಗಿ ಅಂಗಲಾಚಿದ ಪವಿತ್ರಾ ಗೌಡಗೆ ಶಾಕ್ ನೀಡಿದ ಕೋರ್ಟ್ ; ಆದೇಶದಲ್ಲಿ ಮಹತ್ವದ ಬದಲಾವಣೆ
ಬದುಕಿನಲ್ಲಿ ಯಾವತ್ತು ಅತಿಯಾದ ನಂಬಿಕೆ.. ಪ್ರೀತಿ.. ವಿಶ್ವಾಸ ಒಳ್ಳೆಯದಲ್ಲ. ಯಾಕೆಂದರೆ ಅತಿಯಾದ ನಂಬಿಕೆ ಮತ್ತು ಪ್ರೀತಿ ಕೆಲ ಒಮ್ಮೆ ಅಪಾರವಾದ ನೋವು ಕೊಡುತ್ತೆ. ಅತಿ ಎನ್ನುವುದೇ ಕೆಲ ಒಮ್ಮೆ ಅತಿಯಾಗಿ ನೋಯಿಸುತ್ತೆ. ಇದಕ್ಕೆ ಸದ್ಯದ ಉದಾಹರಣೆ ಪವಿತ್ರಾ ಗೌಡ. ಹೌದು.. ಎಲ್ಲರಿಗೆ ಗೊತ್ತಿರುವಂತೆ ಮತ್ತೂ ಈಗಾಗಲೇ ಜಗಜ್ಜಾಹೀರಾದಂತೆ ದರ್ಶನ್ ಸಖ್ಯದಿಂದ ಅಖಂಡ ಹತ್ತು ವರ್ಷ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದವರು ಪವಿತ್ರಾ ಗೌಡ.
ಆದರೆ.. ಈಗ ಇದೇ ಪವಿತ್ರಾ ಗೌಡ ಸಹವಾಸ ಮಾಡಿದ್ದಕ್ಕೆ ದರ್ಶನ್ ಮತ್ತೊಮ್ಮೆ ವನವಾಸಕ್ಕೆ ತೆರಳಿದ್ದಾರೆ. ಇಲ್ಲಿಯೂ ಕೂಡ ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಕೂಡ ದರ್ಶನ್ ಅವರನ್ನು ಹಿಂಬಾಲಿಸಿದ್ದಾರೆ. 152 ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ. ಕಳೆದ ಬಾರಿ 189 ದಿನ ಸೆರೆವಾಸ ಅನುಭವಿಸಿ ಹೊರ ಬಂದಿದ್ದ ಪವಿತ್ರಾ ಗೌಡ ಇಂತಹದ್ದೊಂದು ದಿನ ಮತ್ತೆ ತಮ್ಮ ಬದುಕಿನಲ್ಲಿ ಬರುತ್ತೆ ಎಂದು ಪವಿತ್ರಾ ಗೌಡ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಬದಲಿಗೆ ಇನ್ನೂ ತಮ್ಮನ್ನು ''ಕತ್ತಲ ಕೋಣೆ''ಯೊಳಗೆ ಯಾರು ತಳ್ಳಲಾರರು ಎಂದೇ ನಂಬಿದ್ದರು. ಈ ನಂಬಿಕೆಯಲ್ಲಿಯೇ ಮುಖದ ತುಂಬಾ ನಗು ತುಂಬಿಕೊಂಡು ಓಡಾಡುತ್ತಿದ್ದರು. ಸಾರ್ವತ್ರಿಕವಾಗಿ ಹಿಂದೆ ಎಂದೂ ತೋರಿಸದ ದೇವರ ಮೇಲಿನ ತಮ್ಮ ಭಕ್ತಿಯನ್ನು ತೋರಿಸಲು ಶುರು ಮಾಡಿದ್ದರು. ಜಾಮೀನು ರದ್ದಾಗುವ ತೀರ್ಪು ಬರುವ ಕೆಲ ಗಂಟೆಯ ಮೊದಲು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ''ಸತ್ಯ ಎಲ್ಲಕ್ಕಿಂತ ಶಕ್ತಿಯುತವಾದುದ್ದು. ನ್ಯಾಯ ಸಿಕ್ಕೇ ಸಿಗುತ್ತದೆ'' ಎಂದು ಬರೆದುಕೊಂಡಿದ್ದರು.
ಇಷ್ಟೇ ಅಲ್ಲ ಜಾಮೀನು ರದ್ದು ಮಾಡಬಾರದು, ನಿಮ್ಮ ಲಿಖಿತ ವಾದ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ಕೂಡ ಪವಿತ್ರಾ ಗೌಡ, ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ವಯಸ್ಸಾದ ಪೋಷಕರಿದ್ದಾರೆ. ಅವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದೇ. ಹೀಗಾಗಿ, ಜಾಮೀನು ರದ್ದುಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.

ಆದರೆ ಮಾಡಿದ ಪಾಪ ಸುಮ್ಮನೆ ಬಿಡುತ್ತಾ ? ಪವಿತ್ರಾ ಗೌಡ ನಂಬಿಕೆ ಹುಸಿಯಾಯ್ತು. ಪವಿತ್ರಾ ಗೌಡ ಮತ್ತೆ ಸೆರೆವಾಸ ಅನುಭವಿಸುವಂತಾಯ್ತು. ಇಂಥಾ ಪವಿತ್ರಾ ಗೌಡ ಕೆಲ ದಿನಗಳ ಹಿಂದೆ ಮನೆ ಊಟ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಜೈಲಿನ ಊಟ ಸರಿ ಇಲ್ಲ ಎಂದು ಹೇಳಿದ್ದರು. ಜೈಲಿನಲ್ಲಿ ದಿನನಿತ್ಯ ಊಟ ಮಾಡಿ ಮೈಮೇಲೆ ಗುಳ್ಳೆಗಳಾಗಿವೆ, ಚರ್ಮರೋಗವಾಗಿದೆ ಎಂದು ಅಲವತ್ತುಕೊಂಡಿದ್ದರು. ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದರು.
ಪವಿತ್ರಾ ಗೌಡ ಅವರ ಈ ವಾದವನ್ನು ಕೇಳಿದ್ದ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ಮನೆ ಊಟಕ್ಕೆ ಅವಕಾಶ ನೀಡಿತ್ತು. ಆದರೆ ಇದಕ್ಕೆ ಜೈಲಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜೈಲಿನ ಊಟ ರುಚಿಯಾಗಿದೆ ಶುಚಿಯಾಗಿದೆ ಎಂದು ಹೇಳಿದ್ದರು. ಇಲ್ಲಿಯವರೆಗೆ ಜೈಲಿನ ಊಟ ತಿಂದು ಯಾರಿಗೂ ಏನೂ ಆಗಿಲ್ಲ, ಯಾರು ಅಸ್ವಸ್ತರಾಗಿಲ್ಲ ಎಂದು ಹೇಳಿದ್ದರು. ಪವಿತ್ರಾ ಗೌಡ ಅವರಿಗೆ ಪ್ರತೈಕವಾಗಿ ಮನೆ ಊಟ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.
ಜೈಲಾಧಿಕಾರಿಗಳ ಈ ಪ್ರತಿ ವಾದದಿಂದಾಗಿ ಈಗ 57 ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಬದಲಿಸಿದೆ. ಆದೇಶದಲ್ಲಿ ಮಾರ್ಪಾಡು ಮಾಡಿದೆ. ಪ್ರತಿ ದಿನದ ಬದಲು ವಾರಕ್ಕೆ ಒಮ್ಮೆ ಮಾತ್ರ ಊಟ ನೀಡುವಂತೆ ಆದೇಶಿಸಿದೆ. ಈ ಮೂಲಕ ಮನೆಯ ಅನ್ನದ ಅಗಳಿಗಾಗಿ ಅಂಗಲಾಚಿದ್ದ ಪವಿತ್ರಾ ಗೌಡಗೆ ಶಾಕ್ ನೀಡಿದೆ.


Click it and Unblock the Notifications











